
ಭಾರತದ ಷೇರುಪೇಟೆಗಳು ಇತರ ಷೇರುಪೇಟೆಗಳಿಗಿಂತ ಹೆಚ್ಚಿನ ಗಳಿಕೆ ತಂದುಕೊಡುವ ಸಾಧ್ಯತೆ ಇದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್ ಸಂಸ್ಥೆಯ ವರದಿ ಹೇಳಿದೆ. ಈ ಹೊತ್ತಿನಲ್ಲಿ ಯಾವ ವಲಯಗಳ ಮೇಲೆ ಹೂಡಿಕೆದಾರರು ಗಮನ ನೀಡಬಹುದು?
ದೇಶದ ಷೇರುಪೇಟೆಗಳಲ್ಲಿ ಹೊಸ ಬಲವೊಂದು ಕಾಣಿಸುತ್ತಿದೆ. ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ) ‘ನಿಫ್ಟಿ–50’ ಸೂಚ್ಯಂಕವು 25 ಸಾವಿರ ಅಂಶಗಳ ಗಡಿಯನ್ನು ದಾಟಿದೆ. ಸೂಚ್ಯಂಕವು ಈ ಮಟ್ಟಕ್ಕಿಂತ ಕೆಳಕ್ಕೆ ಬರಲಿಕ್ಕಿಲ್ಲ ಎಂಬ ನಿರೀಕ್ಷೆ ಇದೆ.
ಅಮೆರಿಕವು ಭಾರತದ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸುವ ಘೋಷಣೆ ಮಾಡಿದ ನಂತರ ಸೂಚ್ಯಂಕವು 24,400ಕ್ಕೆ ಬಂದಿತ್ತು. ಆದರೆ, ಕೇಂದ್ರ ಸರ್ಕಾರ ಇರಿಸಿದ ರಾಜತಾಂತ್ರಿಕ ಸಮತೋಲನದ ನಡೆ ಹಾಗೂ ಜಿಎಸ್‌ಟಿ ಸುಧಾರಣೆಗಳು ಹೂಡಿಕೆದಾರರ ವಿಶ್ವಾಸವನ್ನು ಮರುಸ್ಥಾಪಿಸುವಲ್ಲಿ ನೆರವಾದವು.
ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಎಫ್‌ಎಂಸಿಜಿ ವಲಯದ ಉತ್ಪನ್ನಗಳ ಮಾರಾಟವು ಮತ್ತೆ ಚೇತರಿಕೆ ಕಾಣುವ ನಿರೀಕ್ಷೆ ಇದೆ. ಮುಂಗಾರು ಚೆನ್ನಾಗಿ ಆಗಿರುವುದು, ಬಿತ್ತನೆ ಉತ್ತಮವಾಗಿರುವುದು, ಹಣದುಬ್ಬರ ಪ್ರಮಾಣ ಕಡಿಮೆ ಆಗಿರುವುದು ಗ್ರಾಮೀಣ ಪ್ರದೇಶಗಳ ಜನರ ಖರೀದಿ ಶಕ್ತಿಯನ್ನು ಹೆಚ್ಚು ಮಾಡುತ್ತಿವೆ.
ನೇರ ಹಾಗೂ ಪರೋಕ್ಷ ತೆರಿಗೆಗಳಲ್ಲಿ ಒಂದಿಷ್ಟು ವಿನಾಯಿತಿಗಳು ದೊರೆತಿರುವ ಕಾರಣದಿಂದಾಗಿ ಹಾಗೂ ಸರ್ಕಾರದ ನೆರವಿನ ಪರಿಣಾಮವಾಗಿ ನಗರ ಪ್ರದೇಶಗಳಲ್ಲಿಯೂ ಬೇಡಿಕೆಯು ಕ್ರಮೇಣ ಹೆಚ್ಚಾಗುವ ಸಾಧ್ಯತೆ ಇದೆ.
ಐ.ಟಿ. ವಲಯ:
ಐ.ಟಿ. ವಲಯವು ಅಲ್ಪಾವಧಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಎಚ್–1ಬಿ ವೀಸಾ ಶುಲ್ಕವನ್ನು ತೀವ್ರವಾಗಿ ಹೆಚ್ಚಿಸಿರುವ ಕಾರಣದಿಂದಾಗಿ ಭಾರತದ ಐ.ಟಿ. ಕಂಪನಿಗಳು ಸ್ಥಳೀಯವಾಗಿ ನೇಮಕ ಮಾಡಿಕೊಳ್ಳುವುದಕ್ಕೆ, ಉಪ ಗುತ್ತಿಗೆ ನೀಡುವುದಕ್ಕೆ ಆದ್ಯತೆ ನೀಡುತ್ತಿವೆ. ಹೀಗಾಗಿ ಕಂಪನಿಗಳ ಲಾಭದ ಪ್ರಮಾಣವು ಅಲ್ಪಾವಧಿಯಲ್ಲಿ, ಮಧ್ಯಮಾವಧಿಯಲ್ಲಿ ಕಡಿಮೆ ಆಗಬಹುದು. ದೊಡ್ಡ ಕಂಪನಿಗಳು ವೆಚ್ಚ ಹೆಚ್ಚಳವನ್ನು ನಿಭಾಯಿಸಬಲ್ಲವಾದರೂ ವೀಸಾ ಮೇಲೆ ಅವಲಂಬಿತವಾಗಿರುವ ಮಧ್ಯಮ ಗಾತ್ರದ ಕಂಪನಿಗಳಿಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಆದರೆ ಅಮೆರಿಕದ ಫೆಡರಲ್ ರಿಸರ್ವ್ ಈ ವರ್ಷದಲ್ಲಿ ಎರಡು ಬಾರಿ ಬಡ್ಡಿ ದರ ಇಳಿಸಲಿದೆ ಎಂಬ ನಿರೀಕ್ಷೆಯು ಒಂದಿಷ್ಟು ಸಮಾಧಾನ ನೀಡುವಂತಿದೆ.
ಐ.ಟಿ. ವಲಯದಲ್ಲಿ ಇನ್ಫೊಸಿಸ್ ಲಿಮಿಟೆಡ್ ಕಂಪನಿಯು ಬಹಳ ಆಕರ್ಷಕವಾದ ದೀರ್ಘಾವಧಿ ಅವಕಾಶವನ್ನು ಹೂಡಿಕೆದಾರರಿಗೆ ನೀಡುತ್ತಿದೆ. ಕಂಪನಿಯ ಬಳಿಯಿರುವ ಕಾರ್ಯಾದೇಶಗಳು ದೊಡ್ಡದಿವೆ. 2025–26ನೇ ಹಣಕಾಸು ವರ್ಷಕ್ಕೆ ಕಂಪನಿಯ ಮುನ್ನೋಟವು ಸ್ಥಿರವಾಗಿದೆ. ಕಂಪನಿಯ ಷೇರು ಮೌಲ್ಯವು ಹೊಸ ಹೂಡಿಕೆಗೆ ಅನುಕೂಲಕರವಾಗಿದೆ.
ಆಟೊಮೊಬೈಲ್ ವಲಯದ ಮುನ್ನೋಟ ಕೂಡ ಚೆನ್ನಾಗಿದೆ. ಜಿಎಸ್‌ಟಿ ದರ ಇಳಿಕೆಯು ವಾಹನಗಳ ಬೆಲೆಯನ್ನು ತಗ್ಗಿಸಿದೆ. ಬಡ್ಡಿ ದರ ಕಡಿಮೆ ಇರುವುದು, ತೆರಿಗೆ ವಿನಾಯಿತಿಗಳು, ಮುಂದೆ 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರಲಿರುವುದು ಜನವರ್ಗದ ಕೈಯಲ್ಲಿ ಖರ್ಚಿಗೆ ಹೆಚ್ಚು ಹಣವನ್ನು ಉಳಿಸಲಿದೆ. ಹಲವು ಅಂಶಗಳ ನೆರವಿನಿಂದ ಆಟೊಮೊಬೈಲ್ ವಲಯವು ಒಳ್ಳೆಯ ಬೆಳವಣಿಗೆ ಕಾಣಲು ಸಜ್ಜಾಗಿದೆ.
ಸರ್ಕಾರವು ಬಂಡವಾಳ ವೆಚ್ಚ ಹಾಗೂ ಆಧುನೀಕರಣಕ್ಕೆ ಆದ್ಯತೆ ನೀಡಿರುವುದರಿಂದಾಗಿ ದೇಶದ ಮೂಲಸೌಕರ್ಯ ವಲಯವು ಬೆಳವಣಿಗೆಗೆ ಸಜ್ಜಾಗಿದೆ. ಸಾರಿಗೆ ಕಾರಿಡಾರ್‌ಗಳು, ಸರಕು ಸಾಗಣೆ ವಲಯ, ಹೈಸ್ಪೀಡ್ ರೈಲು, ನವೀಕರಿಸಬಹುದಾದ ಇಂಧನ, ಕೈಗಾರಿಕಾ ಪಾರ್ಕ್‌ಗಳು ಹೂಡಿಕೆಯ ಪ್ರಮುಖವಾದ ಕ್ಷೇತ್ರಗಳು. ಖಾಸಗಿ ಮತ್ತು ಸರ್ಕಾರಿ ಪಾಲುದಾರಿಕೆ, ಆಸ್ತಿ ನಗದೀಕರಣಕ್ಕೆ ಪೂರಕವಾದ ನೀತಿಗಳು ಹಾಗೂ ಖಾಸಗಿ ಬಂಡವಾಳವನ್ನು ಆಕರ್ಷಿಸುವ ಸುಧಾರಣಾ ಕ್ರಮಗಳು ತಯಾರಿಕಾ ಚಟುವಟಿಕೆಗೆ ಉತ್ತೇಜನ ನೀಡುತ್ತಿವೆ. ಪ್ರಮುಖ ವಲಯಗಳಾದ ಉಕ್ಕು ಮತ್ತು ಸಿಮೆಂಟ್ ಹೆಚ್ಚಿನ ಬೇಡಿಕೆ ಕಾಣುತ್ತಿರುವುದು, ದತ್ತಾಂಶ ಕೇಂದ್ರಗಳು ಹಾಗೂ ಪರಿಸರ ಪೂರಕ ಇಂಧನ ಉತ್ಪಾದನೆಗೆ ಹೆಚ್ಚಿನ ಆಸಕ್ತಿ ಮೂಡುತ್ತಿರುವುದು ಧನಾತ್ಮಕ ಮುನ್ನೂಟವೊಂದನ್ನು ನೀಡುತ್ತಿವೆ.
ಈಗ ಕಾರ್ಪೊರೇಟ್ ಕಂಪನಿಗಳ ವರಮಾನ ಗಳಿಕೆಯಲ್ಲಿನ ಹೆಚ್ಚಳವು ಶೇಕಡ 10ರಷ್ಟು ಇದೆ. ಇದು ಈಗಿನ ಷೇರು ಮೌಲ್ಯಕ್ಕೆ ಸರಿಹೊಂದಬೇಕು ಎಂದಾದರೆ ಶೇ 15ರ ಮಟ್ಟಕ್ಕೆ ಬರಬೇಕು. ಲಾರ್ಜ್ ಕ್ಯಾಪ್ ವಲಯದ ಕಂಪನಿಗಳು ಈಚಿನ ತ್ರೈಮಾಸಿಕಗಳಲ್ಲಿ ಶೇ 7ರಿಂದ ಶೇ 8ರಷ್ಟು ಬೆಳವಣಿಗೆ ಸಾಧಿಸಿವೆ. ಈ ವರ್ಷದ ಮೂರನೆಯ ತ್ರೈಮಾಸಿಕದಿಂದ ಮುಂದಿನ ಹಂತದ ಬೆಳವಣಿಗೆ ಕಂಡುಬರುವ ನಿರೀಕ್ಷೆ ಇದೆ. ತೆರಿಗೆ ವಿನಾಯಿತಿ, ಜಿಎಸ್‌ಟಿ ಸುಧಾರಣೆ, ಖರ್ಚು ಮಾಡಲು ಕೈಯಲ್ಲಿ ಹೆಚ್ಚು ಹಣ ಉಳಿಯುತ್ತಿರುವುದು, ಹಣದುಬ್ಬರದ ಇಳಿಕೆ... ಇವೆಲ್ಲವೂ ಮುಂದಿನ ಹಂತದ ಬೆಳವಣಿಗೆಗೆ ನೆರವಾಗಿ ಬರಲಿವೆ. ಬೇಡಿಕೆ ಆಧರಿಸಿದ ದಿನಬಳಕೆ ವಸ್ತುಗಳಿಂದ ಆರಂಭಿಸಿ, ವಾಹನ ವಲಯದವರೆಗೆ ಎಲ್ಲವೂ ಹೆಚ್ಚಿನ ಪ್ರಯೋಜನ ಪಡೆಯಲು ಸಜ್ಜಾಗಿವೆ.
ಆಕರ್ಷಕವಾಗಿರುವ ಎಫ್‌ಎಂಸಿಜಿ
ಷೇರುಗಳ ಮೌಲ್ಯವು ಈಗ ಐದು ವರ್ಷಗಳ ಸರಾಸರಿಗೆ ಹತ್ತಿರದಲ್ಲಿದೆ. ಈಗ ಈ ವಲಯವು ಹೆಚ್ಚು ಧನಾತ್ಮಕವಾಗಿ ಕಾಣುತ್ತಿದೆ. ಎಫ್‌ಎಂಸಿಜಿ ವಲಯದ ಪ್ರಮುಖ ಕಂಪನಿಗಳ ಪೈಕಿ ಹಿಂದುಸ್ತಾನ್ ಯೂನಿಲಿವರ್ ಕಂಪನಿಯ (ಎಚ್‌ಯುಎಲ್) ಷೇರು ಬಹಳ ಗಮನ ಸೆಳೆಯುವಂತೆ ಕಾಣುತ್ತಿದೆ. ಪ್ರೀಮಿಯಂ ವರ್ಗದ ಉತ್ಪನ್ನಗಳ ಮೇಲೆ ಕಂಪನಿಯು ಗಮನ ನೀಡಿರುವುದು ಹೊಸ ಆವಿಷ್ಕಾರಗಳಿಗೆ ಕಂಪನಿ ಆದ್ಯತೆ ನೀಡಿರುವುದು ಕಂಪನಿಯ ಒಟ್ಟಾರೆ ಸಾಧನೆಯು ಚೆನ್ನಾಗಿ ಆಗುವಂತೆ ಮಾಡುವ ನಿರೀಕ್ಷೆ ಇದೆ. ತೆರಿಗೆ ಪರಿಷ್ಕರಣೆಯ ಪ್ರಯೋಜನ ತಗ್ಗಿರುವ ಹಣದುಬ್ಬರ 8ನೇ ವೇತನ ಆಯೋಗದ ಶಿಫಾರಸುಗಳು ಮುಂದೆ ಜಾರಿಗೆ ಬಂದಾಗ ಆಗುವ ಅನುಕೂಲ... ಇವೆಲ್ಲವುಗಳ ಪ್ರಯೋಜನವನ್ನು ಉತ್ತಮವಾಗಿ ಪಡೆಯುವ ಸ್ಥಿತಿಯಲ್ಲಿ ಎಚ್‌ಯುಎಲ್ ಇದೆ. ದೀರ್ಘಾವಧಿ ಹೂಡಿಕೆದಾರರಿಗೆ ಎಚ್‌ಯುಎಲ್ ಆರೋಗ್ಯಕರವಾದ ಲಾಭ ನೀಡುವ ಸ್ಥಿತಿಯಲ್ಲಿದೆ. ಅದೇ ರೀತಿ ಟಾಟಾ ಕನ್ಸ್ಯೂಮರ್ ಲಿಮಿಟೆಡ್ ಕೂಡ ತನ್ನ ವೈವಿಧ್ಯಮಯ ಉತ್ಪನ್ನಗಳ ಮೂಲಕ ಬೆಳವಣಿಗೆಯನ್ನು ಕಾಣುತ್ತಿದೆ. ಹೆಚ್ಚಿನ ಲಾಭದ ಪ್ರಮಾಣ ಇರುವ ಆರೋಗ್ಯ–ಕ್ಷೇಮ ವಲಯವನ್ನೂ ಅದು ಪ್ರವೇಶಿಸಿದೆ. ಈ ಕ್ರಮಗಳ ಪರಿಣಾಮವಾಗಿ ಟಾಟಾ ಕನ್ಸ್ಯೂಮರ್ ಕಂಪನಿಯ ವರಮಾನವು 2024–25ರಿಂದ 2026–27ರ ನಡುವೆ ಶೇ 27ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ಕಾಣುವ ಸಾಧ್ಯತೆ ಇದೆ.
ಲೇಖಕ: ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ