ADVERTISEMENT

ಸೂಚ್ಯಂಕ 407 ಅಂಶ ಪತನ

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ, ಮಳೆ ವಿಳಂಬ ಪರಿಣಾಮ

ಪಿಟಿಐ
Published 21 ಜೂನ್ 2019, 19:46 IST
Last Updated 21 ಜೂನ್ 2019, 19:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮೂರು ವಹಿವಾಟಿನ ದಿನಗಳಲ್ಲಿ ಸತತ ಏರಿಕೆ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಶುಕ್ರವಾರ 407 ಅಂಶಗಳ ಕುಸಿತ ಕಂಡಿತು.

ಅಮೆರಿಕ ಮತ್ತು ಇರಾನ್‌ ಮಧ್ಯೆ ಉದ್ವಿಗ್ನತೆ ಹೆಚ್ಚಿರುವುದರಿಂದ ಜಾಗತಿಕ ಷೇರುಪೇಟೆಗಳಲ್ಲಿ ವಹಿವಾಟು ಕುಸಿದಿದೆ. ಹಾಂಗ್‌ಕಾಂಗ್‌, ಟೋಕಿಯೊ ಮತ್ತು ಸೋಲ್‌ ಮಾರುಕಟ್ಟೆಯಲ್ಲಿನ ಖರೀದಿ ನಿರಾಸಕ್ತಿಯು ದೇಶಿ ಷೇರುಪೇಟೆಗಳಲ್ಲೂ ಪ್ರತಿಫಲನಗೊಂಡಿತು.

ಕಚ್ಚಾ ತೈಲ ಸಾಗಿಸುತ್ತಿದ್ದ ಎರಡು ನೌಕೆಗಳ ಮೇಲೆ ದಾಳಿ ನಡೆದಿರುವುದು ಮತ್ತು ಇರಾನ್‌, ಅಮೆರಿಕದ ಬೇಹುಗಾರಿಕಾ ಡ್ರೋನ್‌ ಹೊಡೆದು ಉರುಳಿಸಿರುವುದು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿಸಿದೆ. ಡಾಲರ್‌ ಎದುರು ರೂಪಾಯಿ ವಿನಿಮಯ ದರ ಕಡಿಮೆಯಾಗಿರುವುದು ಮತ್ತು ಜಾಗತಿಕ ವಾಣಿಜ್ಯ ಸಮರಕ್ಕೆ ಸಂಬಂಧಿಸಿದ ಕಳವಳವು ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಉಡುಗಿಸಿವೆ ಎಂದು ವಹಿವಾಟುದಾರರು ಹೇಳಿದ್ದಾರೆ.

ADVERTISEMENT

ನಷ್ಟ ಕಂಡ ಷೇರುಗಳು: ನಷ್ಟಕ್ಕೆ ಗುರಿಯಾದ ಸಂಸ್ಥೆಗಳಲ್ಲಿ ಯೆಸ್‌ ಬ್ಯಾಂಕ್ (ಶೇ 4.36) ಮುಂಚೂಣಿಯಲ್ಲಿ ಇದೆ. ಮಾರುತಿ, ಎಚ್‌ಡಿಎಫ್‌ಸಿ, ಹೀರೊ ಮೋಟೊಕಾರ್ಪ್‌, ಸನ್‌ ಫಾರ್ಮಾ, ಎಚ್‌ಯುಎಲ್‌, ಕೋಟಕ್‌ ಬ್ಯಾಂಕ್, ಕೋಲ್‌ ಇಂಡಿಯಾ, ಆರ್‌ಐಎಲ್‌, ಟಿಸಿಎಸ್‌, ಭಾರ್ತಿ ಏರ್‌ಟೆಲ್‌ ಷೇರುಗಳು ಶೇ 3.39ರವರೆಗೆ ನಷ್ಟಕ್ಕೆ ಗುರಿಯಾಗಿವೆ.

ಲಾಭ ಬಾಚಿಕೊಂಡ ಷೇರುಗಳು: ಎಸ್‌ಬಿಐ, ಇಂಡಸ್‌ಇಂಡ್‌ ಬ್ಯಾಂಕ್, ವೇದಾಂತ, ಎನ್‌ಟಿಪಿಸಿ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳು ಶೇ 1.28ರವರೆಗೆ ಲಾಭ ಮಾಡಿಕೊಂಡವು.

‘ಬಾಹ್ಯ ವಿದ್ಯಮಾನಗಳ ಜತೆಗೆ ದೇಶೀಯವಾಗಿ ಮುಂಗಾರು ವಿಳಂಬ ಆಗಿರುವುದು ಕೂಡ ಪೇಟೆಯ ವಹಿವಾಟಿನ ಮೇಲೆ ವ್ಯತಿರಿಕ್ತ
ಪರಿಣಾಮ ಬೀರಿದೆ. ‘ಕಚ್ಚಾ ತೈಲ ಬೆಲೆಯು ಹಿಂದಿನ ವಾರ ಶೇ 4ರಷ್ಟು ಹೆಚ್ಚಳಗೊಂಡಿರುವುದುಕೇಂದ್ರೀಯ ಸರ್ಕಾರದ ವಿತ್ತೀಯ ಸಮತೋಲನದ ಮೇಲೆ ಪರಿಣಾಮ ಬೀರಲಿದೆ’ ಎಂದು ಸ್ಯಾಂಕ್ಟಂ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಮುಖ್ಯ ಹೂಡಿಕೆ ಅಧಿಕಾರಿ ಸುನಿಲ್‌ ಶರ್ಮಾ ಹೇಳಿದ್ದಾರೆ. ಆರೋಗ್ಯ, ತೈಲ ಮತ್ತು ನೈಸರ್ಗಿಕ ಅನಿಲ, ಹಣಕಾಸು ಮತ್ತು ರಿಯಾಲ್ಟಿ ವಲಯದ ಷೇರುಗಳೂ ಕುಸಿತ ದಾಖಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.