ADVERTISEMENT

ಮುಂಬೈ ಷೇರುಪೇಟೆಯಲ್ಲಿ ಮಾರಾಟ ಒತ್ತಡ

ದಿನದ ವಹಿವಾಟಿನಲ್ಲಿ 38 ಸಾವಿರದಿಂದ ಕೆಳಗಿಳಿದ ಸಂವೇದಿ ಸೂಚ್ಯಂಕ

ಪಿಟಿಐ
Published 25 ಮಾರ್ಚ್ 2019, 20:15 IST
Last Updated 25 ಮಾರ್ಚ್ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ದೇಶದ ಷೇರುಪೇಟೆಗಳಲ್ಲಿ ಸೋಮವಾರ ನಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 38 ಸಾವಿರದಿಂದ ಕೆಳಗಿಳಿಯಿತು. ದಿನದ ವಹಿವಾಟಿನಲ್ಲಿ 356 ಅಂಶ ಇಳಿಕೆಯಾಗಿ 37,808 ಅಂಶಗಳಲ್ಲಿ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 102 ಅಂಶ ಇಳಿಕೆ ಕಂಡು 11,354 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಅಮೆರಿಕ ಮತ್ತು ಯುರೋಪ್‌ನ ಆರ್ಥಿಕ ಪ್ರಗತಿಯ ಅಂಕಿ–ಅಂಶಗಳು ಮಾರುಕಟ್ಟೆಯ ನಿರೀಕ್ಷೆಗಿಂತಲೂ ಕಡಿಮೆ ಇವೆ. ಇದರಿಂದಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗುವ ಆತಂಕ ಸೃಷ್ಟಿಯಾಗಿದೆ. ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರವೂ ಷೇರುಪೇಟೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೀಗಾಗಿ ಮಾರಾಟದ ಒತ್ತಡ ಕಂಡುಬಂದಿತು ಎಂದು ದಲ್ಲಾಳಿಗಳು ವಿಶ್ಲೇಷಣೆ ಮಾಡಿದ್ದಾರೆ.

ಏಷ್ಯಾದ ಷೇರುಪೇಟೆಗಳಲ್ಲಿ ಬಹುತೇಕ ಎಲ್ಲಾ ಸೂಚ್ಯಂಕಗಳು ಇಳಿಮುಖವಾಗಿ ಅಂತ್ಯಕಂಡಿವೆ. ಯುರೋಪಿನ ಷೇರುಗಳು ನಕಾರಾತ್ಮಕ ಮಟ್ಟದಲ್ಲಿ ವಹಿವಾಟು ನಡೆಸಿವೆ.

2018–19ನೇ ಹಣಕಾಸು ವರ್ಷದ ಅಂತ್ಯ ಸಮೀಪಿಸುತ್ತಿರುವುದರಿಂದ ಹೂಡಿಕೆದಾರರು ಹೆಚ್ಚಿನ ಖರೀದಿ ವಹಿವಾಟು ನಡೆಸಲು ಮುಂದಾಗಿಲ್ಲ. ಇದು ಸಹ ಸೂಚ್ಯಂಕದ ಓಟಕ್ಕೆ ತಡೆಯುಂಟುಮಾಡಿದೆ ಎಂದು ಷೇರುಪೇಟೆಯ ತಜ್ಞರು ಅಭಿಪ್ರಾಯ
ಪಟ್ಟಿದ್ದಾರೆ.

ಜೆಟ್‌ ಏರ್‌ವೇಸ್‌ ಷೇರು ಜಿಗಿತ
ಜೆಟ್‌ ಏರ್‌ವೇಸ್‌ನಿಂದ ನರೇಶ್‌ ಗೋಯಲ್‌ ಮತ್ತು ಅವರ ಪತ್ನಿ ಅನಿತಾ ಅವರು ರಾಜೀನಾಮೆ ನೀಡಿರುವುದರಿಂದ ಸಂಸ್ಥೆಯ ಷೇರುಗಳು ಶೇ 15.5ರಷ್ಟು ಏರಿಕೆ ಕಂಡಿವೆ.

ಬಿಎಸ್‌ಇನಲ್ಲಿ ಷೇರಿನ ಬೆಲೆ ಶೇ 12.69ರಷ್ಟು ಹೆಚ್ಚಾಗಿ ₹ 254.50ರಂತೆ ಅಂತ್ಯಗೊಂಡಿತು. ಎನ್‌ಎಸ್‌ಇನಲ್ಲಿ ಶೇ 15.46ರಷ್ಟು ಹೆಚ್ಚಾಗಿ ಪ್ರತಿ ಷೇರಿನ ಬೆಲೆ ₹ 261ರಂತೆ ಮಾರಾಟವಾಯಿತು. ಬಿಎಸ್‌ಇನಲ್ಲಿ 33.60 ಲಕ್ಷ ಹಾಗೂ ಎನ್‌ಎಸ್‌ಇನಲ್ಲಿ 4 ಕೋಟಿ ಷೇರುಗಳ ವಹಿವಾಟು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.