ADVERTISEMENT

41 ಸಾವಿರ ದಾಟಿದ ಸೆನ್ಸೆಕ್ಸ್: ಹೂಡಿಕೆದಾರರ ಸಂಪತ್ತು ₹ 2.78 ಲಕ್ಷ ಕೋಟಿ ವೃದ್ಧಿ

ಷೇರುಪೇಟೆ ಹೂಡಿಕೆದಾರರ ಸಂಪತ್ತು ₹ 2.78 ಲಕ್ಷ ಕೋಟಿ ವೃದ್ಧಿ

ಪಿಟಿಐ
Published 5 ನವೆಂಬರ್ 2020, 19:30 IST
Last Updated 5 ನವೆಂಬರ್ 2020, 19:30 IST
   

ನವದೆಹಲಿ: ದೇಶದ ಷೇರು ಮಾರುಕಟ್ಟೆಗಳಲ್ಲಿ ಗುರುವಾರ ಷೇರು ಖರೀದಿ ಭರಾಟೆ ಜೋರಾಗಿತ್ತು. ಇದರಿಂದಾಗಿ ಬಿಎಸ್‌ಇ ಸೆನ್ಸೆಕ್ಸ್ ಮತ್ತೆ 41 ಸಾವಿರದ ಗಡಿಯನ್ನು ದಾಟಿತು. ಹೂಡಿಕೆದಾರರ ಸಂಪತ್ತಿನಲ್ಲಿ ₹ 2.78 ಲಕ್ಷ ಕೋಟಿಯಷ್ಟು ಏರಿಕೆ ಆಯಿತು. ಸೆನ್ಸೆಕ್ಸ್ 41 ಸಾವಿರವನ್ನು ದಾಟಿದ್ದು ಫೆಬ್ರುವರಿ ಮಧ್ಯಭಾಗದ ನಂತರ ಇದೇ ಮೊದಲು.

ಗುರುವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್, 724 ಅಂಶಗಳಷ್ಟು ಏರಿಕೆ ದಾಖಲಿಸಿತು. 41,360 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ಜನವರಿ 1ರಂದು ಸೆನ್ಸೆಕ್ಸ್ 41,306 ಅಂಶಗಳಿಗೆ ಕೊನೆಗೊಂಡಿತ್ತು.

ವಿವಿಧ ವಲಯದ ಉದ್ಯಮಗಳ ಷೇರುಗಳಿಗೆ ಬೇಡಿಕೆ ಕಂಡುಬಂತು. ಬ್ಯಾಂಕಿಂಗ್, ಹಣಕಾಸು, ಇಂಧನ, ಮಾಹಿತಿ ತಂತ್ರಜ್ಞಾನ ಮತ್ತು
ಲೋಹ ತಯಾರಿಕಾ ವಲಯದ ಉದ್ಯಮಗಳ ಷೇರುಗಳಿಗೆ ಹೆಚ್ಚಿನ ಬೇಡಿಕೆ ಇತ್ತು.

ADVERTISEMENT

‘ದೇಶಿ ಷೇರು ಮಾರುಕಟ್ಟೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಅನುಗುಣವಾಗಿ ತಾವೂ ಏರಿಕೆ ದಾಖಲಿಸಿದವು. ಅಮೆರಿಕದ ಅಧ್ಯಕ್ಷೀಯ ಚುನಾವಣಾ ಫಲಿತಾಂಶವು ಡೆಮಾಕ್ರಟಿಕ್ ಪಕ್ಷದ ಪರವಾಗಿ ಇರಲಿದೆ ಎಂಬ ನಿರೀಕ್ಷೆಯಲ್ಲಿ ಈ ಏರಿಕೆ ಕಂಡುಬಂದಿದೆ’ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಗುರುವಾರದ ವಹಿವಾಟಿನ ಅಂತ್ಯಕ್ಕೆ ಅತಿಹೆಚ್ಚಿನ ಏರಿಕೆಯನ್ನು ದಾಖಲಿಸಿದ್ದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಷೇರುಗಳು. ಅವು ಶೇಕಡ 5.63ರಷ್ಟು ಚೇತರಿಕೆ ಕಂಡವು. ಟಾಟಾ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್‌ ಷೇರುಗಳು ಕೂಡ ಮೌಲ್ಯ ಹೆಚ್ಚಿಸಿಕೊಂಡವು.

ಜೋ ಬೈಡೆನ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ, ಅವರು ಚೀನಾ ಜೊತೆಗೆ ತೀವ್ರ ಮಟ್ಟದಲ್ಲಿ ವಾಣಿಜ್ಯ ಸಮರಕ್ಕೆ ಮುಂದಾಗಲಿಕ್ಕಿಲ್ಲ ಎಂಬ ನಿರೀಕ್ಷೆ ಹೂಡಿಕೆದಾರರದ್ದು ಎಂದು ತಜ್ಞರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಸೂಚ್ಯಂಕಗಳು ಕೂಡ ಗರಿಷ್ಠ ಶೇಕಡ 1.74ರಷ್ಟು ಏರಿಕೆ ಕಂಡವು. ಅಮೆರಿಕದ ಡಾಲರ್ ಎದುರು ಚೇತರಿಕೆ ಕಂಡ ರೂಪಾಯಿ ಮೌಲ್ಯ 40 ಪೈಸೆಗಳಷ್ಟು ಹೆಚ್ಚಳವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.