ADVERTISEMENT

PV Web Exclusive: ಎಲ್‌ಐಸಿ: ವಿಮೆ ಅಲ್ಲ, ಷೇರು ಖರೀದಿಗೆ ಸಿದ್ಧರಾಗಿ!

ವಿಜಯ್ ಜೋಷಿ
Published 11 ಸೆಪ್ಟೆಂಬರ್ 2020, 6:24 IST
Last Updated 11 ಸೆಪ್ಟೆಂಬರ್ 2020, 6:24 IST
ಎಲ್‌ಐಸಿ
ಎಲ್‌ಐಸಿ   

ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ಒಂದಾದರೂ ವಿಮೆ ಹೊಂದಿರದ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ವ್ಯಕ್ತಿ ಇರಲಿಕ್ಕಿಲ್ಲ. ವಾಸ್ತವದಲ್ಲಿ, ವಿಮೆ ಖರೀದಿಸುವುದು ಹಣವನ್ನು ಹೂಡಿಕೆ ಮಾಡಿದಂತೆ ಅಲ್ಲ. ಹೀಗಿದ್ದರೂ, ‘ಎಲ್ಲಿ ಹಣ ಹೂಡಿಕೆ ಮಾಡುತ್ತಿದ್ದೀರಿ’ ಎಂಬ ಪ್ರಶ್ನೆಯನ್ನು ದೇಶದ ಮಧ್ಯಮ ಅಥವಾ ಮೇಲ್ಮಧ್ಯಮ ವರ್ಗದ ವ್ಯಕ್ತಿಯಲ್ಲಿ ಕೇಳಿದಾಗ ‘ಎಲ್‌ಐಸಿಯಲ್ಲಿ ಒಂದೆರಡು ಪಾಲಿಸಿ ಇವೆ’ ಎಂಬ ಮಾತಿನೊಂದಿಗೆ ಉತ್ತರ ಆರಂಭವಾಗುವುದು ತೀರಾ ಸಹಜ. ‘ವಿಮೆಯು ಹೂಡಿಕೆಯಲ್ಲದೆ ಮತ್ತೇನೂ ಅಲ್ಲ’ ಎಂಬ ನಂಬಿಕೆಯನ್ನು ಕೋಟ್ಯಂತರ ಜನರ ಮನಸ್ಸಿನಲ್ಲಿ ಬಿತ್ತಿದೆ ಎಲ್‌ಐಸಿ. ಇದು ಆ ಸಂಸ್ಥೆಯ ದೈತ್ಯ ಶಕ್ತಿಗೆ ಒಂದು ಉದಾಹರಣೆ ಮಾತ್ರ.

ಈ ಪೀಠಿಕೆ ಹಾಕಿರುವುದಕ್ಕೆ ಬಲವಾದ ಕಾರಣವೊಂದು ಇದೆ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಎಲ್ಲರ ಗಮನ ಸೆಳೆದ ಅಂಶವೊಂದು ಇತ್ತು. ಅದು ಎಲ್‌ಐಸಿಯ ಷೇರುಗಳಲ್ಲಿ ಒಂದಿಷ್ಟನ್ನು ‘ಆರಂಭಿಕ ಸಾರ್ವಜನಿಕ ಕೊಡುಗೆ’ (Initial public offering - IPO) ಮೂಲಕ ಮಾರಾಟ ಮಾಡುವ, ಆ ಮೂಲಕ ಸರ್ಕಾರಕ್ಕೆ ಒಂದಿಷ್ಟುಆದಾಯ ಬರುವಂತೆ ಮಾಡುವ ಪ್ರಸ್ತಾವ. ಈಗ ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿರಿಸಿರುವ ಕೇಂದ್ರ ಸರ್ಕಾರವು, ಎಲ್ಐಸಿಯ ಷೇರುಗಳನ್ನು ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ಕರಡು ಸಂಪುಟ ಟಿಪ್ಪಣಿಯೊಂದನ್ನು ಸಿದ್ಧಪಡಿಸಿದೆ ಎಂಬ ವರದಿಗಳು ಬಂದಿವೆ.

ಅಂದರೆ, ಎಲ್‌ಐಸಿಯ ವಿಮೆಯೊಂದನ್ನು ಖರೀದಿ ಮಾಡಿ, ತಮ್ಮ ಜೀವನ ಒಂದು ಹಂತದವರೆಗೆ ಸುಭದ್ರವಾಯಿತುಎಂಬ ನೆಮ್ಮದಿ ಕಂಡುಕೊಳ್ಳುತ್ತಿದ್ದವರು ಈಗ ಎಲ್‌ಐಸಿಯ ಆಂಶಿಕ ಮಾಲೀಕರಾಗುವ ಕಾಲ ಹತ್ತಿರ ಬಂದಿದೆ ಅಂದಾಯಿತು! ವಿಮಾ ಕ್ಷೇತ್ರದ ದೈತ್ಯ ಕಂಪನಿ ಎಲ್‌ಐಸಿಯ ಷೇರುಗಳನ್ನು ಖರೀದಿಸಿ ಇಟ್ಟುಕೊಳ್ಳುವುದು ಅಂದರೆ, ಖರೀದಿಸಿದ ಷೇರುಗಳ ಪ್ರಮಾಣದಷ್ಟು ಮಾಲೀಕತ್ವ ಪಡೆದಂತೆ. ರಿಟೇಲ್‌ ಹೂಡಿಕೆದಾರರಿಗೆ (ಅಂದರೆ, ಜನಸಾಮಾನ್ಯರಿಗೆ) ಎಲ್‌ಐಸಿ ಷೇರು ಖರೀದಿ ಆಕರ್ಷಕ ಆಗಿರಬೇಕು ಎಂಬ ಉದ್ದೇಶದಿಂದ, ಷೇರುಗಳ ಬೆಲೆಯಲ್ಲಿ ಶೇಕಡ 10ರಷ್ಟರವರೆಗೆ ವಿನಾಯಿತಿ ಸಿಗುವ ಸಾಧ್ಯತೆಯೂ ಇದೆ ಎಂಬ ವರದಿಗಳು ಇವೆ.

ADVERTISEMENT

ಖಾಸಗೀಕರಣ ಅಲ್ಲ: ಸರ್ಕಾರ ತನ್ನ ಬಳಿ ಇರುವ ಷೇರುಗಳನ್ನು ಮಾರಾಟ ಮಾಡುವುದು ಅಂದರೆ, ಎಲ್‌ಐಸಿಯನ್ನು ಖಾಸಗೀಕರಣಗೊಳಿಸಿದಂತೆ ಆಗುತ್ತದೆಯೇ? ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆಯನ್ನು ಅರಿಯದವರು ಈ ನೆಲೆಯಲ್ಲಿ ಯೋಚಿಸಬಹುದು. ಸರ್ಕಾರವು ಈಗ ಎಲ್‌ಐಸಿಯ ಪೂರ್ಣ ಪ್ರಮಾಣದ ಮಾಲೀಕತ್ವ ಹೊಂದಿದೆ. ಈ ಕಂಪನಿಯಲ್ಲಿನ ಶೇ 25ರಷ್ಟು ಷೇರುಗಳನ್ನು ಮಾರಾಟ ಮಾಡುವುದು ಅಂದರೆ, ಕಂಪನಿಯನ್ನು ಖಾಸಗಿಯವರ ಕೈಗೆ ಒಪ್ಪಿಸಿದಂತೆ ಆಗುವುದಿಲ್ಲ. ಅದರ ಬದಲಿಗೆ, ಈ ನಡೆಯನ್ನು ‘ಎಲ್‌ಐಸಿ ಎಂಬ ಕಂಪನಿಯ ಮಾಲೀಕತ್ವವನ್ನು ವಹಿಸಿಕೊಳ್ಳಲು ಸಾರ್ವಜನಿಕರಿಗೂ ಅವಕಾಶ ಕೊಟ್ಟಂತೆ ಆಗಿದೆ’ ಎಂಬ ನೆಲೆಯಲ್ಲಿಯೂ ಇದನ್ನು ಅರ್ಥ ಮಾಡಿಕೊಳ್ಳಬಹುದು. ಅಂದರೆ, ಸಾರ್ವಜನಿಕರು ತಮ್ಮದು ಎಂದು ಭಾವನಾತ್ಮಕ ನೆಲೆಯಲ್ಲಿ ಅಂದುಕೊಂಡಿರುವ ಕಂಪನಿಯೊಂದನ್ನು, ಅಷ್ಟಿಷ್ಟರಮಟ್ಟಿಗೆ ನಿಜವಾಗಿಯೂ ತಮ್ಮದಾಗಿಸಿಕೊಳ್ಳಬಹುದು.

ಒಂದಿಷ್ಟು ಸಾಂಸ್ಥಿಕ ಹೂಡಿಕೆದಾರರು, ಮ್ಯೂಚುವಲ್‌ ಫಂಡ್ ಕಂಪನಿಗಳು ಕೂಡ ಎಲ್‌ಐಸಿಯ ಷೇರುಗಳಲ್ಲಿ ಒಂದಿಷ್ಟು ಪಾಲು ಖರೀದಿಸಬಹುದು. ಆದರೆ, ಇಷ್ಟು ಷೇರುಗಳ ಮಾರಾಟದ ನಂತರವೂ ಶೇಕಡ 75ರಷ್ಟು ಷೇರುಗಳು ಸರ್ಕಾರದ ಬಳಿಯೇ ಇರುತ್ತವೆಯಾದ ಕಾರಣ, ಎಲ್‌ಐಸಿಯು ಸರ್ಕಾರದ ಮಾಲೀಕತ್ವದಲ್ಲಿನ ಕಂಪನಿಯಾಗಿಯೇ ಮುಂದುವರಿಯುತ್ತದೆ. ದೇಶದ ಅತಿದೊಡ್ಡ‌ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಷೇರುಗಳಲ್ಲಿ ಒಂದಿಷ್ಟು ಪಾಲು, ಸಾರ್ವಜನಿಕರ ಹಾಗೂ ಸಾಂಸ್ಥಿಕ ಹೂಡಿಕೆದಾರರ ಕೈಯಲ್ಲಿ ಇವೆ. ಹಾಗಂತ, ಎಸ್‌ಬಿಐ ಸರ್ಕಾರದ ಮಾಲೀಕತ್ವದಿಂದ ಹೊರಕ್ಕೇನೂ ಬಂದಿಲ್ಲವಲ್ಲ? ಅದು ಇಂದಿಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಗಿಯೇ ಉಳಿದಿದೆ. ಎಲ್‌ಐಸಿ ಕೂಡ ಹೀಗೇ ಆಗಬಹುದು.

ಮಾರುಕಟ್ಟೆ ಬಂಡವಾಳದ ಲೆಕ್ಕದಲ್ಲಿ ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್‌) ಒಂದು ಷೇರಿನ ಮೌಲ್ಯ ಇಂದು ₹ 2,329. 2004ನೇ ಇಸವಿಯ ಆಗಸ್ಟ್‌ ತಿಂಗಳಿನಲ್ಲಿ ಈ ಕಂಪನಿಯ ಷೇರಿನ ಬೆಲೆ ₹ 120 ಆಗಿತ್ತು. 16 ವರ್ಷಗಳ ಅವಧಿಯಲ್ಲಿ ಟಿಸಿಎಸ್‌ ತನ್ನ ಷೇರುದಾರರ ಪಾಲಿಗೆ ಸೃಷ್ಟಿಸಿಕೊಟ್ಟಿರುವ ಸಂಪತ್ತಿನ ಪ್ರಮಾಣ ಅಸಾಧಾರಣ. ಕರ್ನಾಟಕದ ಹೆಮ್ಮೆಯ ಇನ್ಫೊಸಿಸ್‌ ಲಿಮಿಟೆಡ್‌ನ ಪ್ರತಿ ಷೇರಿನ ಬೆಲೆ ಇಂದು ₹ 939. ಇದೇ ಕಂಪನಿಯ ಷೇರಿನ ಬೆಲೆ 1999ರ ಜನವರಿಯಲ್ಲಿ ₹ 11.55 ಆಗಿತ್ತು. ಟಿಸಿಎಸ್‌ ರೀತಿಯಲ್ಲೇ, ಇನ್ಫೊಸಿಸ್‌ ಕೂಡ ತನ್ನ ಷೇರುದಾರರಿಗೆ ಅಗಾಧ ಸಂಪತ್ತು ಸೃಷ್ಟಿಸಿಕೊಟ್ಟಿದೆ.

ಎಲ್‌ಐಸಿಗೆ ಕೂಡ ಸಂಪತ್ತು ಸೃಷ್ಟಿಯ ವಿಚಾರದಲ್ಲಿ ತನಗೆ ತಾನೇ ಸಾಟಿ ಎಂಬಂತೆ ಬೆಳೆದು ನಿಲ್ಲುವ ಶಕ್ತಿ ಇದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಮತ. ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ದೇಶದ ಅತಿದೊಡ್ಡ ಕಂಪನಿಯಾಗುವ ತಾಕತ್ತು ಕೂಡ ಎಲ್‌ಐಸಿಗೆ ಇದೆ. ಹಾಗಾಗಿ, ಎಲ್‌ಐಸಿಯ ವಿಮೆಯನ್ನು ಮಾತ್ರ ಖರೀದಿ ಮಾಡುವುದಲ್ಲ; ಈ ಕಂಪನಿಯ ಷೇರುಗಳ ಖರೀದಿ ಬಗ್ಗೆಯೂ ಯೋಚಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.