ADVERTISEMENT

ಷೇರುಪೇಟೆ: ಸತತ ಮೂರನೆಯ ದಿನ ತೇಜಿ ವಹಿವಾಟು

ಪಿಟಿಐ
Published 18 ಅಕ್ಟೋಬರ್ 2022, 15:36 IST
Last Updated 18 ಅಕ್ಟೋಬರ್ 2022, 15:36 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಮೂರನೆಯ ದಿನವೂ ತೇಜಿ ವಹಿವಾಟು ಕಂಡುಬಂತು. ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದು ಹಾಗೂ ಇಂಧನ, ಬ್ಯಾಂಕಿಂಗ್ ಮತ್ತು ಎಫ್‌ಎಂಸಿಜಿ ವಲಯಗಳ ಷೇರುಗಳಲ್ಲಿ ಹೂಡಿಕೆ ಹೆಚ್ಚಿದ್ದುದು ಸೂಚ್ಯಂಕಗಳ ಏರಿಕೆಗೆ ನೆರವಾದವು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 549 ಅಂಶ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 175 ಅಂಶ ಏರಿಕೆ ಕಂಡವು. ‘ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಗರಿಷ್ಠ ಮಟ್ಟ ತಲುಪಿಯಾಗಿದೆ. ಅದು ಮುಂದಿನ ದಿನಗಳಲ್ಲಿ ಕಡಿಮೆ ಆಗುತ್ತದೆ ಎಂದು ಆರ್‌ಬಿಐ ವಿಶ್ವಾಸ ವ್ಯಕ್ತಪಡಿಸಿರುವುದು ಹೂಡಿಕೆದಾರರಿಗೆ ಸಂತಸ ತಂದಿದೆ. ಇದರಿಂದಾಗಿ ಬ್ಯಾಂಕಿಂಗ್ ವಲಯದ ಷೇರುಗಳಲ್ಲಿ ಹೂಡಿಕೆ ಹೆಚ್ಚಾಗಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಬಿಎಸ್‌ಇ ಮಿಡ್‌ಕ್ಯಾಪ್‌ ಸೂಚ್ಯಂಕ ಶೇ 1.06ರಷ್ಟು ಏರಿಕೆ ಕಂಡಿದೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 0.71ರಷ್ಟು ಏರಿಕೆ ಕಂಡಿದೆ. ಬಂಡವಾಳ ಸರಕು (ಶೇ 1.97), ರಿಯಾಲ್ಟಿ (ಶೇ 1.76), ಆಟೊ (ಶೇ 1.50), ಎಫ್‌ಎಂಸಿಜಿ (ಶೇ 1.22), ಇಂಧನ (ಶೇ 1.13) ವಲಯಗಳು ಕೂಡ ಏರಿಕೆ ದಾಖಲಿಸಿವೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರವು ಶೇ 0.65ರಷ್ಟು ಕಡಿಮೆ ಆಗಿ, ಪ್ರತಿ ಬ್ಯಾರೆಲ್‌ಗೆ 91.02 ಡಾಲರ್‌ಗೆ ತಲುಪಿದೆ. ಮಂಗಳವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 153 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.