ADVERTISEMENT

ಷೇರುಪೇಟೆ ಸೂಚ್ಯಂಕಗಳ ಇಳಿಕೆ: ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವೂ ಕುಸಿತ

ಪಿಟಿಐ
Published 3 ಡಿಸೆಂಬರ್ 2025, 4:29 IST
Last Updated 3 ಡಿಸೆಂಬರ್ 2025, 4:29 IST
   

ಮುಂಬೈ: ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 165 ಅಂಶ ಇಳಿಕೆಯಾಗಿ, 84,972ರಂತೆ ವಹಿವಾಟು ಆರಂಭಿಸಿವೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 77 ಅಂಶ ಇಳಿಕೆಯಾಗಿ 25,954ಕ್ಕೆ ತಲುಪಿವೆ.

ಹಿಂದೂಸ್ತಾನ್ ಯೂನಿಲಿವರ್, ಭಾರತ್ ಎಲೆಕ್ಟ್ರಾನಿಕ್ಸ್, ಟೈಟಾನ್, ಟಾಟಾ ಮೋಟಾರ್ಸ್, ಎನ್‌ಟಿಪಿಸಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರಿನ ಮೌಲ್ಯದಲ್ಲಿ ಇಳಿಕೆ ಆಗಿದೆ. ಆದಾಗ್ಯೂ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್, ಟೆಕ್ ಮಹೀಂದ್ರಾ ಮತ್ತು ಐಸಿಐಸಿಐ ಬ್ಯಾಂಕ್ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ.

ADVERTISEMENT

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರದ ವಹಿವಾಟಿನಲ್ಲಿ ₹3,642 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಏಷ್ಯಾದ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾ, ಜಪಾನ್‌ ಮತ್ತು ಹಾಂಗ್‌ಕಾಂಗ್‌ ಮಾರುಕಟ್ಟೆಗಳು ಸಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿವೆ. ಶಾಂಘೈ ಮಾತ್ರ ನಕಾರಾತ್ಮಕ ವಹಿವಾಟು ಕಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.03ರಷ್ಟು ಇಳಿಕೆ ಆಗಿದೆ. ಪ್ರತಿ ಬ್ಯಾರಲ್ ದರ 62.43 ಡಾಲರ್ ಆಗಿದೆ.

ರೂಪಾಯಿ ಮೌಲ್ಯ ಕುಸಿತ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 6 ಪೈಸೆಯಷ್ಟು ಕುಸಿದಿದ್ದು, ಪ್ರತೀ ಡಾಲರ್ ಎದುರು ರೂಪಾಯಿ ಬೆಲೆ ₹90.02ರಷ್ಟಿದೆ.

ಮಂಗಳವಾರ ವಹಿವಾಟಿನ ಅಂತ್ಯದ ವೇಳೆಗೆ ರೂಪಾಯಿ ಮೌಲ್ಯವು ₹89.96ರಷ್ಟಿತ್ತು. ದೇಶದ ಷೇರುಪೇಟೆಯಿಂದ ವಿದೇಶಿ ಬಂಡವಾಳದ ಹೊರಹರಿವು, ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದ ಬಗ್ಗೆ ಇರುವ ಅನಿಶ್ಚಿತತೆಯು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ. ಇವು ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.