ADVERTISEMENT

ಓಮೈಕ್ರಾನ್ ಆತಂಕ: ₹ 17,696 ಕೋಟಿ ಹಿಂದಕ್ಕೆ ಪಡೆದ ವಿದೇಶಿ ಬಂಡವಾಳ ಹೂಡಿಕೆದಾರರು

ಪಿಟಿಐ
Published 19 ಡಿಸೆಂಬರ್ 2021, 12:55 IST
Last Updated 19 ಡಿಸೆಂಬರ್ 2021, 12:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಡಿಸೆಂಬರ್ 1 ರಿಂದ 17ರವರೆಗಿನ ಅವಧಿಯಲ್ಲಿ ಭಾರತದ ಬಂಡವಾಳ ಮಾರುಕಟ್ಟೆಯಿಂದ ₹ 17,696 ಕೋಟಿ ಹಿಂದಕ್ಕೆ ಪಡೆದಿದ್ದಾರೆ.

ಓಮೈಕ್ರಾನ್‌ ಸೃಷ್ಟಿಸಿರುವ ಆತಂಕದ ಜೊತೆಗೆ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ಸ್ವತ್ತು ಖರೀದಿಸುವ ಪ್ರಕ್ರಿಯೆಯನ್ನು ಶೀಘ್ರವೇ ನಿಲ್ಲಿಸುವ ಕುರಿತು ನಿರ್ಧಾರ ಪ್ರಕಟಿಸುವ ಸಾಧ್ಯತೆ ವ್ಯಕ್ತವಾಗಿದೆ. ಈ ಕಾರಣಗಳಿಂದಾಗಿ ಬಂಡವಾಳ ಹೊರಹರಿವು ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಹೂಡಿಕೆದಾರರು ₹ 13,470 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ ₹ 4,066 ಕೋಟಿ ಮೌಲ್ಯದ ಸಾಲಪತ್ರಗಳನ್ನು ಮಾರಾಟ ಮಾಡಿದ್ದಾರೆ. ನವೆಂಬರ್‌ ತಿಂಗಳಿನಲ್ಲಿ ₹ 2,521 ಕೋಟಿ ಮೌಲ್ಯದ ಬಂಡವಾಳ ಹಿಂದಕ್ಕೆ ಪಡೆದಿದ್ದರು.

ADVERTISEMENT

ದೇಶಿ ಮತ್ತು ಜಾಗತಿಕ ಮಟ್ಟದಲ್ಲಿ ಅನಿಶ್ಚಿತ ಸ್ಥಿತಿಯು ಮುಂದುವರಿದಿದೆ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ತಿಳಿಸಿದ್ದಾರೆ.

ಕೊರೊನಾದ ಹೊಸ ತಳಿ ಓಮೈಕ್ರಾನ್‌ ಅತ್ಯಂತ ವೇಗವಾಗಿ ಹರಡುತ್ತಿರುವುದು ಆತಂಕ ಸೃಷ್ಟಿಸಿದ್ದು, ಜಾಗತಿಕ ಆರ್ಥಿಕ ಬೆಳವಣಿಗೆಯ ಮುನ್ನೋಟದ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಭಾರತದಂತಹ ಪ್ರವರ್ಧಮಾನನಕ್ಕೆ ಬರುತ್ತಿರುವ ದೇಶಗಳಿಂದ ಬಂಡವಾಳ ಹೊರಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.