ಮುಂಬೈ: ಭಾರತ ಮತ್ತು ಪಾಕಿಸ್ತಾನದ ನಡುವೆ ತಲೆದೋರಿರುವ ಬಿಕ್ಕಟ್ಟು ದೇಶದ ಷೇರುಪೇಟೆ ಮೇಲೂ ಪರಿಣಾಮ ಬೀರಿದ್ದು, ಗುರುವಾರ ನಡೆದ ವಹಿವಾಟಿನಲ್ಲಿ ಸೂಚ್ಯಂಕಗಳು ಇಳಿಕೆ ಕಂಡಿವೆ.
ಬ್ಯಾಂಕಿಂಗ್, ಎಫ್‌ಎಂಸಿಜಿ ಮತ್ತು ಆಟೊ ಷೇರುಗಳ ಮಾರಾಟ ಹೆಚ್ಚಳವು ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟಿಗೆ ಕಾರಣವಾಯಿತು. ಇದರಿಂದ ಹೂಡಿಕೆದಾರರ ಸಂಪತ್ತು ₹5 ಲಕ್ಷ ಕೋಟಿ ಕರಗಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 411 ಅಂಶ ಇಳಿಕೆ ಕಂಡು, 80,334 ಅಂಶಗಳಲ್ಲಿ ಸ್ಥಿರಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 759 ಅಂಶ ಇಳಿಕೆ ಕಂಡಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 140 ಅಂಶ ಇಳಿಕೆಯಾಗಿ 24,273 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 264 ಅಂಶ ಇಳಿಕೆ ಕಂಡಿತ್ತು.
ಸೆನ್ಸೆಕ್ಸ್ ಗುಚ್ಛದಲ್ಲಿನ ಎಟರ್ನಲ್, ಮಹೀಂದ್ರ ಆ್ಯಂಡ್ ಮಹೀಂದ್ರ, ಮಾರುತಿ, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ಭಾರ್ತಿ ಏರ್‌ಟೆಲ್, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ಪವರ್ ಗ್ರಿಡ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳ ಮೌಲ್ಯ ಇಳಿಕೆಯಾಗಿದೆ.
ಕೋಟಕ್ ಮಹೀಂದ್ರ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಟೈಟನ್, ಎಚ್‌ಸಿಎಲ್ ಟೆಕ್, ಟಾಟಾ ಮೋಟರ್ಸ್, ಇನ್ಫೊಸಿಸ್, ಟಿಸಿಎಸ್ ಷೇರಿನ ಮೌಲ್ಯ ಏರಿಕೆಯಾಗಿದೆ.
ಹೂಡಿಕೆದಾರರು ಲಾಭದ ಉದ್ದೇಶಕ್ಕಾಗಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದೆ. ಇದು ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟಿಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.