ಷೇರುಪೇಟೆ
ಮುಂಬೈ: ದೇಶದ ಷೇರುಪೇಟೆಯಲ್ಲಿ ಸತತ ಐದನೇ ದಿನವಾದ ಶುಕ್ರವಾರವೂ ಕರಡಿ ಕುಣಿತ ಜೋರಾಯಿತು.
ಮಹೀಂದ್ರ ಆ್ಯಂಡ್ ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ಎಲ್ ಆ್ಯಂಡ್ ಟಿ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಸೂಚ್ಯಂಕಗಳು ಕುಸಿತದ ಹಾದಿ ಹಿಡಿದವು. ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವೂ ಇದಕ್ಕೆ ನೆರವಾಯಿತು.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 662 ಅಂಶ ಇಳಿಕೆ ಕಂಡು (ಶೇ 0.83ರಷ್ಟು) 79,402 ಅಂಶಗಳಲ್ಲಿ ಸ್ಥಿರವಾಯಿತು. ವಹಿವಾಟಿನ ಒಂದು ಸಂದರ್ಭದಲ್ಲಿ 927 ಅಂಶ ಇಳಿಕೆ ಕಂಡಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 218 ಅಂಶ ಇಳಿಕೆ (ಶೇ 0.90ರಷ್ಟು) ಕಂಡು 24,180 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಂಡಿತು.
ಸೆನ್ಸೆಕ್ಸ್ ಗುಚ್ಛದಲ್ಲಿನ ಇಂಡಸ್ ಇಂಡ್ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಶೇ 18.50ರಷ್ಟು ಇಳಿಕೆಯಾಗಿದೆ. ಮಹೀಂದ್ರ ಆ್ಯಂಡ್ ಮಹೀಂದ್ರ, ಎಲ್ ಆ್ಯಂಡ್ ಟಿ, ಎನ್‌ಟಿಪಿಸಿ, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ಮಾರುತಿ, ಬಜಾಜ್ ಫೈನಾನ್ಸ್ ಮತ್ತು ಟೈಟನ್ ಕಂಪನಿಯ ಷೇರುಗಳ ಮೌಲ್ಯ ಕುಸಿದಿದೆ.
ಐಟಿಸಿ, ಎಕ್ಸಿಸ್ ಬ್ಯಾಂಕ್, ಹಿಂದುಸ್ತಾನ್ ಯೂನಿಲಿವರ್, ಸನ್ ಫಾರ್ಮಾ ಮತ್ತು ಐಸಿಐಸಿಐ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.
ಗುರುವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹5,062 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 0.42ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 74.69 ಡಾಲರ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.