ಮುಂಬೈ: ದೇಶದ ಷೇರುಪೇಟೆಗಳಲ್ಲಿ ದಾಖಲೆಯ ಮಟ್ಟದ ವಹಿವಾಟು ನಡೆಯುತ್ತಿದ್ದು, ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿಯೂ ಏರಿಕೆಯಾಗುತ್ತಿದೆ.
ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ, ಜ. 10ರಿಂದ 17ರವರೆಗೆ ನಡೆದಿರುವ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ₹ 2.9 ಲಕ್ಷ ಕೋಟಿ ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 157.67 ಲಕ್ಷ ಕೋಟಿಗಳಿಂದ ₹ 160.57 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಜನವರಿ 1 ರಿಂದ 17ರವರೆಗಿನ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ₹ 4.75 ಲಕ್ಷ ಕೋಟಿಗಳಷ್ಟು ಹೆಚ್ಚಳವಾಗಿದೆ.
ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 345 ಅಂಶ ಏರಿಕೆ ಕಂಡಿದ್ದು, 41,945 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 95 ಅಂಶ ಹೆಚ್ಚಾಗಿ 12,352 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿದೆ.
ಎಫ್ಪಿಐ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್ಪಿಐ) ವಾರದ ವಹಿವಾಟಿನ ಏರಿಳಿತಕ್ಕೆ ಅನುಗುಣವಾಗಿ ಷೇರುಗಳ ಖರೀದಿ ಮತ್ತು ಮಾರಾಟಕ್ಕೆ ಗಮನ ನಡೆಸಿದ್ದಾರೆ. ಇದರಿಂದ ಒಟ್ಟಾರೆಯಾಗಿ ವಾರದ ಹೂಡಿಕೆ ₹ 268 ಕೋಟಿಗಳಷ್ಟಾಗಿದೆ.
ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯ ವಾರದ ವಹಿವಾಟಿನಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯ 14 ಪೈಸೆ ಹೆಚ್ಚಾಗಿದ್ದು, ಒಂದು ಡಾಲರ್ಗೆ ₹ 71.08ಕ್ಕೆ ತಲುಪಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.