ADVERTISEMENT

ಷೇರುಪೇಟೆ: ತೀವ್ರ ಏರಿಳಿತ, ಹೂಡಿಕೆದಾರರಲ್ಲಿ ಆತಂಕ

ಹೂಡಿಕೆದಾರರ ಸಂಪತ್ತು ₹ 3.55 ಲಕ್ಷ ಚೇತರಿಕೆ

ಪಿಟಿಐ
Published 13 ಮಾರ್ಚ್ 2020, 19:45 IST
Last Updated 13 ಮಾರ್ಚ್ 2020, 19:45 IST
   

ಮುಂಬೈ: ಮುಂಬೈ ಷೇರುಪೇಟೆಯ ಶುಕ್ರವಾರದ ವಹಿವಾಟು ಭಾರಿ ಏರಿಳಿತ ಕಂಡು ಹೂಡಿಕೆದಾರರಲ್ಲಿ ಆತಂಕ ಮೂಡಿಸಿ ಅಂತಿಮವಾಗಿ 1,325 ಅಂಶಗಳ ಹೆಚ್ಚಳ ದಾಖಲಿಸಿತು.

ದಿನದ ವಹಿವಾಟು ಆರಂಭಗೊಂಡ 15 ನಿಮಿಷಗಳಲ್ಲಿಯೇ ಸಂವೇದಿ ಸೂಚ್ಯಂಕವು 3,380 ಅಂಶಗಳಿಗೂ ಹೆಚ್ಚು (ಶೇ 10.31) ಕುಸಿತ ಕಂಡು ಕೆಳಹಂತದ ಸರ್ಕ್ಯೂಟ್‌ ಮಿತಿ ತಲುಪಿತ್ತು. ಈ ಹೊತ್ತಿಗಾಗಲೇ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 13 ಲಕ್ಷ ಕೋಟಿಗಳಷ್ಟು ಕರಗಿತ್ತು. ಈ ಹಂತದ ಆಚೆಗೂ ಪೇಟೆ ಕುಸಿಯದಂತೆ ತಡೆಯಲು ತಕ್ಷಣಕ್ಕೆ ವಹಿವಾಟನ್ನು ತಾತ್ಕಾಲಿಕವಾಗಿ 45 ನಿಮಿಷಗಳವರೆಗೆ ಸ್ಥಗಿತಗೊಳಿಸಾಗಿತ್ತು. 10.30ಕ್ಕೆ ವಹಿವಾಟು ಪುನರಾರಂಭಗೊಂಡ ನಂತರ ಚೇತರಿಕೆ ಹಾದಿಯಲ್ಲಿ ಸಾಗಿತು. ಷೇರುಗಳು ಕಡಿಮೆ ಬೆಲೆಗೆ ಲಭ್ಯ ಇರುವುದರ ಪ್ರಯೋಜನ ಬಾಚಿಕೊಳ್ಳಲು ವಹಿವಾಟುದಾರರು ಗಮನ ಕೇಂದ್ರೀಕರಿಸಿದ್ದರಿಂದ ಪೇಟೆಯು ಚೇತರಿಕೆ ಕಂಡಿತು. ಹೂಡಿಕೆದಾರರ ಸಂಪತ್ತು ₹ 3.55 ಲಕ್ಷ ಚೇತರಿಕೆ ಕಂಡಿತು.

‘ಕೊರೊನಾ–2’ ವೈರಸ್‌ ಸೋಂಕಿನ ಪಿಡುಗು ವಿಶ್ವದಾದ್ಯಂತ ವ್ಯಾಪಿಸುತ್ತಿದೆ. ಇದರಿಂದ ಜಾಗತಿಕ ಅರ್ಥ ವ್ಯವಸ್ಥೆಯು ಹಿಂಜರಿತದತ್ತ ಸಾಗುವ ಭೀತಿಯು ವಿಶ್ವದ ಪ್ರಮುಖ ಷೇರುಪೇಟೆಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಲು ಧಾವಂತ ತೋರುತ್ತಿದ್ದಾರೆ. ಇದು ದೇಶಿ ಷೇರುಪೇಟೆಗಳಲ್ಲಿಯೂ ಆತಂಕ ಸೃಷ್ಟಿಸಿದೆ.

ADVERTISEMENT

ದಿನದ ವಹಿವಾಟಿನ ಒಂದು ಹಂತದಲ್ಲಿ 5,380 ಅಂಶಗಳಿಗೆ ಎರವಾಗಿದ್ದ ಸೂಚ್ಯಂಕವು ಆನಂತರ 1,325 ಅಂಶಗಳ ಚೇತರಿಕೆ ಕಂಡು 34,103 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 365 ಅಂಶ ಹೆಚ್ಚಳ ಸಾಧಿಸಿ 9,955 ಅಂಶಗಳಿಗೆ ತಲುಪಿತು.

ಸಂವೇದಿ ಸೂಚ್ಯಂಕದಲ್ಲಿನ ಬಹುತೇಕ ಕಂಪನಿಗಳ ಷೇರುಗಳು ಏರಿಕೆ ಕಂಡವು. ಎಸ್‌ಬಿಐ (ಶೇ 13), ಟಾಟಾ ಸ್ಟೀಲ್‌, ಎಚ್‌ಡಿಎಫ್‌ಸಿ, ಸನ್‌ ಫಾರ್ಮಾ, ಬಜಾಜ್‌ ಫೈನಾನ್ಸ್‌, ಭಾರ್ತಿ ಏರ್‌ಟೆಲ್‌ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳ ಬೆಲೆ ಹೆಚ್ಚಾಯಿತು.

‘ಸೆಬಿ’ ಭರವಸೆ: ವಹಿವಾಟಿನಲ್ಲಿ ಸ್ಥಿರತೆ ಮೂಡಿಸಲು ಷೇರುಪೇಟೆಗಳು ಮತ್ತು ಷೇರು ನಿಯಂತ್ರಣ ಮಂಡಳಿಯು (ಸೆಬಿ) ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸನ್ನದ್ಧವಾಗಿವೆ ಎಂದು ‘ಸೆಬಿ’ ಭರವಸೆ ನೀಡಿದೆ.

45 ನಿಮಿಷ ವಹಿವಾಟು ಸ್ಥಗಿತ
ಹನ್ನೆರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಷೇರುಪೇಟೆಯ ವಹಿವಾಟನ್ನು ಸ್ಥಗಿತಗೊಳಿಸಿದ ಘಟನೆಗೆ ಪೇಟೆಯು ಶುಕ್ರವಾರ ಸಾಕ್ಷಿಯಾಯಿತು. ಬಿಎಸ್‌ಇ ಮತ್ತು ಎನ್‌ಎಸ್‌ಇಗಳಲ್ಲಿನ ವಹಿವಾಟು ಕುಸಿತದ ಹಾದಿಯಲ್ಲಿ ಸಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿತ್ತು. ಪೇಟೆಯ ವಹಿವಾಟು 2008ರ ಜನವರಿ 22ರಂದು ಇದೇ ಬಗೆಯ ಭಾರಿ ಕುಸಿತಕ್ಕೆ ಒಳಗಾಗಿದ್ದರಿಂದ ವಹಿವಾಟನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.

ಭಯ ನಿವಾರಣೆಗೆ ಕ್ರಮ
‘ಕೊರೊನಾ–2’ ವೈರಸ್‌ ಹಾವಳಿಯು ಷೇರುಪೇಟೆಗಳಲ್ಲಿ ಸೃಷ್ಟಿಸಿರುವ ಆತಂಕ ದೂರ ಮಾಡಲು ಸರ್ಕಾರ ಮತ್ತು ಆರ್‌ಬಿಐ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿವೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಹೇಳಿದ್ದಾರೆ.

‘ದೇಶಿ ಆರ್ಥಿಕತೆಯ ಆಧಾರಸ್ತಂಭಗಳಾದ ಹಣದುಬ್ಬರ ಇಳಿಕೆ, ಕೈಗಾರಿಕಾ ಉತ್ಪಾದನೆಯಲ್ಲಿನ ಹೆಚ್ಚಳ ಮತ್ತು ವಿದೇಶಿ ವಿನಿಮಯ ಸಂಗ್ರಹವು ತೃಪ್ತಿದಾಯಕ ಮಟ್ಟದಲ್ಲಿ ಇರುವುದು ಷೇರುಪೇಟೆಯ ವಹಿವಾಟಿನಲ್ಲಿ ಪ್ರತಿಫಲನಗೊಳ್ಳುತ್ತಿಲ್ಲ. ಜಾಗತಿಕ ವಿದ್ಯಮಾನಗಳ ಕಾರಣಕ್ಕೆ ಪೇಟೆಯಲ್ಲಿ ಆತಂಕ ಉಂಟಾಗಿದೆ’ ಎಂದು ಅವರು ಹೇಳಿದ್ದಾರೆ.

*
ಷೇರುಪೇಟೆಯಲ್ಲಿನ ವಹಿವಾಟಿನ ಮೇಲೆ ಸರ್ಕಾರ ಮತ್ತು ಆರ್‌ಬಿಐ ತೀವ್ರ ನಿಗಾ ಇರಿಸಿವೆ.
-ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.