ADVERTISEMENT

ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆ: ಕುಸಿದ ಸೆನ್ಸೆಕ್ಸ್, ನಿಫ್ಟಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 11:36 IST
Last Updated 14 ಅಕ್ಟೋಬರ್ 2025, 11:36 IST
ಸೆನ್ಸೆಕ್ಸ್
ಸೆನ್ಸೆಕ್ಸ್   

ಮುಂಬೈ: ಏಷ್ಯಾ ಮತ್ತು ಯುರೋಪ್ ಷೇರುಪೇಟೆಗಳಲ್ಲಿನ ದುರ್ಬಲ ಪ್ರವೃತ್ತಿ ಹಾಗೂ ವಿದೇಶಿ ಹೂಡಿಕೆಯ ಹೊರಹರಿವು ಹೆಚ್ಚಿದ್ದರಿಂದ ಸತತ ಎರಡನೇ ದಿನವೂ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ದಾಖಲಿಸಿವೆ.

ಆರಂಭಿಕ ಏರಿಕೆಯ ಬಳಿಕ ಕುಸಿದ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 297.07 ಅಂಶಗಳಷ್ಟು ಕುಸಿದು (ಶೇ 0.36)82,029.98ರಲ್ಲಿ ವಹಿವಾಟು ಅಂತ್ಯಗೊಳಿಸಿತು. ದಿನದ ವಹಿವಾಟಿನ ಸಮಯದಲ್ಲಿ 545.43 ಅಂಶಗಳಷ್ಟು ಕುಸಿದು 81,781.62ಕ್ಕೆ ತಲುಪಿತ್ತು.

50 ಷೇರುಗಳ ಎನ್‌ಎಸ್‌ಇ ನಿಫ್ಟಿ 81.85 ಅಂಶಗಳಷ್ಟು (ಶೇ 0.32) ರಷ್ಟು ಕುಸಿದು 25,145.50ರಲ್ಲಿ ವಹಿವಾಟು ಮುಗಿಸಿತು.

ADVERTISEMENT

ಸೆನ್ಸೆಕ್ಸ್ ಕಂಪನಿಗಳ ಪೈಕಿ ಬಜಾಜ್ ಫೈನಾನ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಟಾಟಾ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎನ್‌ಟಿಪಿಸಿ, ಟ್ರೆಂಟ್, ಏಷ್ಯನ್ ಪೇಂಟ್ಸ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಪ್ರಮುಖವಾಗಿ ನಷ್ಟ ಕಂಡಿವೆ.

ಆದರೂ, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಪವರ್ ಗ್ರಿಡ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಾಭ ಗಳಿಸಿವೆ.

‘ಏಷ್ಯಾ ಮತ್ತು ಯುರೋಪಿಯನ್ ಷೇರುಪೇಟೆಗಳಲ್ಲಿನ ದುರ್ಬಲ ಪ್ರವೃತ್ತಿಯಿಂದಾಗಿ ದೇಶೀಯ ಷೇರುಗಳ ಕೊಳ್ಳುವಿಕೆಯ ಕೊರತೆ, ಈಕ್ವಿಟಿ ಮಾರುಕಟ್ಟೆ ಪ್ರಾಫಿಟ್ ಬುಕ್ಕಿಂಗ್‌ಗೆ ಸಾಕ್ಷಿಯಾಯಿತು ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆಗಳು ಹೂಡಿಕೆದಾರರ ಆತಂಕವನ್ನು ಹೆಚ್ಚಿಸಿವೆ. ಚಿನ್ನ ಮತ್ತು ಅಮೆರಿಕ ಟ್ರೆಶರಿ ಬಾಂಡ್‌ಗಳಂತಹ ಸುರಕ್ಷಿತ ಹೂಡಿಕೆಯತ್ತ ಹೂಡಿಕೆದಾರರು ಚಿತ್ತ ಹರಿಸುವಂತೆ ಮಾಡಿದೆ’ಎಂದು ಆನ್‌ಲೈನ್ ವ್ಯಾಪಾರ ಮತ್ತು ಸಂಪತ್ತು ತಂತ್ರಜ್ಞಾನ ಸಂಸ್ಥೆಯಾದ ಎನ್‌ರಿಚ್ ಮನಿ ಸಿಇಒ ಆರ್‌. ಪೊನ್ಮುಡಿ ಹೇಳಿದ್ದಾರೆ.

ಏಷ್ಯಾದ ಷೇರುಪೇಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನ ನಿಕ್ಕಿ 225 ಸೂಚ್ಯಂಕ, ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಇಂಡೆಕ್ಸ್ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಕುಸಿತದೊಂದಿಗೆ ಕೊನೆಗೊಂಡವು. ಯುರೋಪಿನ ಮಾರುಕಟ್ಟೆಗಳು ಕುಸಿತ ದಾಖಲಿಸಿವೆ. ಸೋಮವಾರ ಅಮೆರಿಕ ಷೇರುಪೇಟೆ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.