ADVERTISEMENT

ಷೇರುಪೇಟೆಯ ಮಹಾಪತನ: ಕಚ್ಚಾ ತೈಲ ಬೆಲೆ ಇಳಿಕೆ ಸಮರ

ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ ಹೆಚ್ಚಿಸಿದ ಕೋವಿಡ್‌ ಹಾವಳಿ

ಏಜೆನ್ಸೀಸ್
Published 9 ಮಾರ್ಚ್ 2020, 20:28 IST
Last Updated 9 ಮಾರ್ಚ್ 2020, 20:28 IST
   
""
""

ಮುಂಬೈ / ನವದೆಹಲಿ (ಎಎಫ್‌ಪಿ, ಪಿಟಿಐ): ವಿವಿಧ ದೇಶಗಳಿಗೆ ಕ್ಷಿಪ್ರಗತಿಯಲ್ಲಿ ಹಬ್ಬುತ್ತಿರುವ ‘ಕೋವಿಡ್‌–19’ ವೈರಸ್‌ ಹಾವಳಿಯಿಂದ ಕಂಡು ಬರಲಿರುವ ಆರ್ಥಿಕ ಪರಿಣಾಮಗಳ ಅನಿಶ್ಚಿತತೆ ಮತ್ತು ರಾತ್ರಿ ಬೆಳಗಾಗುವುದರೊಳಗೆ ಕಚ್ಚಾ ತೈಲ ಬೆಲೆಯಲ್ಲಿನ ಭಾರಿ ಕುಸಿತದ ಆಘಾತಗಳ ಕಾರಣಕ್ಕೆ ಜಾಗತಿಕ ಷೇರುಪೇಟೆಗಳಲ್ಲಿ ಸೋಮವಾರ ಮಹಾ ಪತನ ಕಂಡು ಬಂದಿತು.

ಸೌದಿ ಆರೇಬಿಯಾ, ರಷ್ಯಾದ ವಿರುದ್ಧ ಆಕ್ರಮಣಕಾರಿ ರೀತಿಯಲ್ಲಿ ಕಚ್ಚಾ ತೈಲದ ಬೆಲೆ ಸಮರ ಆರಂಭಿಸಿದೆ. 1991ರ ಕೊಲ್ಲಿ ಸಮರದ ನಂತರದ ದಿನದ ಅತಿದೊಡ್ಡ ಬೆಲೆ ಕಡಿತ ಇದಾಗಿದೆ. ಹೀಗಾಗಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 32.11 ಡಾಲರ್‌ಗೆ ಕುಸಿದಿದೆ. ಇದರಿಂದಾಗಿ ಹೂಡಿಕೆದಾರರು ಷೇರುಪೇಟೆಯಿಂದ ವಿಮುಖರಾದರು. ಷೇರುಪೇಟೆ ಸಂವೇದಿ ಸೂಚ್ಯಂಕಗಳು ಮುಗ್ಗರಿಸಿದವು.

ಮುಂಬೈ ಷೇರುಪೇಟೆಯಲ್ಲಿ ಕಂಡು ಬಂದ ವಿದೇಶಿ ಹೂಡಿಕೆದಾರರ ತೀವ್ರ ಸ್ವರೂಪದ ಮಾರಾಟ ಒತ್ತಡ ಮತ್ತು ಯೆಸ್‌ ಬ್ಯಾಂಕ್‌ ಹಗರಣದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಸ್ಥಿರತೆ ಕುರಿತು ಮೂಡಿರುವ ಅನುಮಾನಗಳು ದೇಶಿ ಹೂಡಿಕೆದಾರರ ಖರೀದಿ ಉತ್ಸಾಹ ಉಡುಗಿಸಿದವು. ಹಿಂದಿನ 15 ವಹಿವಾಟು ದಿನಗಳಲ್ಲಿ ವಿದೇಶಿ ಹೂಡಿಕೆದಾರರು ಷೇರುಗಳನ್ನು ನಿರಂತರವಾಗಿ ಮಾರಾಟ ಮಾಡುತ್ತ ಬಂದಿದ್ದಾರೆ. ಫೆಬ್ರುವರಿ 24ರಿಂದೀಚೆಗೆ ಪ್ರತಿ ದಿನ ಮಾರಾಟಕ್ಕೆ ಮುಗಿ ಬಿದ್ದಿದ್ದಾರೆ. ಸೋಮವಾರ ಈ ಮಾರಾಟ ಒತ್ತಡವು ತೀವ್ರವಾಗಿತ್ತು. ಹೀಗಾಗಿ ಷೇರುಪೇಟೆಯಲ್ಲಿ ತಲ್ಲಣ ಕಂಡುಬಂದಿತು. ಡಾಲರ್‌ ಎದುರಿನ ರೂಪಾಯಿ ಬೆಲೆಯೂ ₹ 74.17ಕ್ಕೆ ಕುಸಿಯಿತು.

ADVERTISEMENT

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು ವಹಿವಾಟಿನ ಒಂದು ಹಂತದಲ್ಲಿ 2,467 ಗರಿಷ್ಠ ಅಂಶಗಳ ಕುಸಿತಕ್ಕೆ ಸಾಕ್ಷಿಯಾಗಿತ್ತು. ದಿನದಂತ್ಯಕ್ಕೆ 1,941 ಅಂಶಗಳೊಂದಿಗೆ ವಹಿವಾಟು ಕೊನೆ ಗೊಳಿಸಿತು. ಷೇರುಪೇಟೆಯ ಇತಿಹಾಸದಲ್ಲಿನ ಅತಿದೊಡ್ಡ ಕುಸಿತ ಇದಾಗಿದೆ.

ಸೌದಿ ಅರೇಬಿಯಾದ ಷೇರುಪೇಟೆ ಕೂಡ ದಿನದ ಆರಂಭದಲ್ಲಿ ಶೇ 9.2ರಷ್ಟು ಕುಸಿತ ಕಂಡಿತು. ಇಂಧನ ಕ್ಷೇತ್ರದ ದೈತ್ಯ ಸಂಸ್ಥೆ ಅರಾಮ್ಕೊದ ಷೇರು ಬೆಲೆ ಶೇ 10ರಷ್ಟು ಕುಸಿತ ಕಂಡಿತು. ಮುಂಬೈ, ತೈಪೆ, ಸಿಂಗಪುರ, ಸೋಲ್‌, ಜಕಾರ್ತಾ ಮತ್ತು ವೆಲ್ಲಿಂಗ್ಟನ್‌ ಪೇಟೆಗಳು ಶೇ 3ಕ್ಕಿಂತ ಹೆಚ್ಚು ಕುಸಿತ ದಾಖಲಿಸಿವೆ. ವಾಲ್‌ಸ್ಟ್ರೀಟ್‌ ಮತ್ತು ಯುರೋಪ್‌ ಮಾರುಕಟ್ಟೆಯ ಶುಕ್ರವಾರದ ವಹಿವಾ ಟಿನಲ್ಲಿ ಕಂಡು ಬಂದಿದ್ದ ಕುಸಿತವು ಸೋಮವಾರ ಈ ಪೇಟೆಗಳಲ್ಲಿ ಪ್ರತಿಫಲಿ ಸಿತು. ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ತೈಲ ಮಾರಾಟ ಸಂಸ್ಥೆಗಳ ಅಗಾಧ ಪ್ರಮಾಣದ ಬಂಡವಾಳವು ಕರಗಿದೆ.

ಮಾರಣಾಂತಿಕ ವೈರಸ್‌ಗೆ ವಿಶ್ವದಾ ದ್ಯಂತ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿರುವಂತೆ ಹೂಡಿಕೆದಾರರು ನಷ್ಟ ಸಾಧ್ಯತೆಯ ಹೂಡಿಕೆ ಬದಲಿಗೆ ಸುರಕ್ಷಿತ ಹೂಡಿಕೆಗಳತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಇದರಿಂದಾಗಿ ಚಿನ್ನ ಮತ್ತು ಜಪಾನ್‌ ಕರೆನ್ಸಿ ಯೆನ್‌ ಬೆಲೆ ಏರಿಕೆಯಾಗುತ್ತಿದೆ. ಅಮೆರಿಕದ ಟ್ರೆಷರಿ ಗಳಿಕೆಯು ದಾಖಲೆ ಮಟ್ಟದಲ್ಲಿ ಕುಸಿದಿದೆ.

ಆರ್ಥಿಕ ಹಿಂಜರಿತ ಭೀತಿ: ಆರ್ಥಿಕತೆಗೆ ಉತ್ತೇಜನ ನೀಡಲು ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್‌ಗಳು ಉತ್ತೇಜನಾ ಕೊಡುಗೆ ಘೋಷಿಸುತ್ತಿದ್ದರೂ ವೈರಸ್‌ ಹಾವಳಿಯ ಪರಿಣಾಮವಾಗಿ ಆರ್ಥಿಕತೆ ಮೇಲೆ ಭಾರಿ ಹೊರೆ ಬಿದ್ದಿದೆ. ಆರ್ಥಿಕ ಹಿಂಜರಿತ ಭೀತಿ ಎದುರಾಗಿದೆ. ‘ಕೋವಿಡ್‌–19’ ವೈರಸ್‌ ಪಿಡುಗು 100 ದೇಶಗಳಿಗೆ ಹಬ್ಬಿರುವುದು ಮತ್ತು ಕಚ್ಚಾ ತೈಲದ ಬೆಲೆ ಕುಸಿಯುತ್ತಿರುವುದು ಜಾಗತಿಕ ಆರ್ಥಿಕತೆಯಲ್ಲಿ ಹಿಂಜರಿತಕ್ಕೆ ಅವಕಾಶ ಮಾಡಿಕೊಡಲಿದೆ ಎನ್ನುವ ಆತಂಕವು ವಿಶ್ವದಾದ್ಯಂತ ಷೇರುಪೇಟೆಗಳಲ್ಲಿ ತಲ್ಲಣ ಮೂಡಿಸಿದೆ.

ತೈಲ ಹಣವನ್ನು ನೆಚ್ಚಿಕೊಂಡಿರುವ ವಿವಿಧ ದೇಶಗಳ ಕರೆನ್ಸಿಗಳ ಮೌಲ್ಯವೂ ಕುಸಿದಿದೆ. ತೈಲ ವಹಿವಾಟಿನ ಜಾಗತಿಕ ದೈತ್ಯ ಕಂಪನಿಗಳಾದ ಬಿಪಿ, ರಾಯಲ್‌ ಡಚ್‌ ಷೆಲ್‌ನ ಬಂಡವಾಳ ಮಾರುಕಟ್ಟೆ ಮೌಲ್ಯವು ಕುಸಿತ ಕಂಡಿತು.

ಕರಗಿದ ಹೂಡಿಕೆದಾರರ ₹ 7ಲಕ್ಷ ಕೋಟಿ
‘ಬಿಎಸ್‌ಇ’ಯಲ್ಲಿ ವಹಿವಾಟು ನಡೆಸುವ ಕಂಪನಿಗಳ ಷೇರು ಬೆಲೆಗಳ ಸರಣಿ ಕುಸಿತದ ಕಾರಣಕ್ಕೆ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಷೇರು ಹೂಡಿಕೆದಾರರ ಸಂಪತ್ತು ಸೋಮವಾರ ₹ 7 ಲಕ್ಷದಷ್ಟು ಕರಗಿದೆ. ಇದರಿಂದ ಮಾರುಕಟ್ಟೆಯ ಒಟ್ಟಾರೆ ಮೌಲ್ಯವು ₹ 139 ಲಕ್ಷ ಕೋಟಿಗೆ ಇಳಿದಿದೆ.

₹ 71ರ ಕೆಳಗೆ ಇಳಿದ ಪೆಟ್ರೋಲ್‌ ಬೆಲೆ
ಎಂಟು ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್‌ ಬೆಲೆ ದೆಹಲಿಯಲ್ಲಿ ₹ 71ರ ಗಡಿಯಿಂದ ಕೆಳಗೆ ಇಳಿದಿದೆ. ಬೆಲೆ ಸಮರದ ಫಲವಾಗಿ ಕಚ್ಚಾ ತೈಲದ ಬೆಲೆ ಶೇ 31ರಷ್ಟು ಕಡಿಮೆಯಾಗಿದೆ.

ತೈಲ ಬೆಲೆ ಅಗ್ಗವಾಗುವುದರಿಂದ ಭಾರತಕ್ಕೆ ವಿದೇಶ ವಿನಿಮಯ ಲೆಕ್ಕದಲ್ಲಿ ಪ್ರಯೋಜನ ಆಗಲಿದೆ. ಆದರೆ, ಇದರ ಪ್ರತಿಕೂಲ ಪರಿಣಾಮಗಳ ಬಗ್ಗೆ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ. ಖಾಸಗಿ ವಲಯದ ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ಮತ್ತು ಸರ್ಕಾರಿ ಒಡೆತನದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಷೇರುಗಳ ಬೆಲೆ ಶೇ 13ರಷ್ಟು ಕುಸಿತ ಕಂಡಿರುವುದು ಈ ಮಾತನ್ನು ಪುಷ್ಟೀಕರಿಸುತ್ತವೆ.

ತೈಲದ ಅಗತ್ಯಕ್ಕೆ ಭಾರತ ಆಮದನ್ನೇ ಹೆಚ್ಚಾಗಿ (ಶೇ 84) ನೆಚ್ಚಿಕೊಂಡಿದೆ. ಬೆಲೆ ಕುಸಿತದಿಂದ ಆಮದು ವೆಚ್ಚ ಕಡಿಮೆಯಾಗಲಿದೆ. ಪೆಟ್ರೋಲ್‌, ಡೀಸೆಲ್‌ ಚಿಲ್ಲರೆ ಮಾರಾಟ ದರ ಕಡಿಮೆಯಾಗಲಿದೆ. ಇದು ಹಲವಾರು ವಲಯಗಳ ಚೇತರಿಕೆಗೆ ನೆರವಾಗಲಿದೆ. ಆದರೆ, ಡಾಲರ್‌ ಎದುರಿನ ರೂಪಾಯಿ ಮೌಲ್ಯವು ₹ 74.17ಕ್ಕೆ ಇಳಿಯಿತು. ಇದರಿಂದಾಗಿ ತೈಲ ಖರೀದಿಗೆ ಮಾಡುವ ವೆಚ್ಚವು ತಕ್ಷಣಕ್ಕೆ ಕಡಿಮೆಯಾಗುವುದಿಲ್ಲ.

ಅಗ್ಗದ ತೈಲದಿಂದಾಗಿ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಹಣದುಬ್ಬರ ಕಡಿಮೆ ಮಟ್ಟದಲ್ಲಿ ಇರಲಿದೆ. ಇದು ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದ ಆರ್ಥಿಕತೆಗೆ ಮಾರಕವಾಗಿರಲಿದೆ ಎಂದು ಪರಿಣತರು ವಿಶ್ಲೇಷಿಸಿದ್ದಾರೆ.

ಬೆಲೆ ಕುಸಿತದಿಂದ ಕಚ್ಚಾ ತೈಲ ಉತ್ಪಾದನಾ ದೇಶಗಳಲ್ಲಿ ಮತ್ತು ತೈಲಕ್ಕೆ ಸಂಬಂಧಿಸಿದ ವಲಯಗಳಲ್ಲಿನ ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆಯಾಗಿ ಆರ್ಥಿಕತೆ ಕುಂಠಿತಗೊಳ್ಳುತ್ತದೆ.

ನ್ಯೂಯಾರ್ಕ್‌ ಪೇಟೆ 15 ನಿಮಿಷ ಸ್ಥಗಿತ
ವಹಿವಾಟು ಆರಂಭಗೊಳ್ಳುತ್ತಿದ್ದಂತೆ ಷೇರುಗಳು ಗಮನಾರ್ಹ ಕುಸಿತ ಕಂಡಿ ದ್ದರಿಂದ ನ್ಯೂಯಾರ್ಕ್‌ ಷೇರುಪೇಟೆಯ ಡೋವ್‌ ಜೋನ್ಸ್‌ ಕೂಡ ಕುಸಿತ ಕಂಡಿತು.

2008 ನಂತರದ ಅತಿದೊಡ್ಡ (1,758 ಅಂಶ) ಕುಸಿತ ಇದಾಗಿತ್ತು. ಅಮೆರಿಕದ ಕಂಪನಿಗಳ ಎಸ್‌ಆ್ಯಂಡ್‌ಪಿ 500 ಇಂಡೆಕ್ಸ್‌ ಶೇ 7ರಷ್ಟು ಇಳಿಕೆ ದಾಖಲಿಸಿತು. ಹೀಗಾಗಿ 15 ನಿಮಿಷಗಳ ವಹಿವಾಟು ಸ್ಥಗಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.