ಬೆಂಗಳೂರು: ಸೇಲ್ಸ್‌ಫೋರ್ಸ್ ವೆಂಚರ್ಸ್, ಲೈಟ್‍ಸ್ಪೀಡ್ ಇಂಡಿಯಾ ಪಾರ್ಟ್‍ನರ್ಸ್, ಖೈತಾನ್ ಆ್ಯಂಡ್ ಕೋ ಕಂಪನಿಯಿಂದ ಇತ್ತೀಚೆಗೆ ಎ.ಐ ಚಾಲಿತ ನವೋದ್ಯಮಗಳ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುವುದಕ್ಕೆ ಸಂಬಂಧಿಸಿದಂತೆ ‘ಎ.ಐ ಪಿಚ್‌ಫೀಲ್ಡ್’ ಸ್ಪರ್ಧೆ ನಡೆಯಿತು.
ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಟ್ರೂಪಿಯರ್ ಎ.ಐ ನವೋದ್ಯಮವು ಪ್ರಶಸ್ತಿಗೆ ಭಾಜನವಾಗಿದೆ.
ಅಂತಿಮ ಸುತ್ತಿನಲ್ಲಿ ನೆಕ್ಟರ್ ಎ.ಐ, ಆಲ್ಟಿಯಸ್, ಇನ್ಸ್ಪೆಕ್ ಹಾಗೂ ಮ್ಯಾಕ್ಸಿಮೋರ್ ನವೋದ್ಯಮಗಳು ಕೂಡ ಆಯ್ಕೆಯಾಗಿದ್ದವು. ಅಂತಿಮವಾಗಿ ಪ್ರಶಸ್ತಿಯು ಟ್ರೂಪಿಯರ್ ನವೋದ್ಯಮದ ಪಾಲಾಗಿದೆ. ಇದಕ್ಕೆ ಸೇಲ್ಸ್‌ಫೋರ್ಸ್ ವೆಂಚರ್ಸ್‌ನಿಂದ ₹86 ಲಕ್ಷ ಹೂಡಿಕೆಯ ನೆರವು ನೀಡಲಾಯಿತು.
ಟ್ರೂಪಿಯರ್ ನವೋದ್ಯಮವು ಮಲ್ಟಿಮಾಡೆಲ್ ಜನರೇಟಿವ್ ಎ.ಐ ವೇದಿಕೆಯಾಗಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ಹೊಸತನಕ್ಕಾಗಿ ಪ್ರಸಿದ್ಧಿ ಪಡೆದಿದೆ. ಈ ಹಣಕಾಸಿನ ನೆರವು ಮುಂದಿನ ಪೀಳಿಗೆಯ ಎ.ಐ ಉದ್ಯಮಿಗಳನ್ನು ಸಶಕ್ತಗೊಳಿಸಲು ಸಹಕಾರಿಯಾಗಲಿದೆ ಎಂದು ಸೇಲ್ಸ್‌ಫೋರ್ಸ್ ಕಂಪನಿ ತಿಳಿಸಿದೆ.
‘ಪಿಚ್‌ಫೀಲ್ಡ್ ಸ್ಪರ್ಧೆಯು ಹೊಸ ಆಲೋಚನೆಗಳೊಂದಿಗೆ ನವೋದ್ಯಮಗಳನ್ನು ಸಬಲೀಕರಣಗೊಳಿಸುವ ನಮ್ಮ ಬದ್ಧತೆಯ ಪ್ರತಿಬಿಂಬವಾಗಿದೆ’ ಎಂದು ಸೇಲ್ಸ್‌ಫೋರ್ಸ್ ಇಂಡಿಯಾ ಅಧ್ಯಕ್ಷೆ ಮತ್ತು ಸಿಇಒ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.
‘ಎ.ಐ ಪಿಚ್‌ಫೀಲ್ಡ್ ಸ್ಪರ್ಧೆಯಲ್ಲಿ ವಿಜೇತರಾಗಿರುವುದು ರೋಮಾಂಚನಗೊಳಿಸಿದೆ. ಇದು ಜನರೇಟಿವ್ ಎ.ಐ ಆವಿಷ್ಕಾರ ಪ್ರದರ್ಶಿಸಲು ಅವಕಾಶ ಒದಗಿಸಿದೆ’ ಎಂದು ಟ್ರೂಪಿಯರ್ ಎ.ಐ ಸಂಸ್ಥಾಪಕರಾದ ಶಿವಾಲಿ ಗೋಯಲ್ ಹೇಳಿದ್ದಾರೆ.
ಈ ವೇಳೆ ಸೇಲ್ಸ್‌ಫೋರ್ಸ್ ಇಂಡಿಯಾದ (ಕಾರ್ಯಾಚರಣೆ ಮತ್ತು ತಂತ್ರಜ್ಞಾನ) ವ್ಯವಸ್ಥಾಪಕ ನಿರ್ದೇಶಕ ಸಂಕೇತ್ ಅಟಲ್, ಸೇಲ್ಸ್‌ಫೋರ್ಸ್ ವೆಂಚರ್ಸ್ ನಿರ್ದೇಶಕ ಕಾರ್ತಿಕ್ ಗುಪ್ತಾ, ಲೈಟ್‌ಸ್ಪೀಡ್ ಪಾಲುದಾರ ಹೇಮಂತ್ ಮಹಾಪಾತ್ರ, ಖೈತಾನ್ ಪನಿಯ ಪಾಲುದಾರರಾದ ಮೋನಿಕಾ ಶ್ರೀವಾಸ್ತವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.