ADVERTISEMENT

ಕೊರೊನಾ ವೈರಸ್ ಸೋಂಕು ಪ್ರಮಾಣ ಇಳಿಕೆ; ಷೇರುಪೇಟೆಯಲ್ಲಿ ಪುಟಿದೆದ್ದ ಖರೀದಿ ಉತ್ಸಾಹ

ಏಜೆನ್ಸೀಸ್
Published 11 ಫೆಬ್ರುವರಿ 2020, 6:12 IST
Last Updated 11 ಫೆಬ್ರುವರಿ 2020, 6:12 IST
ಷೇರುಪೇಟೆಗಳಲ್ಲಿ ಗೂಳಿ ಓಟ
ಷೇರುಪೇಟೆಗಳಲ್ಲಿ ಗೂಳಿ ಓಟ   

ಮುಂಬೈ: ಕೊರೊನಾ ವೈರಸ್‌ ಸೋಂಕು ಹರಡುತ್ತಿರುವ ಪ್ರಮಾಣದಲ್ಲಿ ಇಳಿಕೆ ಮತ್ತು ಚೀನಾದ ಕೆಲವು ಕಾರ್ಖಾನೆಗಳು ಕಾರ್ಯಾರಂಭಿಸಿರುವ ಬೆನ್ನಲೇ ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಚೇತರಿಕೆ ಕಂಡು ಬಂದಿದೆ. 400 ಅಂಶಗಳ ಏರಿಕೆಯೊಂದಿಗೆ ಸೆನ್ಸೆಕ್ಸ್‌ ವಹಿವಾಟು ಆರಂಭವಾಯಿತು.

ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಎಚ್‌ಡಿಎಫ್‌ ಬ್ಯಾಂಕ್‌ ಷೇರುಗಳು ಸಕಾರಾತ್ಮ ವಹಿವಾಟು ಕಂಡಿವೆ. ಮುಂಬೈ ಷೇರುಪೇಟೆಯ 30 ಕಂಪನಿಗಳ ಷೇರುಗಳ ಖರೀದಿ ಭರಾಟೆ ಹೆಚ್ಚಿದ ಪರಿಣಾಮ ಸೆನ್ಸೆಕ್ಸ್‌ 405.61 ಅಂಶ ಚೇತರಿಕೆಯೊಂದಿಗೆ 41,385.23 ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 123.10 ಅಂಶ ಏರಿಕೆಯೊಂದಿಗೆ 12,154.60 ಅಂಶ ಮುಟ್ಟಿದೆ.

ಸೋಮವಾರ ವಿದೇಶ ಸಾಂಸ್ಥಿಕ ಹೂಡಿಕೆದಾರರು ₹184.58 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ಸ್ಥಳೀಯ ಸಾಂಸ್ಥಿಕ ಹೂಡಿಕೆದಾರರು ₹ 735.79 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ADVERTISEMENT

ಟಾಟಾ ಸ್ಟೀಲ್‌, ಆ್ಯಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ, ಐಟಿಸಿ, ಅಲ್ಟ್ರಾಟೆಕ್‌ ಸಿಮೆಂಟ್‌, ಇಂಡಸ್‌ಇಂಡ್ ಬ್ಯಾಂಕ್‌ ಹಾಗೂ ಐಸಿಐಸಿಐ ಬ್ಯಾಂಕ್‌, ಟಾಟಾ ಮೋಟಾರ್ಸ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಷೇರುಗಳು ಗಳಿಕೆ ದಾಖಲಿಸಿವೆ. ಆದರೆ, ಟಿಸಿಎಸ್‌ ಷೇರು ಮಾರಾಟ ಒತ್ತಡಕ್ಕೆ ಸಿಲುಕಿದೆ.

ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದಾಗಿ ಸಾವಿಗೀಡಾದವರ ಸಂಖ್ಯೆ 1,000 ದಾಟಿದೆ ಹಾಗೂ ಸುಮಾರು 42,000 ಮಂದಿಗೆ ಸೋಂಕು ತಗುಲಿರುವುದಾಗಿ ವರದಿಯಾಗಿದೆ. ನಿತ್ಯ ಸೋಂಕಿಗೆ ಒಳಗಾಗುತ್ತಿರುವ ಪ್ರಮಾಣ ಸೋಮವಾರ 2,097ಕ್ಕೆ ಇಳಿಕೆಯಾಗಿರುವುದು ಷೇರುಪೇಟೆ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ. ಭಾನುವಾರ ಸೋಂಕು ತಗುಲಿದವರ ಸಂಖ್ಯೆ 2,618 ಇತ್ತು.

ಎಲೆಕ್ಟ್ರಾನಿಕ್ಸ್‌ ಹಾಗೂ ಆಟೊ ಮೊಬೈಲ್‌ ವಲಯಕ್ಕೆ ಅಗತ್ಯವಿರುವ ಬಿಡಿಭಾಗಗಳನ್ನು ತಯಾರಿಸುವ ಅತಿ ಹೆಚ್ಚು ಕಾರ್ಖಾನೆಗಳು ಚೀನಾದಲ್ಲಿವೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಚೀನಾದಿಂದ ಬಿಡಿಭಾಗಗಳನ್ನು ರಫ್ತು ಮಾಡಲಾಗುತ್ತಿದೆ.

ಶಾಂಘೈ, ಹಾಂಕಾಂಗ್‌ ಹಾಗೂ ಸೋಲ್‌ ಷೇರುಪೇಟೆಗಳಲ್ಲೂ ಸಕಾರಾತ್ಮಕ ವಹಿವಾಟು ಕಂಡು ಬಂದಿದೆ. ಜಪಾನ್‌ನಲ್ಲಿ ಸಾರ್ವಜನಿಕ ರಜೆಯ ಕಾರಣ ಇಂದು ಟೋಕಿಯೊ ಷೇರುಪೇಟೆ ಕಾರ್ಯನಿರ್ವಹಿಸುತ್ತಿಲ್ಲ. ಅಮೆರಿಕದ ವಾಲ್‌ ಸ್ಟ್ರೀಟ್‌ನಲ್ಲೂ ಸೋಮವಾರ ಖರೀದಿ ಭರಾಟೆ ದಾಖಲಾಗಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ 4 ಪೈಸೆ ವೃದ್ಧಿಯಾಗಿದ್ದು, ₹ 71.23ರಲ್ಲಿ ವಹಿವಾಟು ನಡೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 54.01 ಡಾಲರ್‌ ಆಗಿದೆ. ಪೂರೈಕೆ ಹೆಚ್ಚಳವಾಗಿ ಬೇಡಿಕೆ ಕುಸಿದ ಪರಿಣಾಮ ಈ ತಿಂಗಳು ಕಚ್ಚಾ ತೈಲ ದರ ಶೇ 7.3ರಷ್ಟು ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.