
ಮುಂಬೈ: ಜಾಗತಿಕ ಅನಿಶ್ಚಿತತೆ ಮತ್ತು ವಿದೇಶಿ ಬಂಡವಾಳ ಹೊರಹರಿವಿನ ಪರಿಣಾಮ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತದೊಂದಿಗೆ ವಹಿವಾಟು ಆರಂಭಿಸಿವೆ.
ಸೆನ್ಸೆಕ್ಸ್ 364.62 ಅಂಶ ಕುಸಿದು 81,883.99ರಲ್ಲಿ ವಹಿವಾಟು ಆರಂಭಿಸಿದರೆ, ನಿಫ್ಟಿ 117.15 ಅಂಶಗಳಷ್ಟು ಕುಸಿದು 25,379.4ರಲ್ಲಿ ವಹಿವಾಟು ಆರಂಭಿಸಿದೆ.
ಸೆನ್ಸೆಕ್ಸ್ ಗುಚ್ಛದ ಷೇರುಗಳ ಪೈಕಿ ಮಾರುತಿ, ಭಾರ್ತಿ ಏರ್‌ಟೆಲ್, ಹಿಂದೂಸ್ಥಾನ್ ಯುನಿಲಿವರ್, ಮಹೀಂದ್ರ ಅಂಡ್ ಮಹೀಂದ್ರ, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಪ್ರಮುಖವಾಗಿ ನಷ್ಟ ಕಂಡಿವೆ.
ಇನ್ಫೊಸಿಸ್, ಟೆಕ್ ಮಹೀಂದ್ರ, ಎಚ್‌ಸಿಎಲ್ ಟೆಕ್ ಮತ್ತು ಎಟರ್ನಲ್ ಷೇರುಗಳು ಲಾಭ ಗಳಿಸಿವೆ.
ಷೇರುಪೇಟೆ ವಿನಿಮಯ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್‌ಐಐ) ಗುರುವಾರ ₹3,465.99 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು(ಡಿಐಐ) ₹5,031.57ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನ ನಿಕ್ಕಿ 225 ಮತ್ತು ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕ ಕುಸಿತ ಕಂಡರೆ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಏರಿಕೆ ಕಂಡಿದೆ.
ಗುರುವಾರ ಅಮೆರಿಕ ಷೇರುಪೇಟೆಗಳು ಕುಸಿತದೊಂದಿಗೆ ಕೊನೆಗೊಂಡಿದ್ದವು.
ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಇತ್ತೀಚಿನ ಅಮೆರಿಕ-ಇರಾನ್ ಮಾತುಕತೆಗಳು ಯಾವುದೇ ಪ್ರಗತಿಯಿಲ್ಲದೆ ಮುಕ್ತಾಯಗೊಂಡಿದ್ದು, ಅಮೆರಿಕ, ಇರಾನ್ ಮೇಲೆ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಅಪಾಯದ ಬಗ್ಗೆ ಕಳವಳಗಳನ್ನು ಹೆಚ್ಚಿಸಿದೆ.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರಲ್‌ಗೆ ಶೇ. 0.07ರಷ್ಟು ಕುಸಿದು 70.70 ಡಾಲರ್‌ಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.