ADVERTISEMENT

ಷೇರುಪೇಟೆಯಲ್ಲಿ ನಿಲ್ಲದ ಕರಡಿ ಕುಣಿತ

ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ

ಪಿಟಿಐ
Published 7 ಏಪ್ರಿಲ್ 2022, 14:51 IST
Last Updated 7 ಏಪ್ರಿಲ್ 2022, 14:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಾರಾಟದ ಒತ್ತಡದಿಂದಾಗಿ ದೇಶಿ ಷೇರುಪೇಟೆಗಳ ಗುರುವಾರದ ವಹಿವಾಟು ಇಳಿಕೆ ಕಾಣುವಂತಾಯಿತು.

ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಡಿಎಫ್‌ಸಿ ಲಿಮಿಟೆಡ್‌, ಟಿಸಿಎಸ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಗಳ ಷೇರುಗಳು ಲಾಭಗಳಿಕೆಯ ವಹಿವಾಟಿಗೆ ಒಳಗಾದವು. ಇದರಿಂದಾಗಿ ಸತತ ಮೂರನೇ ದಿನವೂ ನಕಾರಾತ್ಮಕ ವಹಿವಾಟು ನಡೆಯಿತು.

ಹಣದುಬ್ಬರ ಮತ್ತು ಕಚ್ಚಾ ತೈಲ ದರ ಏರಿಕೆ ನಿಯಂತ್ರಿಸಲು ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಅತ್ಯಂತ ತ್ವರಿತಗತಿಯಲ್ಲಿ ಬಡ್ಡಿದರ ಏರಿಕೆ ಮಾಡುವ ಸೂಚನೆ ನೀಡಿದೆ. ಇದು ವಹಿವಾಟಿನ ಮೇಲೆ ಪರಿಣಾಮ ಉಂಟುಮಾಡಿದೆ ಎಂದು ವರ್ತಕರು ಹೇಳಿದ್ದಾರೆ.

ADVERTISEMENT

ಆರ್‌ಬಿಐ ಹಣಕಾಸು ನೀತಿ ಸಮಿತಿಯ ನಿರ್ಧಾರಗಳು ಶುಕ್ರವಾರ ಹೊರಬೀಳಲಿದ್ದು, ಹೂಡಿಕೆದಾರರು ಈ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 575 ಅಂಶ ಇಳಿಕೆಯಾಗಿ 59,035 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 168 ಅಂಶ ಇಳಿಕೆ ಕಂಡು 17,639 ಅಂಶಗಳಿಗೆ ತಲುಪಿತು.

ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್‌ ಷೇರುಗಳ ಮೌಲ್ಯ ಶೇ 3ರವರೆಗೂ ಇಳಿಕೆ ಕಂಡವು. ಸೆನ್ಸೆಕ್ಸ್‌ನಲ್ಲಿ ಟೈಟಾನ್‌ ಷೇರು ಮೌಲ್ಯ ಶೇ 3.24ರಷ್ಟು ಗರಿಷ್ಠ ಇಳಿಕೆ ಕಂಡಿತು.

‘ಅಮೆರಿಕದ ಕೇಂದ್ರೀಯ ಬ್ಯಾಂಕ್‌ನ ನಿರ್ಧಾರ ಮತ್ತು ಆರ್‌ಬಿಐನ ಹಣಕಾಸು ನೀತಿಯ ಕುರಿತು ಹೂಡಿಕೆದಾರರು ಹೆಚ್ಚು ಗಮನ ಹರಿಸಿದ್ದಾರೆ. ಇದರಿಂದಾಗಿ ಸತತ ಮೂರನೇ ದಿನವೂ ವಹಿವಾಟು ಇಳಿಕೆ ಕಂಡಿತು. ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿಕೊಳ್ಳಲಿದೆ ಎನ್ನುವುದು ಹಲವು ತಜ್ಞರ ಅಭಿಪ್ರಾಯವಾಗಿದೆ’ ಎಂದು ಕೋಟಕ್‌ ಸೆಕ್ಯುರಿಟೀಸ್‌ ಲಿಮಿಟೆಡ್‌ನ ಈಕ್ವಿಟಿ ರಿಸರ್ಚ್‌ನ ಮುಖ್ಯಸ್ಥ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾತೈಲ ದರ ಶೇ 0.93ರಷ್ಟು ಏರಿಕೆ ಕಂಡು ಬ್ಯಾರಲ್‌ಗೆ 102 ಡಾಲರ್‌ಗಳಿಗೆ ತಲುಪಿತು.

ಮುಖ್ಯಾಂಶಗಳು

ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಸೂಚ್ಯಂಕ ಶೇ 0.75ರಷ್ಟು ಇಳಿಕೆ

ಬಿಎಸ್‌ಇ ಮಿಡ್‌ ಕ್ಯಾಪ್‌ ಸೂಚ್ಯಂಕ ಶೇ 0.42ರಷ್ಟು ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.