ADVERTISEMENT

ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ: 50,000 ಅಂಶ ತಲುಪಿದ ಸೆನ್ಸೆಕ್ಸ್‌

ಗೂಳಿ ಓಟ

ಏಜೆನ್ಸೀಸ್
Published 21 ಜನವರಿ 2021, 4:42 IST
Last Updated 21 ಜನವರಿ 2021, 4:42 IST
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ದೇಶದ ಷೇರುಪೇಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 50,000 ಅಂಶಗಳನ್ನು ದಾಟಿದೆ.

ಫ್ಯೂಚರ್‌ ಗ್ರೂಪ್‌ನೊಂದಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಒಪ್ಪಂದಕ್ಕೆ ಸೆಬಿ ಸಮ್ಮತಿಸಿದ ಬೆನ್ನಲ್ಲೇ ರಿಲಯನ್ಸ್ ಷೇರು ಜಿಗಿದಿದೆ. ಇದರೊಂದಿಗೆ ಷೇರುಪೇಟೆಗಳ ಸೂಚ್ಯಂಕ ಏರುಗತಿಯಲ್ಲಿದೆ.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಶೇ 0.44ರಷ್ಟು ಏರಿಕೆಯೊಂದಿಗೆ 14,708 ಅಂಶ ತಲುಪಿದರೆ, ಸೆನ್ಸೆಕ್ಸ್ ಶೇ 0.45ರಷ್ಟು ಚೇತರಿಕೆಯೊಂದಿಗೆ 50,014.55 ಅಂಶ ಮುಟ್ಟಿದೆ.

ADVERTISEMENT

ರಿಲಯನ್ಸ್‌ ಷೇರು ಶೇ 2.30ರಷ್ಟು ಗಳಿಕೆಯೊಂದಿಗೆ ಪ್ರತಿ ಷೇರು ₹2,102.00ರಲ್ಲಿ ವಹಿವಾಟು ನಡೆಸಿದೆ.

ಸೆನ್ಸೆಕ್ಸ್‌ ಪಟ್ಟಿಯಲ್ಲಿ ಬಜಾಜ್‌ ಫಿನ್‌ಸರ್ವ್ ಶೇ 4ರಷ್ಟು ಗಳಿಕೆ ದಾಖಲಿಸಿತು. ಬಜಾಜ್‌ ಫೈನಾನ್ಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಇಂಡಸ್‌ಇಂಡ್‌ ಬ್ಯಾಂಕ್‌ ಹಾಗೂ ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳು ಶೇ 2ರವರೆಗೂ ಏರಿಕೆ ಕಂಡಿವೆ. ಆದರೆ, ಟಿಸಿಎಸ್‌ ಹಾಗೂ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳ ಬೆಲೆ ಕುಸಿದಿದೆ.

ವಹಿವಾಟು ಆರಂಭದಲ್ಲಿ ಸೆನ್ಸೆಕ್ಸ್‌ 300 ಅಂಶ ಏರಿಕೆಯಾಗಿ 50,092.21 ತಲುಪಿತು, ಅನಂತರ ಸಾರ್ವಕಾಲಿಕ ದಾಖಲೆ 50,126.73 ಅಂಶಗಳನ್ನು ಮುಟ್ಟಿತು. ನಿಫ್ಟಿ 85.40 ಅಂಶ ಚೇತರಿಕೆಯೊಂದಿಗೆ ವಹಿವಾಟು ಆರಂಭವಾಗಿ 14,730.10 ಅಂಶ ತಲುಪಿತು. ಸಾರ್ವಕಾಲಿಕ ದಾಖಲೆ 14,738.30 ಅಂಶಗಳನ್ನು ನಿಫ್ಟಿ ಗುರುವಾರ ಮುಟ್ಟಿದೆ.

ಬುಧವಾರ ಸೆನ್ಸೆಕ್ಸ್‌ 49,792.12 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು. ನಿಫ್ಟಿ 14,644.70 ಅಂಶಗಳಲ್ಲಿ ವಹಿವಾಟು ಮುಗಿಸಿತ್ತು.

ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್‌ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದರ ಪರಿಣಾಮ ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮ ವಹಿವಾಟು ದಾಖಲಾಗಿದೆ. ದೇಶದ ಷೇರುಪೇಟೆಗಳ ಮೇಲೂ ಇದರ ಪರಿಣಾಮ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.