ADVERTISEMENT

ಸಂವೇದಿ ಸೂಚ್ಯಂಕ ಉತ್ತಮ ಗಳಿಕೆ

ಪಿಟಿಐ
Published 16 ಜೂನ್ 2018, 10:56 IST
Last Updated 16 ಜೂನ್ 2018, 10:56 IST
ಸಂವೇದಿ ಸೂಚ್ಯಂಕ ಉತ್ತಮ ಗಳಿಕೆ
ಸಂವೇದಿ ಸೂಚ್ಯಂಕ ಉತ್ತಮ ಗಳಿಕೆ   

ಮುಂಬೈ:ವಾರದ ವಹಿವಾಟು ಚಂಚಲವಾಗಿದ್ದರು ಸಹ ದೇಶದ ಷೇರುಪೇಟೆಗಳ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡುಕೊಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 302 ಅಂಶ ಏರಿಕೆ ಕಂಡು 35,227 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 91 ಅಂಶ ಹೆಚ್ಚಾಗಿ 10,696 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವು 16 ತಿಂಗಳ ಕನಿಷ್ಠ ಮಟ್ಟದಿಂದ ಚೇತರಿಕೆ ಕಂಡಿರುವುದು ಏರುಮುಖ ವಹಿವಾಟಿಗೆ ನೆರವಾಯಿತು ಎಂದು ತಜ್ಞರು ಹೇಳಿದ್ದಾರೆ.

ಚಂಚಲ ವಹಿವಾಟು: ದೇಶಿ ಮತ್ತು ವಿದೇಶಿ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಷೇರುಪೇಟೆಯಲ್ಲಿ ವಾರವಿಡೀ ಚಂಚಲ ವಹಿವಾಟು ನಡೆಯಿತು.

ಜಾಗತಿಕ ಮೌಲ್ಯಮಾಪನ ಸಂಸ್ಥೆ ಮೂಡಿಸ್‌, ಭಾರತದ ಜಿಡಿಪಿ ವೃದ್ಧಿ ದರವನ್ನು ಶೇ 7.5 ರಿಂದಶೇ 7.3ಕ್ಕೆ ತಗ್ಗಿಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಹೆಚ್ಚು ಗಮನ ನೀಡಿದ್ದಾರೆ. ಈ ಅಂಶಗಳು ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಸಿ ಚಂಚಲ ವಹಿವಾಟಿಗೆ ಕಾರಣವಾದವು ಎಂದು ಮಾರುಕಟ್ಟೆ ಪರಿಣತರು ವಿಶ್ಲೇಷಣೆ ಮಾಡಿದ್ದಾರೆ.

ಆದರೆ, ದೇಶಿ ಆರ್ಥಿಕತೆಯು 2017–18ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 7.7ರಷ್ಟು ಪ್ರಗತಿ ದಾಖಲಿಸಿದ್ದು, ಏಳು ತ್ರೈಮಾಸಿಕಗಳಲ್ಲಿನ ಗರಿಷ್ಠ ಮಟ್ಟ ಇದಾಗಿದೆ. ಇದು ವಹಿವಾಟನ್ನು ಚೇತರಿಸಿಕೊಳ್ಳುವಂತೆ ಮಾಡಿದೆ.

ಅಮೆರಿಕ ಮತ್ತು ಚೀನಾ ವಾಣಿಜ್ಯ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಇದರ ಜತೆಗೆ ಅಮೆರಿಕವು ಯುರೋಪ್‌ ಒಕ್ಕೂಟ ಮತ್ತು ಮೆಕ್ಸಿಕೋದಿಂದ ಆಮದಾಗುತ್ತಿರುವ ಉಕ್ಕು ಮತ್ತು ಅಲ್ಯುಮಿನಿಯಂಗೆ ಆಮದು ಸುಂಕ ವಿಧಿಸಿರುವುದು ಈ ಪ್ರದೇಶಗಳಲ್ಲಿಯೂ ವಾಣಿಜ್ಯ ಸಮರದ ಆತಂಕವನ್ನು ಮೂಡಿಸಿದೆ.

ದೇಶದಲ್ಲಿ ತಯಾರಿಕಾ ವಲಯದ ಸೂಚ್ಯಂಕವು ಮೇ ತಿಂಗಳಿನಲ್ಲಿ 51.6 ರಿಂದ 51.2ಕ್ಕೆ ಇಳಿಕೆಯಾಗಿದೆ.ಈ ಅಂಶಗಳಿಂದಾಗಿ ಮಾರಾಟದ ಒತ್ತಡ ಸೃಷ್ಟಿಯಾಗಿತ್ತು ಎಂದು ತಜ್ಞರು ಹೇಳಿದ್ದಾರೆ.

ತೈಲ ಮತ್ತು ಅನಿಲ, ವಾಹನ , ಬ್ಯಾಂಕಿಂಗ್‌, ಲೋಹ ವಲಯಗಳ ಷೇರುಗಳು ಉತ್ತಮ ಗಳಿಕೆ ಕಂಡಿವೆ. ಆದರೆ, ಗ್ರಾಹಕ ಬಳಕೆ ವಸ್ತುಗಳು, ಐ.ಟಿ, ತಂತ್ರಜ್ಞಾನ, ರಿಯಲ್ ಎಸ್ಟೇಟ್‌, ವಿದ್ಯುತ್‌, ಆರೋಗ್ಯ ಮತ್ತು ಎಫ್‌ಎಂಸಿಜಿ ವಲಯದ ಷೇರುಗಳು ನಷ್ಟ ಅನುಭವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.