ADVERTISEMENT

ಕೊರೊನಾವೈರಸ್‌ ಆತಂಕ: ಷೇರುಪೇಟೆಗಳಲ್ಲಿ ಮಾರಾಟ ಒತ್ತಡ

ಏಜೆನ್ಸೀಸ್
Published 10 ಫೆಬ್ರುವರಿ 2020, 13:07 IST
Last Updated 10 ಫೆಬ್ರುವರಿ 2020, 13:07 IST
ಷೇರುಪೇಟೆ ಮೇಲೆ ಕೊರೊನಾವೈರಸ್‌ ಪರಿಣಾಮ
ಷೇರುಪೇಟೆ ಮೇಲೆ ಕೊರೊನಾವೈರಸ್‌ ಪರಿಣಾಮ    

ಮುಂಬೈ: ವಿಶ್ವದ ವ್ಯಾಪಾರ ವಹಿವಾಟು, ಪ್ರವಾಸ, ವಿಮಾನಯಾನ, ಕಚ್ಚಾ ತೈಲ ದರ ಎಲ್ಲದರ ಮೇಲೂ ಚೀನಾದಿಂದ ಹರಡುತ್ತಿರುವ ಕೊರೊನಾವೈರಸ್‌ ಪರಿಣಾಮ ಬೀರಿದೆ. ಭಾರತದ ಷೇರುಪೇಟೆ ಇಳಿಕೆಯ ಹಾದಿ ಹಿಡಿದಿದೆ.

ಸೋಮವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 162.23 ಅಂಶ ಇಳಿಕೆಯಾಗುವ ಮೂಲಕ 40,979.62 ಅಂಶ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ 66.85 ಅಂಶ ಕುಸಿಯುವ ಮೂಲಕ 12,031.50 ಅಂಶಕ್ಕೆ ಇಳಿದಿದೆ.

ಆಟೊ ಮೊಬೈಲ್‌ ಮತ್ತು ಲೋಹ ವಲಯದ ಷೇರುಗಳಲ್ಲಿ ಉಂಟಾದ ಮಾರಾಟ ಒತ್ತಡವು ಷೇರುಪೇಟೆಗಳ ಮೇಲೆ ಪರಿಣಾಮ ಬೀರಿತು. ಸೆನ್ಸೆಕ್ಸ್‌ ಸೂಚ್ಯಂಕದಲ್ಲಿ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಶೇ 7ರಷ್ಟು ಇಳಿಕೆ ಕಂಡಿತು. ಟಾಟಾ ಸ್ಟೀಲ್‌ ಶೇ 5.80, ಒಎನ್‌ಜಿಸಿ ಶೇ 2.84, ಸನ್‌ ಫಾರ್ಮಾ ಶೇ 2.39 ಹಾಗೂ ಹೀರೊ ಮೊಟೊಕಾರ್ಪ್‌ ಷೇರು ಶೇ 2.34ರಷ್ಟು ನಷ್ಟ ಅನುಭವಿಸಿವೆ.

ADVERTISEMENT

ಆದರೆ, ಬಜಾಜ್‌ ಫೈನಾನ್ಸ್‌, ಟಿಸಿಎಸ್‌, ಕೊಟಾಕ್‌ ಬ್ಯಾಂಕ್‌, ಏಷಿಯನ್‌ ಪೇಯಿಂಟ್ಸ್‌, ಎಚ್‌ಡಿಎಫ್‌ಸಿ, ಎಚ್‌ಯುಎಲ್‌ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಗಳಿಕೆ ದಾಖಲಿಸಿದವು.

ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣ ಜನವರಿಯಲ್ಲಿ ಶೇ 6.2ರಷ್ಟು ಕುಸಿದಿರುವುದಾಗಿಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟದ (ಎಸ್ಐಎಎಂ) ಪ್ರಕಟಿಸಿದೆ. ಇದರಿಂದಾಗಿ ಆಟೊ ಮೊಬೈಲ್‌ ವಲಯದ ಷೇರುಗಳು ಶೇ 2.37ರಷ್ಟು ಇಳಿಕೆ ಕಂಡಿತು. ಇನ್ನು ಕೊರೊನಾವೈರಸ್‌ ಸಾವಿನ ಸಂಖ್ಯೆ ಏರಿಕೆಯಿಂದ ಲೋಹ ವಲಯದಲ್ಲಿ ಆತಂಕ ಸೃಷ್ಟಿಯಾಗಿ ಷೇರುಗಳು ಶೇ 3.14ರಷ್ಟು ನಷ್ಟಕ್ಕೆ ಒಳಗಾದವು.

ಚೀನಾದಿಂದ ಉಪಕರಣಗಳ ಆಮದಿಗೆ ತೊಡಕುಂಟಾಗಿದೆ. ಹಲವು ಕಾರ್ಖಾನೆಗಳು ಕಾರ್ಯಸ್ಥಗಿತಗೊಳಿಸಿವೆ. ಇದರ ನೇರ ಪರಿಣಾಮ ಭಾರತದ ಆಟೊ ಮೊಬೈಲ್‌ ಹಾಗೂ ಎಲೆಕ್ಟ್ರಾನಿಕ್ ಉಪಕರಣ ತಯಾರಿ ವಲಯದ ಮೇಲೆ ಆಗುತ್ತಿದೆ.

ಕಚ್ಚಾ ತೈಲ ಪೂರೈಕೆ ಹೆಚ್ಚಿದ್ದು, ಬೇಡಿಕೆ ಕುಸಿದಿರುವುದರಿಂದ ಬ್ಯಾರೆಲ್‌ ಕಚ್ಚಾ ತೈಲ ಬೆಲೆ 54.23 ಡಾಲರ್‌ ಆಗಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ 14 ಪೈಸೆ ವೃದ್ಧಿಯಾಗಿ ₹ 71.30ರಲ್ಲಿ ವಹಿವಾಟು ನಡೆದಿದೆ.

ಕೊರೊನಾವೈರಸ್‌ನಿಂದ ಚೀನಾದಲ್ಲಿ 900ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಸುಮಾರು 40,000 ಮಂದಿಗೆ ಸೋಂಕು ತಗುಲಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.