ADVERTISEMENT

ಷೇರುಪೇಟೆಗಳಲ್ಲಿ ಗಳಿಕೆ–ಇಳಿಕೆ: 800 ಅಂಶ ಏರಿ ದಿಢೀರ್‌ ಕುಸಿದ ಸೆನ್ಸೆಕ್ಸ್‌

ಏಜೆನ್ಸೀಸ್
Published 15 ಏಪ್ರಿಲ್ 2020, 8:49 IST
Last Updated 15 ಏಪ್ರಿಲ್ 2020, 8:49 IST
ಷೇರುಪೇಟೆಗಳಲ್ಲಿ ಗಳಿಕೆ–ಇಳಿಕೆ
ಷೇರುಪೇಟೆಗಳಲ್ಲಿ ಗಳಿಕೆ–ಇಳಿಕೆ   

ಬೆಂಗಳೂರು: ಕೊರೊನಾ ವೈರಸ್ ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್‌ ವಿಸ್ತರಣೆ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭ ಮಾಡುವ ಸರ್ಕಾರ ನಿರ್ಧಾರಗಳಿಂದಾಗಿ ಷೇರುಪೇಟೆಗಳಲ್ಲಿ ಬೆಳಗಿನ ವಹಿವಾಟಿನಲ್ಲಿಖರೀದಿ ಉತ್ಸಾಹ ಕಂಡು ಬಂದಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 813.33 ಅಂಶ ಏರಿಕೆ ಕಂಡು 31,543.91 ಅಂಶಗಳ ವರೆಗೂ ತಲುಪಿತು. ಮಧ್ಯಾಹ್ನದ ವೇಳೆಗೆ ಇಳಿಮುಖವಾಗಿ ನಷ್ಟ ದಾಖಲಾಯಿತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 244 ಅಂಶ (ಶೇ 2.78) ಚೇತರಿಕೆಯೊಂದಿಗೆ 9,236 ಅಂಶಗಳನ್ನು ತಲುಪಿತು. ಬ್ಯಾಂಕ್‌, ಹಣಕಾಸು ಕಂಪನಿಗಳು, ಫಾರ್ಮಾ, ಎಫ್‌ಎಂಸಿಜಿ (ತ್ವರಿತ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳು) ಹಾಗೂ ಲೋಹ ವಲಯದ ಬಹುತೇಕ ಕಂಪನಿಗಳ ಷೇರುಗಳು ಗಳಿಕೆ ದಾಖಲಿಸಿದವು.

ಯುಪಿಎಲ್‌, ಇಂಡಸ್‌ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಐಟಿಸಿ ಹಾಗೂ ಐಸಿಐಸಿಐ ಬ್ಯಾಂಕ್‌, ಗ್ಲೆನ್‌ಮಾರ್ಕ್‌, ಅರವಿಂದೊ ಫಾರ್ಮಾ, ಸನ್‌ಫಾರ್ಮಾ, ಸಿಪ್ಲಾ, ಡಾ.ರೆಡ್ಡೀಸ್‌, ಎಸ್‌ಬಿಐ, ಬ್ರಿಟಾನಿಯಾ, ಹಿಂದುಸ್ತಾನ್‌ ಯೂನಿಲಿವರ್‌ ಷೇರುಗಳು ಶೇ 2 ರಿಂದ ಶೇ 12.5ರಷ್ಟು ಏರಿಕೆ ಕಂಡಿವೆ. ಇದರೊಂದಿಗೆ ಐಟಿ ವಲಯದ ಷೇರುಗಳು ಸಹ ಅಲ್ಪ ಗಳಿಕೆ ಕಂಡವು.

ADVERTISEMENT

ಆದರೆ, ಮಧ್ಯಾಹ್ನ 2ರ ನಂತರಷೇರುಪೇಟೆ ಸೂಚ್ಯಂಕಗಳುತೀವ್ರಇಳಿಮುಖವಾದವು.ಮಧ್ಯಾಹ್ನ 2:20ಕ್ಕೆ ಹಿಂದಿನ ವಹಿವಾಟು ಅಂತ್ಯದ ಮಟ್ಟಕ್ಕಿಂತ 300 ಅಂಶ ಕುಸಿದ ಸೆನ್ಸೆಕ್ಸ್‌ 30,383.09 ಅಂಶ ತಲುಪಿತು. ನಿಫ್ಟಿ 62.65 ಅಂಶ ಇಳಿಕೆಯಾಗಿ 8,931.20 ಅಂಶಗಳಲ್ಲಿ ವಹಿವಾಟು ನಡೆದಿದೆ.

ಮಧ್ಯಾಹ್ನ 12:45ರ ಬಳಿಕ ಷೇರುಪೇಟೆಗಳು ಅಲ್ಪಾವಧಿಯ ಇಳಿಕೆ ಕಂಡವು. ಹೂಡಿಕೆದಾರರಲ್ಲಿನ ಕೊರೊನಾ ಭೀತಿ ಏರಿಳಿತಕ್ಕೆ ಕಾರಣವಾಗಿದೆ. ಮಂಗಳವಾರ ಶೇ 6.7ರಷ್ಟು ಕುಸಿದಿದ್ದ ಬ್ರೆಂಟ್‌ ಕಚ್ಚಾ ತೈಲ ಫ್ಯೂಚರ್ಸ್‌, ಬುಧವಾರ ಏರಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ ಶೇ 1.3ರಷ್ಟು ಹೆಚ್ಚಿದ್ದು, 29.98 ಡಾಲರ್‌ ತಲುಪಿದೆ.

2020‌ರಲ್ಲಿ ಭಾರತದ ಜಿಡಿಪಿ ವೃದ್ಧಿ ಶೇ 1.9ರಷ್ಟಿರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜು ಮಾಡಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕವಾಗಿರುವುದು ಹಾಗೂ ಲಾಕ್‌ಡೌನ್‌ ಪರಿಣಾಮದಿಂದ ಜಾಗತಿಕ ಆರ್ಥಿಕತೆಯು ಆರ್ಥಿಕ ಹಿಂಜರಿತಕ್ಕೆ ಒಳಗಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.