ADVERTISEMENT

ಅಮೆರಿಕದಿಂದ ಹೊಸ ಸುಂಕ ಭೀತಿ: ಷೇರುಪೇಟೆಯಲ್ಲಿ ತಲ್ಲಣ

ಪಿಟಿಐ
Published 8 ಜನವರಿ 2026, 14:21 IST
Last Updated 8 ಜನವರಿ 2026, 14:21 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ 4ನೇ ದಿನವೂ ಕುಸಿತ ದಾಖಲಿಸಿದ್ದು, ಗುರುವಾರ ಶೇ 1ರಷ್ಟು ಕುಸಿದಿವೆ. ಅಮೆರಿಕದ ಸುಂಕ ಏರಿಕೆಯ ಹೊಸ ಆತಂಕದ ನಡುವೆ ಷೇರು ಮಾರಾಟ ಜೋರಾಗಿದೆ.

ಲೋಹ, ತೈಲ, ಅನಿಲ ಮತ್ತು ವಾಣಿಜ್ಯ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ವಿದೇಶಿ ಹೂಡಿಕೆಯ ಹೊರ ಹರಿವು ಈ ಒತ್ತಡ ಹೆಚ್ಚಿಸಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 780.18 ಅಂಶಗಳಷ್ಟು ಕುಸಿದು 84,180.96ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ದಿನದ ವಹಿವಾಟಿನಲ್ಲಿ 851.04 ಅಂಶಗಳವರೆಗೆ ಕುಸಿದಿತ್ತು.

ADVERTISEMENT

50 ಷೇರುಗಳ ಎನ್‌ಎಸ್‌ಇ ನಿಫ್ಟಿ 263.90 ಅಂಶಗಳಷ್ಟು ಕುಸಿದು 25,876.85ಕ್ಕೆ ತಲುಪಿತ್ತು.

‘ಹೆಚ್ಚಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಜಾಗತಿಕ ವ್ಯಾಪಾರ-ಸಂಬಂಧಿತ ಕಳವಳಗಳ ನಡುವೆ ಮಾರುಕಟ್ಟೆ ಭಾವನೆ ಹದಗೆಟ್ಟಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಷೇರು ಮಾರಾಟ ಭರಾಟೆಯು ದುರ್ಬಲ ರೂಪಾಯಿಯ ಜೊತೆ ಸೇರಿ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತು. ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆಯೂ ಪರಿಣಾಮ ಬೀರಿದೆ’ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಸಂಶೋಧನೆಯ ಎಸ್‌ವಿಪಿ ಅಜಿತ್ ಮಿಶ್ರಾ ಹೇಳಿದ್ದಾರೆ.

ಸೆನ್ಸೆಕ್ಸ್ ಷೇರುಗಳ ಪೈಕಿ ಎಲ್ ಅಂಡ್ ಟಿ, ಟೆಕ್ ಮಹೀಂದ್ರ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್ ಮತ್ತು ಟ್ರೆಂಟ್ ಅತ್ಯಧಿಕ ನಷ್ಟ ಕಂಡಿವೆ.

ಇತ್ತ, ಎಟರ್ನಲ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಾಭ ಕಂಡಿವೆ.

ಕಳೆದ 4 ದಿನಗಳಲ್ಲಿ ಬಿಎಸ್‌ಇ ಸೂಚ್ಯಂಕವು 1,581.05 ಅಂಶಗಳಷ್ಟು ಕುಸಿದಿದೆ. ನಿಫ್ಟಿ 451.7 ಅಂಶ ಕುಸಿದಿದೆ.

ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಶೇ 500 ರಷ್ಟು ಸುಂಕ ವಿಧಿಸಬಹುದಾದ ನಿರ್ಬಂಧಗಳ ಮಸೂದೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿದ್ದಾರೆ. ಇದು ಚೀನಾ ಮತ್ತು ಭಾರತದಂತಹ ದೇಶಗಳು ರಷ್ಯಾದಿಂದ ಅಗ್ಗದ ತೈಲ ಖರೀದಿಸುವುದನ್ನು ತಡೆಯಲು ಶ್ವೇತಭವನಕ್ಕೆ ಅಧಿಕ ಸುಂಕ ಏರಿಕೆಯ ಅಧಿಕಾರ ನೀಡುತ್ತದೆ.

ಚೀನಾ, ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳ ವಿರುದ್ಧ ಈ ಮಸೂದೆಯು ಶ್ವೇತಭವನಕ್ಕೆ ಅಗಾಧ ಅಧಿಕಾರ ನೀಡುತ್ತದೆ. ರಷ್ಯಾದಿಂದ ಅಗ್ಗದ ತೈಲ ಖರೀದಿಸುವುದನ್ನು ನಿಲ್ಲಿಸಲು ಪ್ರೋತ್ಸಾಹಿಸುತ್ತದೆ ಎಂದು ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಬುಧವಾರ ಹೇಳಿದ್ದರು.

ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾ ಸಕಾರಾತ್ಮಕ ವಹಿವಾಟು ಕಂಡಿದೆ. ಜಪಾನ್, ಶಾಂಘೈ ಮತ್ತು ಹಾಂಗ್‌ಕಾಂಗ್ ಮಾರುಕಟ್ಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆದಿದೆ.

ಸೋಮವಾರದಿಂದ ಗುರುವಾರದವರೆಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 1,581 ಅಂಶ ಮತ್ತು ನಿಫ್ಟಿ 451 ಅಂಶ ಇಳಿಕೆ ಆಗಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರದ ವಹಿವಾಟಿನಲ್ಲಿ ₹1,527 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀ ಸಾಂಸ್ಥಿಕ ಹೂಡಿಕೆದಾರರು ₹2,889 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.75ರಷ್ಟು ಏರಿಕೆಯಾಗಿದೆ. ಪ್ರತೀ ಬ್ಯಾರಲ್ ದರವು 60.42 ಡಾಲರ್ ಆಗಿದೆ.

‘ಜಾಗತಿಕ ಮಟ್ಟದಲ್ಲಿ ಹೆಚ್ಚಿದ ರಾಜಕೀಯ ಬಿಕ್ಕಟ್ಟು ಮತ್ತು ವ್ಯಾಪಾರ ಅನಿಶ್ಚಿತತೆಯು ಮಾರುಕಟ್ಟೆ ಇಳಿಕೆಗೆ ಕಾರಣವಾಗಿದೆ. ವಿದೇಶಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯು ಸೂಚ್ಯಂಕಗಳ ಇಳಿಕೆಗೆ ಕಾರಣವಾದವು’ ಎಂದು ರೆಲಿಗೇರ್‌ ಬ್ರೋಕಿಂಗ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಹಿರಿಯ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.

ರಿಲಯನ್ಸ್‌: ₹1.65 ಲಕ್ಷ ಕೋಟಿ ನಷ್ಟ

ಷೇರುಪೇಟೆ ಸೂಚ್ಯಂಕಗಳ ಇಳಿಕೆಯಿಂದ ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರಿನ ಮೌಲ್ಯವು ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಶೇ 8ರವರೆಗೆ ಇಳಿಕೆ ಆಗಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ (ಎಂ–ಕ್ಯಾಪ್‌) ₹165299 ಕೋಟಿಯಷ್ಟು ಕರಗಿದೆ. ಕಂಪನಿಯ ಒಟ್ಟು ಎಂ–ಕ್ಯಾಪ್‌ ₹19.89 ಲಕ್ಷ ಕೋಟಿಗೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.