ADVERTISEMENT

ಸೆನ್ಸೆಕ್ಸ್‌, ನಿಫ್ಟಿಯಲ್ಲಿ ನಿಲ್ಲದ ಕುಸಿತ: ಜಾಗತಿಕ ಆರ್ಥಿಕ ಹಿಂಜರಿತದ ಭೀತಿ

ಬಡ್ಡಿದರ ಹೆಚ್ಚಳ

ಪಿಟಿಐ
Published 23 ಸೆಪ್ಟೆಂಬರ್ 2022, 13:18 IST
Last Updated 23 ಸೆಪ್ಟೆಂಬರ್ 2022, 13:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ದಿನವೂ ನಕಾರಾತ್ಮಕ ವಹಿವಾಟು ನಡೆಯಿತು. ಎರಡೂ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರ ಶೇಕಡ 2ರವರೆಗೂ ಇಳಿಕೆ ಕಂಡವು.

ವಿವಿಧ ಕೇಂದ್ರೀಯ ಬ್ಯಾಂಕ್‌ಗಳಿಂದ ಬಡ್ಡಿದರ ಹೆಚ್ಚಳ ಮತ್ತು ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ಮಾರಾಟದ ಒತ್ತಡವು ಭಾರತದ ಮೇಲೆ ಪರಿಣಾಮ ಬೀರಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1021 ಅಂಶ ಕುಸಿದು 58,098 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 302 ಅಂಶ ಇಳಿಕೆ ಕಂಡು 17,327 ಅಂಶಗಳಿಗೆ ತಲುಪಿತು.

ADVERTISEMENT

ಬ್ರೆಂಟ್‌ ಕಚ್ಚಾ ತೈಲ ದರ ಶೇ 1.87ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 88.77 ಡಾಲರ್‌ಗೆ ತಲುಪಿತು.

‘ಅಮೆರಿಕದ 10 ವರ್ಷಗಳ ಬಾಂಡ್‌ ಗಳಿಕೆ ಮತ್ತು ಡಾಲರ್ ಮೌಲ್ಯ ವೃದ್ಧಿ ಆಗಿರುವುದರಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ವಿದೇಶಿ ಸಾಂಸ್ಥಿಕ ಬಂಡವಾಳ (ಎಫ್‌ಐಐ) ಹೊರಹರಿವಿಗೆ ಕಾರಣವಾಯಿತು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಕರಗಿದ ಸಂಪತ್ತು: ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 4.90 ಲಕ್ಷ ಕೋಟಿಯಷ್ಟು ಕರಗಿತು. ಇದರಿಂದಾಗಿ ಷೇರುಪೇಟೆ ಒಟ್ಟಾರೆ ಬಂಡವಾಳ ಮೌಲ್ಯ ₹ 276.64 ಲಕ್ಷ ಕೋಟಿಗೆ ಇಳಿಕೆ ಕಂಡಿತು. ಮೂರು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ಒಟ್ಟಾರೆ ₹ 6.77 ಲಕ್ಷ ಕೋಟಿಯಷ್ಟು ಕರಗಿದೆ.

ಜಾಗತಿಕ ಮಟ್ಟದಲ್ಲಿ ಕುಸಿತ: ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಏರಿಕೆ ಮಾಡುತ್ತಿವೆ. ಇದರ ಜೊತೆಗೆ ಆರ್ಥಿಕ ಹಿಂಜರಿತದ ಭೀತಿಯೂ ಸೇರಿ ಜಾಗತಿಕ ಷೇರುಪೇಟೆಗಳಲ್ಲಿ ಕುಸಿತ ಕಂಡುಬಂತು. ದೇಶದ ಷೇರುಪೇಟೆಗಳ ಮೇಲೆಯೂ ಅದರ ಪ್ರತಿಕೂಲ ಪರಿಣಾಮ ಆಯಿತು.

ಜಾಗತಿಕ ಮಾರುಕಟ್ಟೆಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಅಮೆರಿಕದ ಮಾರುಕಟ್ಟೆಯಲ್ಲಿ ಕಂಡ ಇಳಿಕೆಯ ಪ್ರಭಾವಕ್ಕೆ ದೇಶದ ಮಾರುಕಟ್ಟೆ ಒಳಗಾಯಿತು ಎಂದು ಎಮ್‌ಕೆ ವೆಲ್ತ್ ಮ್ಯಾನೇಜ್‌ಮೆಂಟ್‌ನ ಸಂಶೋಧನಾ ಮುಖ್ಯಸ್ಥ ಜೋಸೆಫ್‌ ಥಾಮಸ್‌ ಹೇಳಿದ್ದಾರೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಬಡ್ಡಿದರವನ್ನು ಶೇ 0.75ರಷ್ಟು ಹೆಚ್ಚಿಸಿದೆ. ಅಲ್ಲದೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿದರ ಏರಿಕೆ ಮಾಡಬೇಕಾಗಬಹುದು ಎಂಬ ಎಚ್ಚರಿಕೆ ನೀಡಿದೆ. ಇದು ಹೂಡಿಕೆದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.