ADVERTISEMENT

ಷೇರುಪೇಟೆ | ಹೆಚ್ಚಳ ಕಂಡ ಷೇರುಪೇಟೆ ಸೂಚ್ಯಂಕಗಳು

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 20:30 IST
Last Updated 31 ಜುಲೈ 2022, 20:30 IST
   

ಜುಲೈ 29ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಪ್ರಗತಿ ಸಾಧಿಸಿವೆ. 57,570 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 2.67ರಷ್ಟು ಜಿಗಿದಿದೆ. 17,158 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 2.62ರಷ್ಟು ಹೆಚ್ಚಳ ದಾಖಲಿಸಿದೆ. ರೂಪಾಯಿ ಮೌಲ್ಯ ಚೇತರಿಕೆ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ, ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಪನಿಗಳ ಉತ್ತಮ ಸಾಧನೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿ ಹೆಚ್ಚಿದ ಉತ್ಸಾಹ, ದೇಶಿ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಸೇರಿ ಹಲವು ಅಂಶಗಳು ಸೂಚ್ಯಂಕಗಳ ಜಿಗಿತಕ್ಕೆ ಕಾರಣವಾಗಿವೆ. ಒಟ್ಟಾರೆಯಾಗಿ ಜುಲೈನಲ್ಲಿ ಸೂಚ್ಯಂಕಗಳು ಶೇ 8.5ರಷ್ಟು ಜಿಗಿದಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ವಲಯ ಶೇ 7.7ರಷ್ಟು, ಮಾಧ್ಯಮ ವಲಯ ಶೇ 5ರಷ್ಟು ಮತ್ತು ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 3.5ರಷ್ಟು ಹೆಚ್ಚಳ ದಾಖಲಿಸಿವೆ.

ಈ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 145.87 ಕೋಟಿ ಮೌಲ್ಯದ ಷೇರುಗಳನ್ನು ಮಾತ್ರ ಮಾರಾಟ ಮಾಡಿದ್ದು ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 2,238.51 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ADVERTISEMENT

ಗಳಿಕೆ–ಇಳಿಕೆ: ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕದಲ್ಲಿ ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಇಂಡಸ್ ಇಂಡ್ ಬ್ಯಾಂಕ್ ಉತ್ತಮ ಗಳಿಕೆ ಕಂಡಿವೆ. ಜೊಮಾಟೊ, ಪಿಬಿ ಫಿನ್‌ಟೆಕ್, ಪೇಟಿಎಂ, ಡಾ ರೆಡ್ಡೀಸ್ ಕುಸಿತ ದಾಖಲಿಸಿವೆ.

ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 1.6ರಷ್ಟು ಹೆಚ್ಚಳ ಕಂಡಿದೆ. ಎಚ್‌ಎಎಲ್, ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್, ಬಜಾಜ್ ಹೋಲ್ಡಿಂಗ್ಸ್ ಆ್ಯಂಡ್ ಇನ್ವೆಸ್ಟ್‌ಮೆಂಟ್, ಪೇಜ್ ಇಂಡಸ್ಟ್ರೀಸ್, ಅದಾನಿ ಪವರ್, ಸನ್ ನೆಟ್‌ನರ್ಕ್ ಗಳಿಕೆ ಕಂಡಿವೆ. ಮಹಿಂದ್ರ ಆ್ಯಂಡ್‌ ಮಹೀಂದ್ರ ಫೈನಾನ್ಸಿಯಲ್ ಸರ್ವಿಸಸ್, ಶ್ರೀರಾಮ್‌ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಾರ್ಪೊರೇಷನ್, ಬಯೋಕಾನ್ ಮತ್ತು ಇಂದ್ರಪ್ರಸ್ಥ ಗ್ಯಾಸ್ ಕುಸಿತ ಕಂಡಿವೆ.

ಮುನ್ನೋಟ: ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ರೆಪೊ ದರವನ್ನು ಇನ್ನಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದೆ. ಈ ವಾರ ನಡೆಯಲಿರುವ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಆರ್‌ಬಿಐ ಬಡ್ಡಿದರವನ್ನು 35 ಮೂಲಾಂಶಗಳಷ್ಟು ಹೆಚ್ಚಳ ಮಾಡಬಹುದು ಎಂಬ ಅಂದಾಜು ಇದೆ. ಬಡ್ಡಿ ದರ ಹೆಚ್ಚಳವಾದರೆ ಅದು ಮಾರುಕಟ್ಟೆ ಮೇಲೆ ಒಂದಿಷ್ಟು ಪರಿಣಾಮ ಬೀರಲಿದೆ.

ಐಟಿಸಿ, ಬರ್ಜರ್ ಪೇಂಟ್ಸ್, ಡಾಬರ್, ಬಿಎಚ್ಇಎಲ್, ಬ್ರಿಟಾನಿಯಾ, ಜೊಮಾಟೊ, ವೋಲ್ಟಾಸ್, ಲುಪಿನ್, ಬಜಾಜ್ ಕನ್ಸೂಮರ್ ಕೇರ್, ಬಾರ್ಬಿಕ್ಯೂ, ಎವರಿಡೇ, ಎಸ್ಕಾರ್ಟ್ಸ್, ಗುಡ್ ಇಯರ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.