ADVERTISEMENT

ಷೇರುಪೇಟೆ: ಹೂಡಿಕೆದಾರರಿಗೆ ಲಾಭದ ವರ್ಷ

ಪಿಟಿಐ
Published 29 ಮಾರ್ಚ್ 2025, 14:05 IST
Last Updated 29 ಮಾರ್ಚ್ 2025, 14:05 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಷೇರುಪೇಟೆಯು ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿದೆ. ಒಟ್ಟು ₹25.90 ಲಕ್ಷ ಕೋಟಿ ಸಂಪತ್ತು ವೃದ್ಧಿಯಾಗಿದೆ. 

2023–24ರಲ್ಲಿ ಷೇರುಪೇಟೆಯು ಇಳಿಕೆ ಕಂಡಿದ್ದರಿಂದ ಹೆಚ್ಚು ನಷ್ಟ ಅನುಭವಿಸಿದ್ದರು. ಆದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಾರುಕಟ್ಟೆಯು ಏರಿಕೆ ದಾಖಲಿಸಿದೆ. ಒಟ್ಟಾರೆ ಹೂಡಿಕೆದಾರರ ಪಾಲಿಗೆ ಆಶಾದಾಯಕವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 3,763 ಅಂಶ ಏರಿಕೆ (ಶೇ 5.10) ಕಂಡಿದ್ದರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 1,192 ಅಂಶ ಹೆಚ್ಚಳ (ಶೇ 5.34) ಕಂಡಿದೆ. ಬಿಎಸ್‌ಇ ಗುಚ್ಛದಲ್ಲಿರುವ ಕಂಪನಿಗಳ ಮಾರುಕಟ್ಟೆ ಮೌಲ್ಯವು ₹412 ಲಕ್ಷ ಕೋಟಿಗೆ ತಲುಪಿದೆ.

ADVERTISEMENT

ಈ ಆರ್ಥಿಕ ವರ್ಷವು ಚಿ‌ಲ್ಲರೆ ಹೂಡಿಕೆದಾರರ ಪಾಲಿಗೆ ಉತ್ತಮವಾಗಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅತಿಹೆಚ್ಚು ಪ್ರಮಾಣದಲ್ಲಿ ಬಂಡವಾಳ ಹಿಂಪಡೆದಿದ್ದಾರೆ. ಆದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಷೇರುಗಳನ್ನು ಖರೀದಿಸಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್‌ 27ರಂದು ಸೆನ್ಸೆಕ್ಸ್‌ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 85,978ಕ್ಕೆ ತಲುಪಿತ್ತು. 

ಅಕ್ಟೋಬರ್‌ ಕಥೆ–ವ್ಯಥೆ:

ಅಕ್ಟೋಬರ್‌ ನಂತರ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾದ ಅನಿಶ್ಚಿತ ಸ್ಥಿತಿಯು ಷೇರುಪೇಟೆಯಲ್ಲಿ ಏರಿಳಿತಕ್ಕೆ ಕಾರಣವಾಯಿತು. ಈ ತಿಂಗಳಿನಲ್ಲಿ ಸೆನ್ಸೆಕ್ಸ್‌ 4,910 ಅಂಶ (ಶೇ 5.82) ಇಳಿಕೆ ಕಂಡಿತ್ತು. ಇದರಿಂದ ಹೂಡಿಕೆದಾರರು ಹೆಚ್ಚು ನಷ್ಟ ಅನುಭವಿಸಿದರು. 

ಆದರೆ, ಮಾರುಕಟ್ಟೆಯಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಿದ್ದರಿಂದ ಆ ನಂತರದ ಅವಧಿಯಲ್ಲಿ ಮಾರುಕಟ್ಟೆಯು ಗಳಿಕೆಯ ಹಾದಿಗೆ ಮರಳಿತು ಎಂದು ತಜ್ಞರು ಹೇಳಿದ್ದಾರೆ. 

ಅಲ್ಲದೆ, ಹಲವು ಕಂಪನಿಗಳು ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ಬಂಡವಾಳ ಸಂಗ್ರಹಕ್ಕೆ ಮುಂದಾದವು. ಇದು ಮಾರುಕಟ್ಟೆಯು ಸಕಾರಾತ್ಮಕ ವಹಿವಾಟಿಗೆ ನೆರವಾಯಿತು ಎಂದು ಹೇಳಿದ್ದಾರೆ.

‘ಲೋಕಸಭಾ ಚುನಾವಣಾ ಫಲಿತಾಂಶವು ದೇಶದಲ್ಲಿ ರಾಜಕೀಯ ಸ್ಥಿರತೆ ಬಗ್ಗೆ ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿಸಿತು. ಅಲ್ಲದೆ, ಸರ್ಕಾರದ ನೀತಿಗಳು ಮಾರುಕಟ್ಟೆಯು ಏರಿಕೆ ಕಾಣಲು ನೆರವಾಗಿವೆ’ ಎಂದು ಮಾಸ್ಟರ್‌ ಕ್ಯಾಪಿಟಲ್‌ ಸರ್ವಿಸ್ಸ್‌ ಲಿಮಿಟೆಡ್‌ನ ನಿರ್ದೇಶಕಿ ಪಾಲ್ಕಾ ಅರೋರಾ ಚೋಪ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.