ADVERTISEMENT

ಹೊಸ ದಾಖಲೆ ಬರೆದ ಷೇರುಪೇಟೆ

ಪಿಟಿಐ
Published 20 ನವೆಂಬರ್ 2019, 20:15 IST
Last Updated 20 ನವೆಂಬರ್ 2019, 20:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆಯು (ಬಿಎಸ್‌ಇ) ಬುಧವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡು ವಹಿವಾಟು ನಡೆಸಿತು.

ರಿಲಯನ್ಸ್‌ ಇಂಡಸ್ಟ್ರೀಸ್‌, ಸನ್‌ ಫಾರ್ಮಾ ಮತ್ತು ಇಂಡಸ್‌ ಇಂಡ್‌ ಬ್ಯಾಂಕ್‌ ಷೇರುಗಳ ಉತ್ತಮ ಗಳಿಕೆಯಿಂದಾಗಿ ಷೇರುಪೇಟೆ ಸಕಾರಾತ್ಮಕ ವಹಿವಾಟು ನಡೆಯಿತು.

ಬಿಎಸ್‌ಇ ಸಂವೇದಿ ಸೂಚ್ಯಂಕವು ಮಧ್ಯಂತರ ವಹಿವಾಟಿನ 300 ಅಂಶಗಳಿಗೂ ಅಧಿಕ ಜಿಗಿತ ಕಂಡು 40,816 ಅಂಶಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿತ್ತು. ಆ ಬಳಿಕ ಏರಿಳಿತದ ವಹಿವಾಟು ನಡೆದಿದ್ದರಿಂದ ದಿನದ ಅಂತ್ಯಕ್ಕೆ ಒಟ್ಟಾರೆ ಗಳಿಕೆಯು 182 ಅಂಶಗಳಿಗಷ್ಟೇ ಸೀಮಿತವಾಗಿ ಸಾರ್ವಕಾಲಿಕ ದಾಖಲೆ ಮಟ್ಟವಾದ 40,651 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ ಸಹ 12 ಸಾವಿರದ ಗಡಿ ದಾಟಿತ್ತು. ದಿನದ ಅಂತ್ಯಕ್ಕೆ 59 ಅಂಶಗಳ ಗಳಿಕೆಯೊಂದಿಗೆ 11,999 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಯಿತು.

ಆರ್‌ಐಎಲ್‌ ಗಳಿಕೆ:ದೂರಸಂಪರ್ಕ ವಲಯದ ರಿಲಯನ್ಸ್‌ ಜಿಯೊ ಕಂಪನಿ ಸಹ ಮೊಬೈಲ್‌ ಸೇವಾ ಶುಲ್ಕ ಹೆಚ್ಚಿಸುವುದಾಗಿ ಹೇಳಿದೆ. ಇದರಿಂದಾಗಿರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಶೇ 2.47ರಷ್ಟು ಏರಿಕೆ ಕಂಡು ಪ್ರತಿ ಷೇರಿನ ಬೆಲೆ ₹ 1,547ಕ್ಕೆ ತಲುಪಿದೆ.

ಮಧ್ಯಂತರ ವಹಿವಾಟಿನಲ್ಲಿ ಪ್ರತಿ ಷೇರಿನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 1,572ಕ್ಕೆ ಏರಿಕೆಯಾಗಿತ್ತು.

ದಿನದ ವಹಿವಾಟಿನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 9.80 ಲಕ್ಷ ಕೋಟಿಗೆ ತಲುಪಿದೆ. ಬಿಎಸ್‌ಇನಲ್ಲಿ 11.40 ಲಕ್ಷ ಷೇರುಗಳು ಹಾಗೂ ಎನ್‌ಎಸ್‌ಇನಲ್ಲಿ 1.98 ಲಕ್ಷ ಷೇರುಗಳು ವಹಿವಾಟು ನಡೆಸಿವೆ. ಈ ವರ್ಷದಲ್ಲಿ ಇಲ್ಲಿಯವರೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರು ಬೆಲೆ ಶೇ 37ರಷ್ಟು ಜಿಗಿತ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.