
ಮುಂಬೈ: ಸತತ ಐದು ವಹಿವಾಟಿನ ದಿನಗಳಲ್ಲಿ ಕುಸಿತದ ಹಾದಿಯಲ್ಲಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸೋಮವಾರ ಏರಿಕೆ ದಾಖಲಿಸಿವೆ. ಸೋಮವಾರ ಕೂಡ ಆರಂಭಿಕ ಹಂತದಲ್ಲಿ ಕುಸಿದಿದ್ದ ಸೂಚ್ಯಂಕಗಳು ನಂತರದಲ್ಲಿ ಏರಿಕೆ ಕಂಡವು.
ಇಂಧನ, ಬ್ಯಾಂಕಿಂಗ್ ಮತ್ತು ಲೋಹದ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಸೋಮವಾರ ವಹಿವಾಟಿನಲ್ಲಿ ಏರುಹಾದಿ ಹಿಡಿದವು.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 301 ಅಂಶ ಹೆಚ್ಚಳವಾಗಿ, 83,878ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 106 ಅಂಶ ಏರಿಕೆಯಾಗಿ, 25,473ಕ್ಕೆ ಕೊನೆಗೊಂಡಿದೆ. ವಹಿವಾಟಿನ ವೇಳೆ ಸೆನ್ಸೆಕ್ಸ್ 715 ಅಂಶ ಮತ್ತು ನಿಫ್ಟಿ 209 ಅಂಶ ಇಳಿಕೆ ಆಗಿತ್ತು.
ಬ್ರೆಂಟ್ ಕಚ್ಚಾ ತೈಲ ದರವು ಶೇ 0.27ರಷ್ಟು ಇಳಿಕೆಯಾಗಿದೆ. ಪ್ರತೀ ಬ್ಯಾರಲ್ ದರವು 63.17 ಡಾಲರ್ ಆಗಿದೆ.
‘ಭಾರತ ಮತ್ತು ಅಮೆರಿಕದ ವ್ಯಾಪಾರ ಒಪ್ಪಂದದ ಮಾತುಕತೆಯು ಪ್ರಗತಿಯಲ್ಲಿದ್ದು, ಅದು ಮುಂದುವರಿಯಲಿದೆ ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಗಿಯೊ ಗೋರ್ ಹೇಳಿರುವುದಾಗಿ ವರದಿಯಾದ ನಂತರದಲ್ಲಿ ಹೂಡಿಕೆದಾರರಲ್ಲಿನ ಆತಂಕ ಕಡಿಮೆ ಆಗಿದ್ದರಿಂದ, ಹೂಡಿಕೆದಾರರು ಷೇರುಗಳ ಖರೀದಿಗೆ ಮುಂದಾದರು. ಇದು ದೇಶದ ಷೇರುಪೇಟೆ ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು’ ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಹಿರಿಯ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.
ಗೋರ್ ಹೇಳಿದ್ದೇನು?: ‘ಅಮೆರಿಕದ ಪಾಲಿಗೆ ಭಾರತಕ್ಕಿಂತ ಮುಖ್ಯವಾದ ದೇಶ ಇನ್ನೊಂದಿಲ್ಲ. ಉಭಯ ರಾಷ್ಟ್ರಗಳು ತಮ್ಮ ನಡುವಿನ ವ್ಯಾಪಾರ ಒಪ್ಪಂದ ಸಾಧ್ಯವಾಗಿಸಲು ಸಕ್ರಿಯವಾಗಿ ಮಾತುಕತೆಯಲ್ಲಿ ತೊಡಗಿವೆ’ ಎಂದು ಗೋರ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.