ADVERTISEMENT

ಲಾಭ ಗಳಿಕೆಯ ಉದ್ದೇಶದಿಂದ ಷೇರುಗಳ ಮಾರಾಟ; 549 ಅಂಶ ಕುಸಿದ ಸೆನ್ಸೆಕ್ಸ್

ಪಿಟಿಐ
Published 15 ಜನವರಿ 2021, 15:36 IST
Last Updated 15 ಜನವರಿ 2021, 15:36 IST

ಮುಂಬೈ: ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆದ ಪರಿಣಾಮವು ಮುಂಬೈ ಷೇರುಪೇಟೆಯ ಮೇಲೆಯೂ ಆಯಿತು. ವರ್ತಕರು ಲಾಭ ಗಳಿಕೆಯ ಉದ್ದೇಶದಿಂದ ಷೇರುಗಳ ಮಾರಾಟಕ್ಕೆ ಮುಂದಾದರು. ಇದರಿಂದಾಗಿ ಸೆನ್ಸೆಕ್ಸ್ 549 ಅಂಶಗಳ ಕುಸಿತ ಕಂಡಿತು.

ಕಂಪನಿಗಳು ಡಿಸೆಂಬರ್ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸುತ್ತಿವೆ, ಪ್ರಮುಖ ಕಂಪನಿಗಳು ಒಳ್ಳೆಯ ಸಾಧನೆ ತೋರಿವೆ. ಹೀಗಿದ್ದರೂ, ಲಾಭಗಳಿಕೆಯ ವಹಿವಾಟಿನ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು ಎಂದು ವರ್ತಕರು ತಿಳಿಸಿದ್ದಾರೆ.

ನಿಫ್ಟಿ 161 ಅಂಶಗಳಷ್ಟು ಇಳಿಕೆ ಕಂಡು, 14,433 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ಸೆನ್ಸೆಕ್ಸ್‌ನಲ್ಲಿ ಟೆಕ್ ಮಹೀಂದ್ರ ಕಂಪನಿಯ ಷೇರುಮೌಲ್ಯ ಅತಿಹೆಚ್ಚಿನ ಕುಸಿತವನ್ನು ಕಂಡಿತು. ಎಚ್‌ಸಿಎಲ್‌ ಟೆಕ್‌, ಒಎನ್‌ಜಿಸಿ, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್‌ ಸಿಮೆಂಟ್, ಎಚ್‌ಡಿಎಫ್‌ಸಿ ಮತ್ತು ಎಚ್‌ಯುಎಲ್‌ ಷೇರುಗಳ ಬೆಲೆಯಲ್ಲಿಯೂ ಇಳಿಕೆ ಆಯಿತು.

ADVERTISEMENT

ಸೆನ್ಸೆಕ್ಸ್‌ನಲ್ಲಿ ಭಾರ್ತಿ ಏರ್‌ಟೆಲ್‌, ಐಟಿಸಿ, ಬಜಾಜ್ ಆಟೊ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಮಾತ್ರ ಮೌಲ್ಯ ಹೆಚ್ಚಿಸಿಕೊಂಡವು. ಅಮೆರಿಕದ ಅಧ್ಯಕ್ಷರಾಗಿ ಚುನಾಯಿತ ಆಗಿರುವ ಜೋ ಬೈಡೆನ್ ಅವರು ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಿಸಿದ್ದರೂ, ಹೂಡಿಕೆದಾರರು ತೆರಿಗೆ ಹೆಚ್ಚಳ ಹಾಗೂ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆಗಳ ಬಗ್ಗೆ ಗಮನ ಹರಿಸಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯಲು ಕಾರಣವಾಯಿತು.

ತೈಲ ಬೆಲೆ ಇಳಿಕೆ: ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಆಗಿದೆ. ಪ್ರತಿ ಬ್ಯಾರೆಲ್‌ಗೆ ಶೇ 1.77ರಷ್ಟು ಇಳಿಕೆ ಕಂಡಿರುವ ಬ್ರೆಂಟ್ ಕಚ್ಚಾ ತೈಲವು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 55.42 ಅಮೆರಿಕನ್ ಡಾಲರ್‌ಗೆ ಮಾರಾಟವಾಗಿದೆ. ಅಮೆರಿಕದ ಡಾಲರ್ ಎದುರು ರೂಪಾಯಿಯ ಮೌಲ್ಯದಲ್ಲಿ 3 ‍ಪೈಸೆ ಇಳಿಕೆ ಆಗಿದೆ.

ಸಂಪತ್ತು ನಷ್ಟ: ಶುಕ್ರವಾರದ ವಹಿವಾಟಿನಲ್ಲಿ ಹೂಡಿಕೆದಾರರು ಒಟ್ಟು ₹ 2.23 ಲಕ್ಷ ಕೋಟಿ ಸಂಪತ್ತು ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.