ADVERTISEMENT

ರೋಸರಿ ಬಯೋಟೆಕ್: ವಹಿವಾಟಿನ ಮೊದಲ ದಿನವೇ ಷೇರು ಬೆಲೆ ಶೇ 65ರಷ್ಟು ಹೆಚ್ಚಳ

ಏಜೆನ್ಸೀಸ್
Published 23 ಜುಲೈ 2020, 6:18 IST
Last Updated 23 ಜುಲೈ 2020, 6:18 IST
ಮುಂಬೈ ಷೇರುಪೇಟೆ ಕಚೇರಿ ಕಟ್ಟಡದ ಎದುರು ನಿಂತು ಸೂಚ್ಯಂಕ ವೀಕ್ಷಿಸುತ್ತಿರುವ ಜನ–ಸಂಗ್ರಹ ಚಿತ್ರ
ಮುಂಬೈ ಷೇರುಪೇಟೆ ಕಚೇರಿ ಕಟ್ಟಡದ ಎದುರು ನಿಂತು ಸೂಚ್ಯಂಕ ವೀಕ್ಷಿಸುತ್ತಿರುವ ಜನ–ಸಂಗ್ರಹ ಚಿತ್ರ   

ಬೆಂಗಳೂರು: ಕಾರ್ಖಾನೆಗಳ ಅಗತ್ಯಗಳಿಗೆ ತಕ್ಕಂತೆ ರಾಸಾಯನಿಕಗಳ ತಯಾರಿಸುವ ರೋಸರಿ ಬಯೋಟೆಕ್‌ ಕಂಪನಿ ಷೇರು ವಹಿವಾಟಿಗೆ ತೆರೆದುಕೊಂಡಿದೆ. ಆರಂಭದಲ್ಲಿಯೇ ಕಂಪನಿಯ ಷೇರು ಬೆಲೆ ಶೇ 65ರಷ್ಟು ಏರಿಕೆಯಾಗುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.

ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಇ) ರೋಸರಿ ಬಯೋಟೆಕ್‌ ಷೇರು ಬೆಲೆ ₹670 ತಲುಪಿದೆ. ಆರಂಭಿಕ ಸಾರ್ವಜನಿಕ ನೀಡಿಕೆಯಾಗಿ (ಐಪಿಒ) ಪ್ರತಿ ಷೇರು ಬೆಲೆ ₹423–425 ನಿಗದಿಯಾಗಿತ್ತು. ಒಟ್ಟು ₹496 ಕೋಟಿ ಮೌಲ್ಯದ ರೋಸರಿ ಬಯೋಟೆಕ್‌ ಐಪಿಒ ಷೇರು ಖರೀದಿಗೆ 79.37 ಪಟ್ಟು ಹೆಚ್ಚುವರಿ ಬೇಡಿಕೆ ಸಲ್ಲಿಕೆಯಾಗಿತ್ತು. ಇದೀಗ ಷೇರು ವಹಿವಾಟಿಗೆ ತೆರೆದುಕೊಳ್ಳುತ್ತಿದ್ದಂತೆ ಪ್ರತಿ ಷೇರು ಬೆಲೆ ₹699ರ ವರೆಗೂ ಹೆಚ್ಚಳ ಕಂಡಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಪ್ರಕಾರ, ಐಪಿಒ ಮೂಲಕ ಕಂಪನಿ 81,73,530 ಷೇರುಗಳ ವಿತರಣೆಯ ಗುರಿ ಹೊಂದಿತ್ತು. ಇದಕ್ಕೆ ಪ್ರತಿಯಾಗಿ 64,87,33,645 ಷೇರುಗಳ ಖರೀದಿಗೆ ಮನವಿ ಸಲ್ಲಿಕೆಯಾಗಿತ್ತು. ಸಾಂಸ್ಥಿತಿಕ ಹೂಡಿಕೆದಾರರಿಂದ 85.26 ಪಟ್ಟು ಹೆಚ್ಚು ಹಾಗೂ ಇತರೆ ಹೂಡಿಕೆದಾರರಿಂದ ಹೆಚ್ಚುವರಿಯಾಗಿ 239.83 ಪಟ್ಟು ಬೇಡಿಕೆ ಉಂಟಾಗಿತ್ತು. ಲಾಕ್‌ಡೌನ್‌ನಿಂದಾಗಿ ಐಪಿಒ ಮಾರುಕಟ್ಟೆಯಲ್ಲಿ ನಾಲ್ಕು ತಿಂಗಳಿಂದ ಸ್ಥಗಿತವಾಗಿದ್ದ ಚಟುವಟಿಕೆಗಳು ಪುನರಾರಂಭಗೊಂಡಿದೆ. ಜುಲೈ 13ರಿಂದ 15ರ ವರೆಗೂ ಐಪಿಒ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.

ADVERTISEMENT

ಲಾಕ್‌ಡೌನ್‌ಗೂ ಮುನ್ನ ಮಾರ್ಚ್‌ನಲ್ಲಿ 'ಎಸ್‌ಬಿಐ ಕಾರ್ಡ್ಸ್‌ ಮತ್ತು ಪೇಮೆಂಟ್‌ ಸರ್ವಿಸಸ್‌' ಐಪಿಒ ವಿತರಣೆಯಾಗಿತ್ತು. ಇನ್ನೂ ಸ್ಪೆಷಾಲಿಟಿ ಕೆಮಿಕಲ್ಸ್‌ ತಯಾರಿಕಾ ಕಂಪನಿಗಳ ಪೈಕಿ 2019ರ ಏಪ್ರಿಲ್‌ನಲ್ಲಿ ನಿಯೋಜೆನ್‌ ಕೆಮಿಕಲ್ಸ್‌ ಐಪಿಒ ವಿತರಣೆ ಆಗಿತ್ತು.

ಪ್ರಮುಖ ಹೂಡಿಕೆದಾರರ ಮೂಲಕ ರೋಸರಿ ಬಯೋಟೆಕ್‌ ₹149 ಕೋಟಿ ಸಂಗ್ರಹಿಸಿದೆ. ಗೃಹ, ತಯಾರಿಕಾ ಕಾರ್ಖಾನೆಗಳು, ನ್ಯೂಟ್ರಿಷನ್‌ ಉತ್ಪನ್ನಗಳು ಹಾಗೂ ಪಶು ಆರೋಗ್ಯ ಸಂಬಂಧಿಸಿದ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳನ್ನು ರೋಸರಿ ಬಯೋಟೆಕ್‌ ತಯಾರಿಸುತ್ತದೆ.

ಗುರುವಾರ 11:50ರ ವರೆಗೂ ಸೆನ್ಸೆಕ್ಸ್‌ 231.93 ಅಂಶ ಚೇತರಿಕೆಯಾಗಿ 38,103.45 ಅಂಶಗಳಲ್ಲಿ ವಹಿವಾಟು ನಡೆಸಿದೆ. ನಿಫ್ಟಿ 80.15 ಅಂಶ ಹೆಚ್ಚಳದೊಂದಿಗೆ 11,212.75 ಅಂಶ ತಲುಪಿದೆ.

ವಹಿವಾಟು ಆರಂಭದಲ್ಲಿಯೇ ಷೇರು ಬೆಲೆ ಏರಿಕೆ ಕಂಡಿರುವ ಹೂಡಿಕೆದಾರರ ಮೂಲಕ ಹಾಗೂ ಹೂಡಿಕೆ ಮಾಡುವುದರಿಂದ ವಂಚಿತರಾದವರು ಸೇರಿದಂತೆ ಹಲವರು ರೋಸರಿ ಬಯೋಟೆಕ್‌ ಬಗ್ಗೆ ಟ್ವೀಟಿಸುತ್ತಿದ್ದಾರೆ. ಇದರಿಂದಾಗಿ Rossari Biotech ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.