ADVERTISEMENT

ಜುಲೈ ಬಳಿಕ ಮೊದಲ ಬಾರಿಗೆ 40,000 ಗಡಿ ದಾಟಿದ ಷೇರುಪೇಟೆ ಸೂಚ್ಯಂಕ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 11:55 IST
Last Updated 30 ಅಕ್ಟೋಬರ್ 2019, 11:55 IST
ಷೇರುಪೇಟೆಯಲ್ಲಿ ಗೂಳಿ ಓಟ
ಷೇರುಪೇಟೆಯಲ್ಲಿ ಗೂಳಿ ಓಟ   

ಮುಂಬೈ: ದೇಶೀಯ ಷೇರುಪೇಟೆಗಳಲ್ಲಿ ಮಂಗಳವಾರ ನಡೆದ ಸಕಾರಾತ್ಮಕ ವಹಿವಾಟು ಬುಧವಾರವೂ ಮುಂದುವರಿದ ಪರಿಣಾಮ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಸೆನ್ಸೆಕ್ಸ್‌) 40,000 ಅಂಶಗಳ ಗಡಿ ದಾಟಿತು. ಜುಲೈ 5ರ ಬಳಿಕ ಇದೇ ಮೊದಲ ಬಾರಿದೆ ಸೂಚ್ಯಂಕ 40 ಸಾವಿರದಿಂದ ಮುಂದಕ್ಕೆ ಜಿಗಿತ ಕಂಡಿದೆ.

ಇದೇ ವರ್ಷ ಜೂನ್‌ 4ರಂದು ಸೆನ್ಸೆಕ್ಸ್‌ ಸಾರ್ವಕಾಲಿಕ ದಾಖಲೆ 40,312 ಅಂಶಗಳನ್ನು ಮುಟ್ಟಿತ್ತು. ಬುಧವಾರ ಆರಂಭದಲ್ಲೇ ಮುಂಬೈ ಷೇರುಪೇಟೆ(ಬಿಎಸ್‌ಇ) ಸಂವೇದಿ ಸೂಚ್ಯಂಕ 268 ಅಂಶ ಜಿಗಿಯುವ ಮೂಲಕ 40,000 ಅಂಶ ದಾಟಿತು.11,787 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದ್ದ ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್‌ಇ) ಸಂವೇದಿ ಸೂಚ್ಯಂಕ(ನಿಫ್ಟಿ) 11,883 ಅಂಶಗಳಿಂದ ವಹಿವಾಟು ಆರಂಭಗೊಂಡಿತು.

ಸೂಚ್ಯಂಕ ಏರಿಕೆಯಿಂದಾಗಿ ಭಾರತಿ ಏರ್ಟೆಲ್‌, ಎಲ್‌ಆ್ಯಂಡ್‌ಟಿ, ಇನ್ಫೊಸಿಸ್, ಐಟಿಸಿ, ವೇದಾಂತ, ಎಚ್‌ಡಿಎಫ್‌ಸಿ ಬ್ಯಾಂಕ್‌, ಬಜಾಜ್‌ ಆಟೊ, ಕೋಟಕ್‌ ಬ್ಯಾಂಕ್‌ ಹಾಗೂ ಸನ್‌ ಫಾರ್ಮಾ ಷೇರುಗಳ ಬೆಲೆ ಶೇ 2ರಷ್ಟು ಹೆಚ್ಚಳ ಕಂಡಿವೆ.

ADVERTISEMENT

ಟಾಟಾ ಮೋಟಾರ್ಸ್‌, ಯೆಸ್‌ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಟಾಟಾ ಸ್ಟೀಲ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಟಿಸಿಎಸ್‌ ಷೇರುಗಳ ಬೆಲೆ ಶೇ 3ರಷ್ಟು ಕುಸಿತ ಕಂಡಿವೆ.

ವಿದೇಶಿ ಸಾಂಸ್ಥಿಕಹೂಡಿಕೆದಾರರು ಮಂಗಳವಾರ ₹876.64 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ಸ್ಥಳೀಯ ಹೂಡಿಕೆದಾರರು ₹144.75 ಕೋಟಿ ಮೌಲ್ಯದ ಷೇರುಗಳ ಖರೀದಿ ನಡೆಸಿದ್ದಾರೆ. ಬುಧವಾರವೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಖರೀದಿ ಉತ್ಸಾಹ ತೋರಿರುವುದರಿಂದ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ದಾಖಲಾಗಿದೆ.

ಜುಲೈ 5 ರಂದು ಕೇಂದ್ರ ಬಜೆಟ್‌ ಮಂಡನೆಗೂ ಮುನ್ನ ಬಂಡವಾಳ ಮೌಲ್ಯ ₹ 151.35 ಲಕ್ಷ ಕೋಟಿಗಳಷ್ಟಿತ್ತು.ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಬಂಡವಾಳ ಮೌಲ್ಯವು ₹ 138 ಲಕ್ಷ ಕೋಟಿಗೂ ಇಳಿಕೆ ಕಂಡಿತ್ತು. ಇದರಿಂದ ಹೂಡಿಕೆದಾರರ ಸಂಪತ್ತು ₹ 13.35 ಲಕ್ಷ ಕೋಟಿಗೂ ಹೆಚ್ಚು ಕರಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.