ಬೆಂಗಳೂರು: ಈ ವಾರದ ಅಂತಿಮ ದಿನದ ವಹಿವಾಟಿನಲ್ಲಿ ಷೇರುಪೇಟೆಗಳಲ್ಲಿ ಖರೀದಿ ಭರಾಟೆ ಕಂಡು ಬಂದಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ನಿಯಂತ್ರಿಸುವುದು, ಆರ್ಥಿಕ ಸಂಕಷ್ಟಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿಸರ್ಕಾರಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿಶ್ವಾಸ ವ್ಯಕ್ತವಾದ ಹಿನ್ನೆಲೆಯಲ್ಲಿ ಹೂಡಿಕೆದಾರರು ಗುರುವಾರ ಷೇರುಗಳ ಖರೀದಿಗೆ ಮುಂದಾದರು. ಸೆನ್ಸೆಕ್ಸ್ 1,265.66 ಅಂಶಗಳ ಚೇತರಿಕೆಯೊಂದಿಗೆ ದಿನದ ವಹಿವಾಟು ಮುಗಿಸಿದೆ.
ದಿನದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,331.24 ಅಂಶ ಏರಿಕೆಯೊಂದಿಗೆ ದಿನದ ಗರಿಷ್ಠ 31,225.20 ಮುಟ್ಟಿತ್ತು ಹಾಗೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 379.6 ಅಂಶಗಳ ಚೇತರಿಕೆಯೊಂದಿಗೆ 9,128.35 ಅಂಶ ತಲುಪಿತು. ಬ್ಯಾಂಕ್, ಫೈನಾನ್ಸ್ ವಲಯದ ಷೇರುಗಳು, ಫಾರ್ಮಾ ಹಾಗೂ ಆಟೊಮೊಬೈಲ್ ಕಂಪನಿಗಳ ಷೇರುಗಳು ಸಹ ಗಳಿಕೆ ದಾಖಲಿಸಿದವು.
ಸೆನ್ಸೆಕ್ಸ್ ಶೇ 4.23 ಏರಿಕೆಯೊಂದಿಗೆ 31,159.62 ಅಂಶಗಳಲ್ಲಿ ದಿನದ ವಹಿವಾಟು ಮುಗಿಸಿತು. ನಿಫ್ಟಿ ಶೇ 4ರಷ್ಟು ಹೆಚ್ಚಳದೊಂದಿದೆ 9,102.75 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಯಿತು. ಸೋಮವಾರ ಮಹಾವೀರ ಜಯಂತಿ ಪ್ರಯುಕ್ತ ವಹಿವಾಟು ನಡೆದಿರಲಿಲ್ಲ. ಶುಕ್ರವಾರ, ಏಪ್ರಿಲ್ 10ರಂದು ಗುಡ್ ಫ್ರೈಡೇ ಪ್ರಯುಕ್ತಷೇರುಪೇಟೆ ವಹಿವಾಟುಗಳಿಗೆ ರಜೆ ಇರಲಿದೆ.
ಸಿಪ್ಲಾ, ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಬಜಾಜ್ ಆಟೊ, ಸನ್ ಫಾರ್ಮಾ, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಯ ಬ್ಯಾಂಕ್ ಷೇರುಗಳು ಶೇ 3ರಿಂದ ಶೇ 14ರ ವರೆಗೂ ಗಳಿಕೆ ಕಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.