ADVERTISEMENT

ಪ್ರಶ್ನೋತ್ತರ: ಟಿಡಿಎಸ್ ಮಾಹಿತಿಯನ್ನು ಬಾಡಿಗೆದಾರರಿಂದ ಹೇಗೆ ಪಡೆದುಕೊಳ್ಳಬಹುದು?

ಪ್ರಮೋದ ಶ್ರೀಕಾಂತ ದೈತೋಟ
Published 30 ಜನವರಿ 2026, 0:30 IST
Last Updated 30 ಜನವರಿ 2026, 0:30 IST
   

ಪ್ರಶ್ನೆ: ನಾನು ವಾಸವಾಗಿರುವ ಮನೆಯ ಕೆಳ ಮಹಡಿಯನ್ನು ವಾಣಿಜ್ಯ ಬಳಕೆಗೆ ತಿಂಗಳಿಗೆ ₹55,000ಕ್ಕೆ ಬಾಡಿಗೆ ಕೊಟ್ಟಿರುತ್ತೇನೆ. ಬಾಡಿಗೆದಾರರು ಬಾಡಿಗೆಯಲ್ಲಿ ಶೇ 10ರಷ್ಟು ಟಿಡಿಎಸ್ ಕಳೆದು ಹಣ ಕೊಡುತ್ತಿದ್ದಾರೆ. ನನ್ನ ಪ್ರಶ್ನೆ ಏನೆಂದರೆ: ಬಾಡಿಗೆದಾರರು ಕಡಿತಗೊಳಿಸಿದ ಟಿಡಿಎಸ್ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡಿರುತ್ತಾರೆಯೇ ಎಂಬುದನ್ನು ನಾನು ಹೇಗೆ ಖಚಿತಪಡಿಸಿಕೊಳ್ಳಬಹುದು? ಟಿಡಿಎಸ್ ಕಡಿತ ಮತ್ತು ಸರ್ಕಾರಕ್ಕೆ ಪಾವತಿಸಿದ ಮಾಹಿತಿಯನ್ನು ಬಾಡಿಗೆದಾರರಿಂದ ಹೇಗೆ ಪಡೆದುಕೊಳ್ಳಬಹುದು?

ನಾನು ಈ ಬಾಡಿಗೆ ಹಣದಲ್ಲಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24(ಎ) ಆಧಾರದ ಮೇಲೆ ಶೇ 30ರಷ್ಟು ಕಳೆದು ತೆರಿಗೆ ಸಲ್ಲಿಸಬಹುದೇ? ನಾನು ಕಳೆದ ವರ್ಷದಿಂದ ಆದಾಯ ತೆರಿಗೆಯನ್ನು ಹೊಸ ತೆರಿಗೆ ಪದ್ಧತಿಯಲ್ಲಿ ಸಲ್ಲಿಸುತ್ತಿದ್ದೇನೆ – ಶ್ರೀನಿವಾಸ ಎಸ್., ನಾಗರಬಾವಿ, ಬೆಂಗಳೂರು

ಉತ್ತರ: ನಿಮ್ಮ ಮನೆಯ ಕೆಳ ಮಹಡಿಯನ್ನು ವಾಣಿಜ್ಯ ಬಳಕೆಗೆ ಬಾಡಿಗೆ ನೀಡಿರುವ ಸಂದರ್ಭದಲ್ಲಿ, ಬಾಡಿಗೆದಾರರು ಅಥವಾ ಆ ಸಂಸ್ಥೆ ಬಾಡಿಗೆ ಮೊತ್ತದಿಂದ ಶೇ 10ರಷ್ಟು ಮೊತ್ತವನ್ನು ಟಿಡಿಎಸ್ ಮಾಡುವುದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194-ಐ ಅಡಿಯಲ್ಲಿ ಅಗತ್ಯ. ತಿಂಗಳಿಗೆ ₹50 ಸಾವಿರ ಬಾಡಿಗೆ ಮೀರುವ ಕರಾರು ಒಪ್ಪಂದ ಇದ್ದ ಸಂದರ್ಭದಲ್ಲಿ ಇದು ಅನ್ವಯಿಸುತ್ತದೆ. ಆದರೆ ಟಿಡಿಎಸ್ ಕಡಿತಗೊಳಿಸಿದರಷ್ಟೇ ಸಾಕಾಗುವುದಿಲ್ಲ; ಅದನ್ನು ಸರ್ಕಾರಕ್ಕೆ ಸರಿಯಾಗಿ ಸಂದಾಯ ಮಾಡುವುದೂ ಬಹಳ ಮುಖ್ಯ. ಇದನ್ನು ಖಚಿತಪಡಿಸಿಕೊಳ್ಳಲು ಕೆಲವು ಅಗತ್ಯ ಕ್ರಮಗಳನ್ನು ಬಾಡಿಗೆದಾರರು ತೆರಿಗೆ ಇಲಾಖೆಗೆ ವರದಿ ಮಾಡಬೇಕಾಗುತ್ತದೆ.

ADVERTISEMENT

ಬಾಡಿಗೆದಾರರು ಕಡಿತಗೊಳಿಸಿದ ಟಿಡಿಎಸ್ ಮೊತ್ತವನ್ನು ಸರ್ಕಾರಕ್ಕೆ ಮುಂದಿನ ತಿಂಗಳ 7ನೆಯ ತಾರೀಕಿನೊಳಗೆ ಪಾವತಿಸಬೇಕು ಹಾಗೂ ಅವರು ತ್ರೈಮಾಸಿಕವಾಗಿ ಈ ಟಿಡಿಎಸ್ ವಿವರ ಸಲ್ಲಿಸಬೇಕಾಗುತ್ತದೆ. ಈ ವಿವರದಲ್ಲಿ ಬಾಡಿಗೆದಾರರ ಮಾಹಿತಿ, ನಿಮ್ಮ ಪ್ಯಾನ್, ಕಡಿತಗೊಂಡ ಮೊತ್ತ ಮತ್ತು ಪಾವತಿ ವಿವರಗಳು ದಾಖಲಾಗುತ್ತವೆ. ಈ ಮಾಹಿತಿಯ ಆಧಾರದಲ್ಲಿ, ನಿಮ್ಮ ಪ್ಯಾನ್‌ಗೆ ಸಂಬಂಧಿಸಿದಂತೆ ‘ಫಾರ್ಮ್ 26ಎ ಎಸ್’ ಹಾಗೂ ವಾರ್ಷಿಕ ಮಾಹಿತಿ ವರದಿಯಲ್ಲಿ (ಎಐಎಸ್) ಟಿಡಿಎಸ್ ಜಮಾ ಸ್ವಯಂಚಾಲಿತವಾಗಿ ಪ್ರತಿಬಿಂಬಿತ ಆಗುತ್ತದೆ. ಆದ್ದರಿಂದ, ನೀವು ಪ್ರತಿ ಮೂರು ತಿಂಗಳಿಗೊಮ್ಮೆ ನಿಮ್ಮ ಆದಾಯ ತೆರಿಗೆ ಖಾತೆಗೆ ಲಾಗಿನ್ ಆಗಿ ‘26 ಎ ಎಸ್’ ಪರಿಶೀಲಿಸುವುದರ ಮೂಲಕ, ಟಿಡಿಎಸ್ ಕಡಿತ ಹಾಗೂ ಸರ್ಕಾರಕ್ಕೆ ಪಾವತಿ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಜೊತೆಗೆ, ಬಾಡಿಗೆದಾರರಿಂದ ಫಾರ್ಮ್ 16ಎ (ಟಿಡಿಎಸ್ ಪ್ರಮಾಣಪತ್ರ) ಪಡೆಯುವುದು ನಿಮ್ಮ ಕಾನೂನುಬದ್ಧ ಹಕ್ಕಾಗಿದೆ.

ಯಾವುದೇ ಕಾರಣಕ್ಕೆ ಟಿಡಿಎಸ್ ಕಡಿತಗೊಂಡಿದ್ದರೂ ಸರ್ಕಾರಕ್ಕೆ ಪಾವತಿಸದಿದ್ದರೆ, ಅಥವಾ ‘26 ಎ ಎಸ್’ನಲ್ಲಿ ಪ್ರತಿಬಿಂಬಿತ ಆಗದಿದ್ದರೆ, ತೆರಿಗೆ ಕಾಯ್ದೆಯ ಪ್ರಕಾರ ಬಾಡಿಗೆದಾರನೇ ಜವಾಬ್ದಾರನಾಗುತ್ತಾನೆ. ಈ ಸಂದರ್ಭದಲ್ಲಿ, ನೀವು ಲಿಖಿತವಾಗಿ ಬಾಡಿಗೆದಾರರಿಗೆ ಸೂಚನೆ ನೀಡುವುದು, ಮತ್ತೂ ಪರಿಹಾರ ಕಾಣದಿದ್ದರೆ, ಅನಿವಾರ್ಯವಾಗಿ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರುವಂತಹ ಕಾನೂನು ಮಾರ್ಗಗಳು ಲಭ್ಯವಿವೆ. ಇನ್ನು ನೀವು ನಿಮ್ಮ ಕಟ್ಟಡವನ್ನು ಬಾಡಿಗೆಗೆ ನೀಡಿರುವ ಕಾರಣ ಸೆಕ್ಷನ್ 24(ಎ) ರ ಅಡಿಯಲ್ಲಿ ಶೇ 30ರಷ್ಟು ನಿಶ್ಚಿತ ಕಡಿತ ನಿಮಗೆ ಯಾವುದೇ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿದರೂ ಲಭ್ಯ ಇರುತ್ತದೆ.

ಪ್ರಶ್ನೆ: ನಾನು ಕುಣಿಗಲ್ ತಾಲ್ಲೂಕು (ತುಮಕೂರು ಜಿಲ್ಲೆ) ಹುಲಿಯೂರುದುರ್ಗ ಸಮೀಪದಲ್ಲಿರುವ ನನ್ನ 1.5 ಎಕರೆ ಕೃಷಿ ಜಮೀನನ್ನು ಕಳೆದ ವರ್ಷ ಮಾರಾಟ ಮಾಡಿರುತ್ತೇನೆ. ಈ ಹಿಂದೆ ನಿಮ್ಮ ಅಂಕಣದಲ್ಲಿ ಹಳ್ಳಿಯ ಕೃಷಿ ಜಮೀನು ಮಾರಾಟದ ವ್ಯವಹಾರಕ್ಕೆ ಬಂಡವಾಳ ವೃದ್ಧಿ ತೆರಿಗೆ ಅನ್ವಯಿಸುವುದಿಲ್ಲ ಎಂಬುದಾಗಿ ಓದಿದ ನೆನಪು. ಇದು ಈಗಲೂ ಅನ್ವಯಿಸುವುದೇ ಅಥವಾ ಆದಾಯ ತೆರಿಗೆ ಕಾಯ್ದೆಯಲ್ಲಿ ಯಾವುದಾದರೂ ಬದಲಾವಣೆ ಆಗಿದೆಯೇ? ಇದು ಹಳ್ಳಿಯ ಕೃಷಿ ಜಮೀನಿನ ವ್ಯವಹಾರವೆಂದು ಆದಾಯ ತೆರಿಗೆ ಇಲಾಖೆಗೆ ದೃಢೀಕರಿಸಲು ಕಾಯ್ದೆಯ ಅನ್ವಯ ಯಾವ ದಾಖಲೆಗಳು ಬೇಕಾಗುತ್ತವೆ? ಈ ಬಗ್ಗೆ ತಿಳಿಸುವಂತೆ ವಿನಂತಿ –ಮನೋಜ್ ಎಸ್., ಬೆಂಗಳೂರು

ಉತ್ತರ: ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಕೃಷಿ ಜಮೀನುಗಳನ್ನು ‘ಬಂಡವಾಳ ಆಸ್ತಿ’ಯ ವ್ಯಾಖ್ಯೆಯಲ್ಲಿ ಪರಿಗಣಿಸಲಾಗುವುದಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 2(14) ಅಡಿಯಲ್ಲಿ, ನಗರ ಅಥವಾ ಅಧಿಸೂಚಿತ ಪ್ರದೇಶಗಳ ವ್ಯಾಪ್ತಿಗೆ ಒಳಪಡದ ಗ್ರಾಮೀಣ ಕೃಷಿ ಜಮೀನುಗಳು ಈ ವಿನಾಯಿತಿಗೆ ಒಳಪಡುವುದರಿಂದ, ಅವುಗಳ ಮಾರಾಟದಿಂದ ಸಿಗುವ ಲಾಭಕ್ಕೆ ಸಾಮಾನ್ಯವಾಗಿ ಬಂಡವಾಳ ವೃದ್ಧಿ ತೆರಿಗೆ ಅನ್ವಯಿಸುವುದಿಲ್ಲ. ಅಂದರೆ, ಜಮೀನು ನಗರ ಪಾಲಿಕೆ, ನಗರಸಭೆ ಅಥವಾ ಕಂಟೋನ್ಮೆಂಟ್ ವ್ಯಾಪ್ತಿಯೊಳಗೆ ಇಲ್ಲದಿದ್ದರೆ ಹಾಗೂ ಆದಾಯ ತೆರಿಗೆ ಕಾಯ್ದೆಯಲ್ಲಿ ಸೂಚಿಸಿರುವ ದೂರದ ಮಿತಿಗಳೊಳಗೆ ಬಾರದಿದ್ದರೆ, ಅಂತಹ ಜಮೀನಿನ ಮಾರಾಟ ಲಾಭ ತೆರಿಗೆಯಿಂದ ಮುಕ್ತವಾಗಿರುತ್ತದೆ.

ನಿಮ್ಮ ಕೃಷಿ ಜಮೀನು, ನಗರೀಕರಣಗೊಂಡ ಪ್ರದೇಶದ ವ್ಯಾಪ್ತಿಗೆ ಒಳಪಡದಿದ್ದಲ್ಲಿ, ಇದನ್ನು ಗ್ರಾಮೀಣ ಕೃಷಿ ಜಮೀನು ಎಂದು ಪರಿಗಣಿಸಬಹುದು. ಆದರೆ, ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಸ್ಪಷ್ಟವಾಗಿ ತೋರಿಸುವ ಜವಾಬ್ದಾರಿ ತೆರಿಗೆದಾರರ ಮೇಲಿದೆ. ಆದ್ದರಿಂದ, ಜಮೀನು ಮಾರಾಟದ ಮೊತ್ತವನ್ನು ಆದಾಯ ತೆರಿಗೆ ವಿವರದಲ್ಲಿ ಉಲ್ಲೇಖಿಸುವಾಗ, ಇದು ತೆರಿಗೆಯಿಂದ ವಿನಾಯಿತಿಯೋಗ್ಯ ವ್ಯವಹಾರ ಎಂಬುದನ್ನು ಸರಿಯಾಗಿ ವಿವರಿಸುವುದು ಮುಖ್ಯ.

ಈ ವ್ಯವಹಾರವನ್ನು ಗ್ರಾಮೀಣ ಕೃಷಿ ಜಮೀನು ಮಾರಾಟವೆಂದು ಘೋಷಿಸುವ ಮೊದಲು, ಮಾರಾಟದ ಇತ್ತೀಚಿನ ಎರಡು ವರ್ಷಗಳಲ್ಲಿ ಕೃಷಿ ಮಾಡಿರುವ ದಾಖಲೆಯಾಗಿ ಪಹಣಿ ಹೊಂದಿರಬೇಕು. ಇಂತಹ ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಂಡರೆ, ಭವಿಷ್ಯದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ವಿಚಾರಣೆ ಬಂದರೂ ಕಾನೂನುಬದ್ಧವಾಗಿ ಸಮರ್ಪಕ ಉತ್ತರ ನೀಡಲು ಸಹಕಾರಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.