ADVERTISEMENT

ವಿದೇಶಿ ಹೂಡಿಕೆ ‌ನಿಯಮ ಸರಳಗೊಳಿಸಲು ಮುಂದಾದ ಸೆಬಿ

ರಾಯಿಟರ್ಸ್
Published 12 ಆಗಸ್ಟ್ 2025, 18:47 IST
Last Updated 12 ಆಗಸ್ಟ್ 2025, 18:47 IST
ಸೆಬಿ ಭವನ –ಪಿಟಿಐ ಚಿತ್ರ
ಸೆಬಿ ಭವನ –ಪಿಟಿಐ ಚಿತ್ರ   

ಬೆಂಗಳೂರು: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ವಿದೇಶಿ ಹೂಡಿಕೆದಾರರಿಗೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಸರಳಗೊಳಿಸಲು ಮುಂದಾಗಿದೆ. ದೇಶದ ಬಂಡವಾಳ ಮಾರುಕಟ್ಟೆಗಳಿಗೆ ದೀರ್ಘಾವಧಿಯ ವಿದೇಶಿ ಬಂಡವಾಳದ ಹರಿವು ಇನ್ನಷ್ಟು ಹೆಚ್ಚಬೇಕು ಎಂಬ ಉದ್ದೇಶವನ್ನು ಸೆಬಿ ಹೊಂದಿದೆ.

ಮಂಗಳವಾರ ಪ್ರಕಟಿಸಲಾಗಿರುವ ಸೆಬಿಯ ವಾರ್ಷಿಕ ವರದಿಯಲ್ಲಿ ಈ ವಿವರಗಳು ಇವೆ. ಸರ್ಕಾರಿ ಸ್ವಾಮ್ಯದ ವಿದೇಶಿ ಹೂಡಿಕೆ ಸಂಸ್ಥೆಗಳು, ವಿದೇಶಿ ಸರ್ಕಾರಿ ನಿಧಿಗಳು, ಸಣ್ಣ ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಅದನ್ನು ಬಂಡವಾಳ ಮಾರುಕಟ್ಟೆಯಲ್ಲಿ ತೊಡಗಿಸುವ ವಿದೇಶಿ ಸಂಸ್ಥೆಗಳಿಗೆ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸುವ ಪ್ರಸ್ತಾವವನ್ನು ಸೆಬಿ ಕಳೆದ ವಾರ ಸಿದ್ಧಪಡಿಸಿದೆ.

ಇದು ವಿದೇಶಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದಕ್ಕೆ ಉತ್ತೇಜನ ನೀಡಬಹುದು ಎಂದು ಸೆಬಿ ನಿರೀಕ್ಷಿಸಿದೆ. ಚಾಲ್ತಿಯಲ್ಲಿ ಇರುವ ನಿಯಮಗಳನ್ನು ಸರಳಗೊಳಿಸಲು ಕೂಡ ಈ ವರ್ಷದಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸೆಬಿ ವರದಿಯು ಹೇಳಿದೆ.

ADVERTISEMENT

ನಿಯಮಗಳ ಪಾಲನೆಯ ಹೊರೆಯನ್ನು ಕಡಿಮೆ ಮಾಡಲು, ಅನಗತ್ಯ ನಿಯಮಗಳನ್ನು ಗುರುತಿಸುವ ಕೆಲಸಕ್ಕೆ ಗಮನ ನೀಡಲಾಗುತ್ತದೆ ಎಂದು ಸೆಬಿ ಹೇಳಿದೆ.

ಸೈಬರ್ ಭದ್ರತಾ ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸಿ, ವಹಿವಾಟುಗಳಲ್ಲಿ ಯಾವುದೇ ಅಪಾಯಗಳು ಎದುರಾಗುವುದನ್ನು ನಿವಾರಿಸುವ ಕೆಲಸ ಮಾಡಲಾಗುತ್ತದೆ ಎಂದು ಕೂಡ ಸೆಬಿ ತನ್ನ ವರದಿಯಲ್ಲಿ ಹೇಳಿದೆ. ನಿರ್ದಿಷ್ಟ ಬಗೆಯ ವಹಿವಾಟುಗಳಲ್ಲಿ ಅಕ್ರಮಗಳನ್ನು ತಡೆಯಲು ಸೆಬಿ ತನ್ನ ವಿಚಕ್ಷಣಾ ವ್ಯವಸ್ಥೆಯನ್ನು ಉತ್ತಮಪಡಿಸುತ್ತಿದೆ ಎಂದು ಅದರ ಅಧ್ಯಕ್ಷ ತುಹಿನ್ ಕಾಂತ ಪಾಂಡೆ ಅವರು ಕಳೆದ ತಿಂಗಳು ಹೇಳಿದ್ದಾರೆ.

ಅಕ್ರಮ ಎಸಗಿದ ಆರೋಪದ ಅಡಿಯಲ್ಲಿ ಅಮೆರಿಕದ ಜೇನ್‌ ಸ್ಟ್ರೀಟ್‌ ಸಂಸ್ಥೆಗೆ ನಿರ್ಬಂಧ ಹೇರಿದ ನಂತರದಲ್ಲಿ ಅವರು ಈ ಮಾತು ಹೇಳಿದ್ದರು.

Highlights - ಸೆಬಿ ವಾರ್ಷಿಕ ವರದಿಯಲ್ಲಿ ವಿವರ ನೂತನ ಕ್ರಮದಿಂದ ವಿದೇಶಿ ಹೂಡಿಕೆ ಹೆಚ್ಚುವ ನಿರೀಕ್ಷೆ ನಿಯಮ ಪಾಲನೆಯ ಹೊರೆ ತಗ್ಗಿಸಲೂ ಸೆಬಿ ಆಲೋಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.