
ಷೇರು ಮಾರುಕಟ್ಟೆ
ಜಗತ್ತಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಹಾಗೂ ಮುಂದುವರಿದಿರುವ ಹಲವು ದೇಶಗಳ ಷೇರುಪೇಟೆಗಳಲ್ಲಿ ಕಳೆದ ಒಂದು ವರ್ಷದಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದೆ. ಆದರೆ ಭಾರತದ ಷೇರುಪೇಟೆಗಳು ಮಾತ್ರ ಅವುಗಳಿಗೆ ಹೋಲಿಸಿದರೆ ಕಡಿಮೆ ಸಾಧನೆ ತೋರಿವೆ. ಈಚಿನ ಕೆಲವು ತಿಂಗಳುಗಳಲ್ಲಿ ಲಾರ್ಜ್‌ಕ್ಯಾಪ್ ವರ್ಗದ ಷೇರುಗಳ ಮೌಲ್ಯವು ಮತ್ತೆ ಏರಿಕೆ ದಾಖಲಿಸಿದ್ದರೂ ಒಟ್ಟಾರೆಯಾಗಿ ಬಂಡವಾಳ ಮಾರುಕಟ್ಟೆಯು ಅಸ್ಥಿರತೆಯಿಂದ ಕೂಡಿದೆ. ಕಳೆದ ಸರಿಸುಮಾರು 15 ತಿಂಗಳುಗಳಿಂದ ಷೇರುಪೇಟೆಯಲ್ಲಿ ಅಸ್ಥಿರತೆ ಮುಂದುವರಿದಿದೆ.
ಒಟ್ಟಾರೆಯಾಗಿ ಷೇರುಗಳ ಮೌಲ್ಯವು ದುಬಾರಿಯೂ ಆಗಿಲ್ಲ, ಅಗ್ಗವೂ ಆಗಿಲ್ಲ ಎಂಬ ಹಂತದಲ್ಲಿದೆ. ಮಿಡ್‌ಕ್ಯಾಪ್ ಹಾಗೂ ಸ್ಮಾಲ್‌ಕ್ಯಾಪ್ ವರ್ಗದ ಷೇರುಗಳಲ್ಲಿ ಕೆಲವು ಅಗ್ಗವಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಎಲ್ಲ ವರ್ಗಗಳ ಷೇರುಗಳ ಬೆಲೆಯಲ್ಲಿ ಆಗಬಹುದಾದ ಜಿಗಿತದ ಲಾಭವನ್ನು ಪಡೆದುಕೊಳ್ಳಲು ಹೆಚ್ಚಿನ ಕಂಪನಿಗಳ ಷೇರುಗಳಲ್ಲಿ ಹಣ ತೊಡಗಿಸಲು ಇದು ಸರಿಯಾದ ಸಮಯ ಆಗಿರಬಹುದು.
ಸಣ್ಣ ಹೂಡಿಕೆದಾರರ ಪಾಲಿಗೆ ಪ್ಯಾಸಿವ್ ಮಾರ್ಗದಲ್ಲಿ ಹಣ ತೊಡಗಿಸಲು ‘ಬಿಎಸ್‌ಇ 500 ಸೂಚ್ಯಂಕ’ವು ಒಂದು ಉತ್ತಮ ಅವಕಾಶ ಒದಗಿಸುತ್ತಿದೆ.
ಬಿಎಸ್‌ಇ 500 ಸೂಚ್ಯಂಕದಲ್ಲಿ ಈಗ 501 ಕಂಪನಿಗಳ ಷೇರುಗಳು ಇವೆ. ತಾಂತ್ರಿಕ ಕಾರಣಕ್ಕಾಗಿ ಈ ಸೂಚ್ಯಂಕದಲ್ಲಿನ ಷೇರುಗಳ ಸಂಖ್ಯೆ 500ಕ್ಕಿಂತ ಹೆಚ್ಚಿದೆ. ಈ ಸೂಚ್ಯಂಕವನ್ನು ಬಿಎಸ್‌ಇ ಆಲ್‌ಕ್ಯಾಪ್ ಸೂಚ್ಯಂಕದಿಂದ ಸೃಷ್ಟಿಸಲಾಗಿದೆ. ದಿನದ ಸರಾಸರಿ ಮಾರುಕಟ್ಟೆ ಬಂಡವಾಳ ಮೌಲ್ಯ, ವಾರ್ಷಿಕ ವಹಿವಾಟಿನ ಮೌಲ್ಯ ಮತ್ತು ವಹಿವಾಟಿನ ಆವರ್ತನೆಯನ್ನು ಪ್ರಮುಖವಾಗಿ ಪರಿಗಣಿಸಿ ಈ ಸೂಚ್ಯಂಕಕ್ಕೆ ಕಂಪನಿಗಳ ಷೇರುಗಳನ್ನು ಸೇರಿಸಲಾಗುತ್ತದೆ.
ಬಿಎಸ್‌ಇ 500 ಸೂಚ್ಯಂಕದ ಮಾರುಕಟ್ಟೆ ಬಂಡವಾಳ ಮೌಲ್ಯವು ಅಂದಾಜು ₹415 ಲಕ್ಷ ಕೋಟಿ. ಖರೀದಿ ಮತ್ತು ಮಾರಾಟಕ್ಕೆ ಲಭ್ಯವಿರುವ ಷೇರುಗಳನ್ನು ಮಾತ್ರ ಪರಿಗಣಿಸಿದಲ್ಲಿ ಈ ಸೂಚ್ಯಂಕದಲ್ಲಿನ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ಸರಿಸುಮಾರು ₹198 ಲಕ್ಷ ಕೋಟಿ ಆಗುತ್ತದೆ. ಅಂದಾಜು 12 ವಲಯಗಳು ಈ ಸೂಚ್ಯಂಕದಲ್ಲಿ ಪ್ರಾತಿನಿಧ್ಯ ಹೊಂದಿವೆ. ಪ್ರತಿ ವರ್ಷದ ಜೂನ್ ಮತ್ತು ಡಿಸೆಂಬರ್‌ನಲ್ಲಿ ಈ ಸೂಚ್ಯಂಕಕ್ಕೆ ಹೊಸದಾಗಿ ಷೇರುಗಳನ್ನು ಸೇರ್ಪಡೆ ಮಾಡುವ, ಕೆಲವು ಷೇರುಗಳನ್ನು ತೆಗೆಯುವ ಕೆಲಸ ಆಗುತ್ತದೆ.
ಒಂದು ಅರ್ಥದಲ್ಲಿ ಹೇಳುವುದಾದರೆ, ಬಿಎಸ್‌ಇ 500 ಸೂಚ್ಯಂಕವು ಇಡೀ ಷೇರುಪೇಟೆಯನ್ನು ಪ್ರತಿನಿಧಿಸುತ್ತದೆ. ಅಥವಾ ಅದು ಇಡೀ ಷೇರುಪೇಟೆಯ ಬಹುದೊಡ್ಡ ಭಾಗವೊಂದನ್ನು ಪ್ರತಿನಿಧಿಸುವುದಂತೂ ಸತ್ಯ. ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಎಲ್ಲ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ₹474 ಲಕ್ಷ ಕೋಟಿ. ಇದನ್ನು ಬಿಎಸ್‌ಇ 500 ಸೂಚ್ಯಂಕದ ಮಾರುಕಟ್ಟೆ ಬಂಡವಾಳ ಮೌಲ್ಯದ ಜೊತೆ ಹೋಲಿಸಿ. ಬಿಎಸ್‌ಇ 500 ಸೂಚ್ಯಂಕದ ಮಾರುಕಟ್ಟೆ ಬಂಡವಾಳ ಮೌಲ್ಯವು ಮುಂಬೈ ಷೇರುಪೇಟೆಯ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯದ ಸರಿಸುಮಾರು ಶೇ 88ರಷ್ಟು ಆಗುತ್ತದೆ. ಅಂದರೆ ಒಂದು ಸೂಚ್ಯಂಕದಲ್ಲಿ ಹೂಡಿಕೆ ಮಾಡಿದಾಗ ಹೂಡಿಕೆದಾರರಿಗೆ ಇಡೀ ಮಾರುಕಟ್ಟೆಯ ಅಥವಾ ಮಾರುಕಟ್ಟೆಯ ಬಹುದೊಡ್ಡ ಭಾಗದ ದಿಕ್ಕು, ಹರಿವು ಕೈಗೆಟಕುತ್ತದೆ.
ಈ ಸೂಚ್ಯಂಕದಲ್ಲಿ 501 ಕಂಪನಿಗಳು ಈಗ ಇರುವ ಕಾರಣದಿಂದಾಗಿ ಈ ಸೂಚ್ಯಂಕದಲ್ಲಿ ಹೂಡಿಕೆ ಮಾಡುವವರಿಗೆ ಲಾರ್ಜ್‌ಕ್ಯಾಪ್ ವಲಯದ 100 ಕಂಪನಿಗಳ, ಮಿಡ್‌ಕ್ಯಾಪ್ ವಲಯದ 150 ಕಂಪನಿಗಳ ಹಾಗೂ ಸ್ಮಾಲ್‌ಕ್ಯಾಪ್ ವಲಯದ 250 ಕಂಪನಿಗಳ ಷೇರುಗಳ ಮೇಲೆ ಒಂದೇ ಬಾರಿಗೆ ಹಣ ತೊಡಗಿಸಲು ಸಾಧ್ಯವಾಗುತ್ತದೆ. ಈ ಮೂರೂ ವರ್ಗಗಳ ಕಂಪನಿಗಳ ಷೇರುಗಳ ಪಾಲು ಸೂಚ್ಯಂಕದಲ್ಲಿ ಒಂದೇ ಆಗಿಲ್ಲ. ಇದರಿಂದಾಗಿ ಹೂಡಿಕೆದಾರರಿಗೆ ಒಂದೇ ಸೂಚ್ಯಂಕದ ಮೂಲಕ, ಒಂದೇ ಹೂಡಿಕೆ ಉತ್ಪನ್ನದ ಮೂಲಕ ಬಹುವಿಧದ ಮಾರುಕಟ್ಟೆ ಬಂಡವಾಳದ ಕಂಪನಿಗಳ ಪೋರ್ಟ್‌ಫೋಲಿಯೊ ಸಿಕ್ಕಂತಾಗುತ್ತದೆ.
ಉತ್ತಮ ಪ್ರಮಾಣದಲ್ಲಿ ನಗದು ಹರಿವು ಇರುವ, ಹಣಕಾಸಿನ ಸ್ಥಿತಿಯು ಚೆನ್ನಾಗಿ ಇರುವ ಬ್ಲ್ಯೂಚಿಪ್ ಕಂಪನಿಗಳು; ಪ್ರವರ್ಧಮಾನಕ್ಕೆ ಬರುತ್ತಿರುವ (ಫಿನ್‌ಟೆಕ್, ಎ.ಐ, ದತ್ತಾಂಶ ಕೇಂದ್ರಗಳು, ಇ–ವಾಣಿಜ್ಯ ಮತ್ತು ಕ್ವಿಕ್–ಕಾಮರ್ಸ್ ಇತ್ಯಾದಿ) ಹಾಗೂ ಸಾಂಪ್ರದಾಯಿಕ ವಲಯಗಳ ಮಿಡ್‌ಕ್ಯಾಪ್ ಹಾಗೂ ಸ್ಮಾಲ್‌ಕ್ಯಾಪ್ ವರ್ಗದ ಕಂಪನಿಗಳಲ್ಲಿ ಹಣ ತೊಡಗಿಸಲು ಈ ಸೂಚ್ಯಂಕ ಅನುವು ಮಾಡಿಕೊಡುತ್ತದೆ. ಹೀಗಾಗಿ, ಹೂಡಿಕೆದಾರರಿಗೆ ಬಹಳ ಉತ್ತಮ ಪೋರ್ಟ್‌ಫೋಲಿಯೊ ಹೊಂದಲು ಆಗುತ್ತದೆ.
ಇಲ್ಲಿ ಇನ್ನೊಂದು ಅಂಶವನ್ನು ಉಲ್ಲೇಖಿಸಬೇಕು. 500 ಕಂಪನಿಗಳ ಷೇರುಗಳು ಇರುವ ಒಂದು ಪೋರ್ಟ್‌ಫೋಲಿಯೊ (ಸೂಚ್ಯಂಕದಲ್ಲಿ ಇಷ್ಟು ಕಂಪನಿಗಳು ಇವೆ) ಬಹಳ ವೈವಿಧ್ಯಮಯವಾದ ಪೋರ್ಟ್‌ಫೋಲಿಯೊ ಎಂಬುದನ್ನು ಮರೆಯುವಂತಿಲ್ಲ. 12 ವಿಭಿನ್ನ ವಲಯಗಳ ಕಂಪನಿಗಳು ಇದರಲ್ಲಿ ಪ್ರಾತಿನಿಧ್ಯ ಪಡೆದಿವೆ. ಪ್ರತಿ ವಲಯದಲ್ಲಿಯೂ ಹಲವು ಉಪ ವಲಯಗಳು ಇವೆ. ಹೀಗಾಗಿ ಈ ಪೋರ್ಟ್‌ಫೋಲಿಯೊ ಬಹಳ ಸಮತೋಲನ ಹೊಂದಿರುವ ಪೋರ್ಟ್‌ಫೊಲಿಯೊ ಕೂಡ ಹೌದು.
ಹಣಕಾಸು ಸೇವೆಗಳು, ಗ್ರಾಹಕ ಬಳಕೆ ಉತ್ಪನ್ನಗಳು, ಕೈಗಾರಿಕೆಗಳು, ಐ.ಟಿ. ಮತ್ತು ಇಂಧನ ಬಿಎಸ್‌ಒ 500 ಸೂಚ್ಯಂಕದಲ್ಲಿ ಇರುವ ಮೊದಲ ಐದು ಪ್ರಮುಖ ವಲಯಗಳು. ಈ ವಲಯಗಳ ಪಾಲು ಸೂಚ್ಯಂಕದಲ್ಲಿ ಕ್ರಮವಾಗಿ ಶೇ 30.8, ಶೇ 15, ಶೇ 8.7, ಶೇ 8.5 ಮತ್ತು ಶೇ 8ರಷ್ಟು ಇವೆ.
ಈ ವಲಯಗಳು ಹಾಗೂ ವಲಯಗಳ ಕಂಪನಿಗಳು ದೇಶದ ಅರ್ಥ ವ್ಯವಸ್ಥೆಯನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಉತ್ತಮ ಪ್ರಮಾಣದ ಲಾಭ ತಂದುಕೊಡುವ ವಿಭಿನ್ನ ಕಂಪನಿಗಳ ಷೇರುಗಳು ಹೂಡಿಕೆದಾರರಿಗೆ ಈ ಸೂಚ್ಯಂಕದ ಮೂಲಕ ಲಭ್ಯವಾಗುತ್ತವೆ. ಒಂದು ವಲಯದ ಷೇರುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಲಾಭ ಸಿಗದೆ ಇದ್ದ ಸಂದರ್ಭದಲ್ಲಿ ಬೇರೊಂದು ವಲಯದ ಷೇರುಗಳು ಹೆಚ್ಚು ಉತ್ತಮವಾಗಿ ಲಾಭ ನೀಡುತ್ತಿರುತ್ತವೆ. ಇದರಿಂದಾಗಿ ಹೂಡಿಕೆದಾರರಿಗೆ ತಮ್ಮ ಪೋರ್ಟ್‌ಫೋಲಿಯೊದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಆಗುತ್ತದೆ.
ಸಣ್ಣ ಹೂಡಿಕೆದಾರರು ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಮೂಲಕ ಬಿಎಸ್‌ಇ 500 ಸೂಚ್ಯಂಕದಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತವಾದ ಮಾರ್ಗ. ಏಕೆಂದರೆ, ಇಟಿಎಫ್‌ಗಳಲ್ಲಿ ಶುಲ್ಕವು ಕಡಿಮೆ ಇರುತ್ತದೆಯಾದ ಕಾರಣಕ್ಕೆ ಒಂದೇ ಹೂಡಿಕೆ ಉತ್ಪನ್ನದ ಮೂಲಕ ಕಡಿಮೆ ವೆಚ್ಚಕ್ಕೆ 500 ಕಂಪನಿಗಳ ಷೇರುಗಳು ಲಭ್ಯವಾಗುತ್ತವೆ. ಇಟಿಎಫ್‌ಗಳು ಷೇರುಪೇಟೆಗಳಲ್ಲಿ ಖರೀದಿಗೆ, ಮಾರಾಟಕ್ಕೆ ಲಭ್ಯವಿರುವ ಕಾರಣಕ್ಕೆ ಅವುಗಳನ್ನು ಮಾರುಕಟ್ಟೆ ಸಮಯದಲ್ಲಿ ಖರೀದಿಸುವುದು ಹಾಗೂ ಮಾರಾಟ ಮಾಡುವುದು ಸುಲಭವಾಗಿ ಆಗುತ್ತದೆ. ದೇಶದ ಟಾಪ್–500 ಕಂಪನಿಗಳು ಈ ಸೂಚ್ಯಂಕದಲ್ಲಿ ಸ್ಥಾನ ಪಡೆಯಬೇಕು ಎಂಬ ಉದ್ದೇಶದಿಂದ ಸೂಚ್ಯಂಕವನ್ನು ಕಾಲಕಾಲಕ್ಕೆ ಮರುಹೊಂದಾಣಿಕೆ ಮಾಡಲಾಗುತ್ತದೆ.
ಬಿಎಸ್‌ಇ 500 ಸೂಚ್ಯಂಕದಲ್ಲಿನ ಹೂಡಿಕೆಯು ದೀರ್ಘಾವಧಿಯಲ್ಲಿ ಉತ್ತಮ ಗಳಿಕೆ ತಂದುಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಇಲ್ಲಿ ಹೂಡಿಕೆ ಮಾಡಿದಾಗ ಉತ್ತಮ ಲಾಭ ಸಿಕ್ಕಿದೆ. ಕೆಲವು ಸಂದರ್ಭಗಳಲ್ಲಿ ಮಧ್ಯಮ ಅವಧಿಯ ಹೂಡಿಕೆಗೂ ಉತ್ತಮ ಫಲ ದೊರೆತಿದೆ. ಐದು ವರ್ಷಗಳ ಅವಧಿಯಲ್ಲಿ ಈ ಸೂಚ್ಯಂಕವು ಹೂಡಿಕೆದಾರರಿಗೆ ಶೇಕಡ 17.1ರಷ್ಟು ವಾರ್ಷಿಕ ಸಂಯುಕ್ತ ಬೆಳವಣಿಗೆ ದರದ (ಸಿಎಜಿಆರ್) ಗಳಿಕೆ ತಂದುಕೊಟ್ಟಿದೆ. 10 ವರ್ಷಗಳ ಅವಧಿಯನ್ನು ಪರಿಗಣಿಸಿದರೆ ಈ ಸೂಚ್ಯಂಕವು ವಾರ್ಷಿಕ ಶೇ 14.9ರಷ್ಟು ಲಾಭವನ್ನು ತಂದುಕೊಟ್ಟಿದೆ.
ಒಂದೇ ಬಾರಿಗೆ ಹೂಡಿಕೆ ಮಾಡುವ ಮೂಲಕ ಅಥವಾ ಹಂತ ಹಂತವಾಗಿ ಹೂಡಿಕೆ ಮಾಡುವ ಮೂಲಕ ಈ ಸೂಚ್ಯಂಕದಲ್ಲಿ ಹಣ ತೊಡಗಿಸಬೇಕು ಎಂದು ಬಯಸುವವರಿಗೆ ಬಿಎಸ್‌ಇ 500 ಇಟಿಎಫ್ ಸೂಕ್ತವಾದ ಆಯ್ಕೆಯಾಗುತ್ತದೆ. ಇದರ ಮೂಲಕ ಶಿಸ್ತುಬದ್ಧವಾಗಿ, ದೀರ್ಘಾವಧಿಗೆ ಹಣ ಹೂಡಿಕೆ ಮಾಡಬಹುದು. ಇಲ್ಲಿ ಹಣ ತೊಡಗಿಸುವುದರಿಂದ ವಿಭಿನ್ನ ಉದ್ಯಮ ವಲಯಗಳು ಹಾಗೂ ವಿವಿಧ ಬಂಡವಾಳ ಮಾರುಕಟ್ಟೆ ವರ್ಗದ ಕಂಪನಿಗಳ ಷೇರುಗಳು ಲಭ್ಯವಾಗುತ್ತವೆ. ಹೀಗಾಗಿ, ಹೂಡಿಕೆದಾರರಿಗೆ ಭಾರತದ ದೀರ್ಘಾವಧಿಯ ಬೆಳವಣಿಗೆ ಪಯಣದಲ್ಲಿ ಭಾಗಿಯಾಗುವುದಕ್ಕೂ ಸಾಧ್ಯವಾಗುತ್ತದೆ.
(ಲೇಖನದಲ್ಲಿನ ದತ್ತಾಂಶಗಳು ಡಿಸೆಂಬರ್ 26ರವರೆಗಿನವು)
ಚಿಂತನ್ ಹಾರಿಯಾ: ಐಸಿಐಸಿಐ ಪ್ರುಡೆನ್ಶಿಯಲ್ ಆಸ್ತಿ ನಿರ್ವಹಣಾ ಕಂಪನಿಯ ಹೂಡಿಕೆ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ
Several stacks with coins and the term ETF and a chart with stock prices.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.