
ರೂಪಾಯಿ ಮೌಲ್ಯ ಕುಸಿತ
Credit: iStock Photo
ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ₹91ಕ್ಕೆ ಕುಸಿದಿದೆ.
ಮಂಗಳವಾರದ ವಹಿವಾಟಿನ ಆರಂಭದಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ₹91.14ರಷ್ಟಿತ್ತು. ಸೋಮವಾರದ ಮೌಲ್ಯಕ್ಕೆ ಹೋಲಿಸಿದರೆ ಮಂಗಳವಾರ ರೂಪಾಯಿ ಮೌಲ್ಯವು 36 ಪೈಸೆಯಷ್ಟು ಕುಸಿದಿದೆ.
ವಿದೇಶಿ ಬಂಡವಾಳದ ಹೊರಹರಿವು ನಿರಂತರವಾಗಿರುವುದು, ಕಚ್ಚಾ ತೈಲದ ಬೆಲೆಯು ಹೆಚ್ಚಳವಾಗಿರುವುದು ಕೂಡ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿವೆ. ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ ಬಗ್ಗೆ ಅನಿಶ್ಚಿತತೆ ಮುಂದುವರಿದಿರುವುದು, ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೆಚ್ಚಿನ ಯತ್ನ ನಡೆಸುತ್ತಿಲ್ಲದಿರುವುದು ರೂಪಾಯಿಯ ಮೇಲೆ ಒತ್ತಡ ಸೃಷ್ಟಿಸಿವೆ ಎಂದು ವರ್ತಕರು ಹೇಳಿದ್ದಾರೆ.
ಈ ತಿಂಗಳು ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ₹92ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ವರ್ತಕರು ಅಂದಾಜಿಸಿದ್ದಾರೆ.
ಷೇರುಪೇಟೆ ಸೂಚ್ಯಂಕಗಳ ಇಳಿಕೆ: ದೇಶದ ಷೇರುಪೇಟೆ ಸೂಚ್ಯಂಕಗಳು ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿವೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 363 ಅಂಶ ಇಳಿಕೆಯಾಗಿ, 84,849ರಂತೆ ವಹಿವಾಟು ಆರಂಭಿಸಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 106 ಅಂಶ ಇಳಿಕೆಯಾಗಿ 25,920ಕ್ಕೆ ತಲುಪಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.