ಷೇರುಪೇಟೆ
ಮುಂಬೈ: ಎಚ್1ಬಿ ವೀಸಾ ಶುಲ್ಕ ಏರಿಕೆ ಕಳವಳದ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆಯ ಹೊರಹರಿವಿನಿಂದಾಗಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಕುಸಿತ ದಾಖಲಿಸಿವೆ.
ಸತತ ಐದನೇ ದಿನ ಕುಸಿತ ಮುಂದುವರಿಸಿರುವ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 141.32 ಅಂಶಗಳಷ್ಟು ಕುಸಿದು 81,574ರಲ್ಲಿ ವಹಿವಾಟು ಆರಂಭಿಸಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 22.4 ಅಂಶ ಕುಸಿದು 25,034 ರಲ್ಲಿ ವಹಿವಾಟು ಆರಂಭಿಸಿತು.
ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಟಾಟಾ ಮೋಟಾರ್ಸ್, ಏಷ್ಯನ್ ಪೇಂಟ್ಸ್, ಟೈಟಾನ್, ಎಚ್‌ಸಿಎಲ್ ಟೆಕ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಮಾರುತಿ ಮತ್ತು ಎಟರ್ನಲ್ ಹಿನ್ನಡೆ ಅನುಭವಿಸಿವೆ.
ಆದರೂ, ಭಾರತ್ ಎಲೆಕ್ಟ್ರಾನಿಕ್ಸ್, ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ಲಾರ್ಸೆನ್ ಅಂಡ್ ಟೂಬ್ರೊ, ಅದಾನಿ ಪೋರ್ಟ್ಸ್ ಮತ್ತು ಇನ್ಫೊಸಿಸ್ ಲಾಭ ಗಳಿಸಿವೆ.
ಕಳೆದ ನಾಲ್ಕು ದಿನಗಳಲ್ಲಿ ಬಿಎಸ್‌ಇ ಸೆನ್ಸೆಕ್ಸ್ 1,298.33 ಅಂಶಗಳಷ್ಟು, ಅಂದರೆ ಶೇ 1.56ರಷ್ಟು ಕುಸಿದಿದೆ. ನಿಫ್ಟಿ 366.7 ಅಂಶಗಳಷ್ಟು ಕುಸಿದಿದೆ.
ವಿನಿಮಯ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ₹2,425.75 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಭಾರತದ ಮೇಲೆ ಹೇರಿದ ಭಾರಿ ಸುಂಕ ಮತ್ತು H-1B ವೀಸಾ ಶುಲ್ಕವನ್ನು 1,00,000 ಲಕ್ಷ ಡಾಲರ್‌ಗೆ ಏರಿಸಿರುವುದು ಹೂಡಿಕೆದಾರರ ಕಳವಳಕ್ಕೆ ಕಾರಣವಾಗಿದೆ.
ಏಷ್ಯಾದ ಮಾರುಕಟ್ಟೆಗಳ ಪೈಕಿ, ದಕ್ಷಿಣ ಕೊರಿಯಾದ ಕಾಸ್ಪಿ ಕುಸಿತ ಕಂಡರೆ, ಜಪಾನ್‌ನ ನಿಕ್ಕಿ 225 ಸೂಚ್ಯಂಕ, ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಏರಿಕೆ ದಾಖಲಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.