ADVERTISEMENT

ಬಿಪಿಸಿಎಲ್‌: ಶೇ 52.98 ಷೇರು ಮಾರಾಟಕ್ಕೆ ಬಿಡ್‌ ಆಹ್ವಾನ

ಶೇ 52.98ರಷ್ಟು ಷೇರುಗಳನ್ನು ಮಾರಾಟ: ಮೇ 2ಕ್ಕೆ ಬಿಡ್‌ ಅಂತ್ಯ

ಪಿಟಿಐ
Published 7 ಮಾರ್ಚ್ 2020, 20:00 IST
Last Updated 7 ಮಾರ್ಚ್ 2020, 20:00 IST
bpcl
bpcl   

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಅನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

ಕಂಪನಿಯಲ್ಲಿ ಹೊಂದಿರುವ ಶೇ 52.98ರಷ್ಟು ಷೇರುಗಳನ್ನು ಮಾರಾಟ ಮಾಡಲು ಶನಿವಾರ ಬಿಡ್‌ ಆಹ್ವಾನಿಸಿದೆ.

ಷೇರು ಖರೀದಿ ಆಸಕ್ತಿ ತಿಳಿಸಲು ಮೇ 2ರ ಗಡುವು ನೀಡಲಾಗಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಂ) ನೀಡಿರುವ ಬಿಡ್‌ನ ದಾಖಲೆಪತ್ರದಲ್ಲಿ ಈ ವಿವರ ಇದೆ.

ADVERTISEMENT

ಬಿಪಿಸಿಎಲ್‌ನಲ್ಲಿ ಒಟ್ಟಾರೆ 114.63 ಕೋಟಿ ಷೇರುಗಳಿದ್ದು, ಇದರಲ್ಲಿ ಕೇಂದ್ರ ಸರ್ಕಾರವು ತನ್ನ ಪಾಲಿನ ಶೇ 52.98ರಷ್ಟು ಷೇರುಪಾಲನ್ನು ಕಂಪನಿಯ ಆಡಳಿತ ನಿಯಂತ್ರಣದ ಜತೆಗೆ ಮಾರಾಟಕ್ಕೆ ನಿರ್ಧರಿಸಿದೆ.

ನಮಲೀಘರ್‌ ರಿಫೈನರಿ ಲಿ.ನಲ್ಲಿ (ಎನ್‌ಆರ್‌ಎಲ್‌) ಬಿಪಿಸಿಎಲ್‌ ಹೊಂದಿರುವ ಶೇ 61.65ರಷ್ಟು ಷೇರು
ಗಳನ್ನು ಹೊರತುಪಡಿಸಲಾಗಿದೆ. ಇದನ್ನು ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಕಂಪನಿಗೆ ಮಾರಾಟ ಮಾಡಲಾಗುವುದು.

ಎರಡು ಹಂತದಲ್ಲಿ ಬಿಡ್‌ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ಖರೀದಿ ಆಸಕ್ತಿ ಅರ್ಜಿ ಸಲ್ಲಿಸುವವರಲ್ಲಿ ಅರ್ಹರಿಗೆ ಎರಡನೇ ಹಂತದಲ್ಲಿ ಬಿಡ್‌ ಮೊತ್ತ ಸಲ್ಲಿಸಲು ಅವಕಾಶ ಸಿಗಲಿದೆ.

ಖಾಸಗೀಕರಣ ಪ್ರಕ್ರಿಯೆಯಲ್ಲಿ ಕೇಂದ್ರೋದ್ಯಮಗಳು ಭಾಗವಹಿಸುವಂತಿಲ್ಲ.₹ 71 ಸಾವಿರ ಕೋಟಿ ಮೌಲ್ಯ ಹೊಂದಿರುವ ಹಾಗೂ ನಾಲ್ಕಕ್ಕಿಂತ ಅಧಿಕ ಕಂಪನಿಗಳನ್ನು ಒಳಗೊಂಡಿರದ ಒಕ್ಕೂಟವುಬಿಡ್‌ ಸಲ್ಲಿಸಲು ಅರ್ಹವಾಗಿರಲಿದೆ. ಒಕ್ಕೂಟದ ಮುಂದಾಳು ಕಂಪನಿಯು ಶೇ 40ರಷ್ಟು ಷೇರುಪಾಲು ಹೊಂದಿರಬೇಕು. ಇತರ ಕಂಪನಿಗಳ ಕನಿಷ್ಠ ಮೌಲ್ಯ ₹ 7,100 ಕೋಟಿ ಇರಬೇಕು.ಷೇರು ವಿಕ್ರಯ ಪ್ರಕ್ರಿಯೆಯ ಸಲಹೆ ನೀಡಲು ದೆಲಾಯ್ಟ್‌ ಕಂಪನಿಯನ್ನುಸರ್ಕಾರ ನೇಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.