ADVERTISEMENT

ಷೇರುಪೇಟೆಯಲ್ಲಿ ಗೂಳಿ ಓಟ: ಹೂಡಿಕೆದಾರರ ಸಂಪತ್ತು ₹16.15 ಲಕ್ಷ ಕೋಟಿಯಷ್ಟು ಹೆಚ್ಚಳ

ಪಿಟಿಐ
Published 12 ಮೇ 2025, 14:20 IST
Last Updated 12 ಮೇ 2025, 14:20 IST
ಷೇರುಪೇಟೆಯಲ್ಲಿ ಗೂಳಿ ಓಟ
ಷೇರುಪೇಟೆಯಲ್ಲಿ ಗೂಳಿ ಓಟ   

ಮುಂಬೈ: ಭಾರತ–ಪಾಕಿಸ್ತಾನದ ನಡುವೆ ಯುದ್ಧ ವಿರಾಮ ಘೋಷಣೆ ಮತ್ತು ಅಮೆರಿಕ–ಚೀನಾ ಸುಂಕದ ಕುರಿತಾದ ಘೋಷಣೆ ಬೆನ್ನಲ್ಲೇ ಷೇರು ಪೇಟೆಯಲ್ಲಿ ಒಂದು ದಿನದ ದಾಖಲೆಯ ಏರಿಕೆ ಕಂಡುಬಂದಿದೆ. ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸಕ್ಸ್ ಮತ್ತು ನಿಫ್ಟಿ ಸುಮಾರು ಶೇ 4ರಷ್ಟು ಏರಿಕೆ ಕಂಡಿವೆ.

ಏರಿಕೆಯೊಂದಿಗೆ ಆರಂಭವಾಗಿದ್ದ 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 2,975.43 ಅಂಶಗಳಷ್ಟು, ಅಂದರೆ ಶೇ 3.74ರಷ್ಟು ಏರಿಕೆಯಾಗಿ ಏಳು ತಿಂಗಳಿಗಿಂತ ಹೆಚ್ಚಿನ ಗರಿಷ್ಠ 82,429.90ಕ್ಕೆ ವಹಿವಾಟು ಮುಗಿಸಿತು. ದಿನದ ವಹಿವಾಟಿನಲ್ಲಿ 3,041.5 ಅಂಶಗಳಷ್ಟು ಏರಿಕೆ ಕಂಡಿತ್ತು.

ಎನ್‌ಎಸ್‌ಇ ನಿಫ್ಟಿ 916.70 ಅಂಶಗಳಷ್ಟು, ಅಂದರೆ ಶೇ 3.82ರಷ್ಟು ಏರಿಕೆಯಾಗಿ 24,924.70ರಲ್ಲಿ ಮುಕ್ತಾಯವಾಯಿತು. ದಿನದ ವಹಿವಾಟಿನಲ್ಲಿ 936.8 ಅಂಶಗಳಷ್ಟು ಏರಿಕೆ ಕಂಡಿತ್ತು.

ADVERTISEMENT

ಐಟಿ, ಲೋಹ, ರಿಯಾಲ್ಟಿ ಮತ್ತು ತಂತ್ರಜ್ಞಾನ ಷೇರುಗಳ ಖರೀದಿಯಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ತಮ್ಮ ಒಂದೇ ದಿನದ ಅತಿದೊಡ್ಡ ಲಾಭವನ್ನು ದಾಖಲಿಸಿದವು.

2024ರ ಜೂನ್ 3ರಂದು ಸೆನ್ಸೆಕ್ಸ್ 2,507.45 ಅಂಶಗಳಷ್ಟು ಏರಿಕೆ ಕಂಡಿದ್ದೇ ಏಕದಿನದ ಅತಿದೊಡ್ಡ ಏರಿಕೆಯಾಗಿತ್ತು. ನಿಫ್ಟಿ ಸಹ ಅಂದು 733.20 ಅಂಕಗಳ ಏರಿಕೆಯನ್ನು ದಾಖಲಿಸಿತ್ತು.

ಷೇರುಪೇಟೆ ಏರಿಕೆ ಬಳಿಕ ಹೂಡಿಕೆದಾರರ ಸಂಪತ್ತು ಒಂದೇ ದಿನ ₹16.15 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ.

ಬಿಎಸ್‌ಇ-ಗುಚ್ಛದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು ಒಂದೇ ದಿನದಲ್ಲಿ₹16,15,275.19 ಕೋಟಿಗಳಷ್ಟು ಏರಿಕೆಯಾಗಿ ₹4,32,56,125.65 ಕೋಟಿಗೆ (5.05 ಟ್ರಿಲಿಯನ್ ಡಾಲರ್‌) ತಲುಪಿತು.

ಅಮೆರಿಕ ಮತ್ತು ಚೀನಾ ಭಾನುವಾರ 90 ದಿನಗಳ ಕಾಲ ಹೆಚ್ಚಿನ ಸುಂಕವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಜಿನೀವಾದಲ್ಲಿ ನಡೆದ ಮಾತುಕತೆಯ ನಂತರ, ಚೀನಾ ಸರಕುಗಳ ಮೇಲಿನ ಸುಂಕವನ್ನು ಶೇ 145ರಿಂದ ಶೇ 30 ಕ್ಕೆ ಇಳಿಸಲು ಅಮೆರಿಕ ಒಪ್ಪಿಕೊಂಡರೆ, ಚೀನಾ ಅಮೆರಿಕ ಸರಕುಗಳ ಮೇಲಿನ ಸುಂಕವನ್ನು ಶೇ 125ರಿಂದ ಶೇ 10ಕ್ಕೆ ಇಳಿಸುವುದಾಗಿ ಘೋಷಿಸಿತ್ತು.

ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಇನ್ಫೋಸಿಸ್ ಶೇ 7.91ರಷ್ಟು ಏರಿಕೆ ಕಂಡಿತು. ಎಚ್‌ಸಿಎಲ್ ಟೆಕ್, ಟಾಟಾ ಸ್ಟೀಲ್, ಎಟರ್ನಲ್, ಟೆಕ್ ಮಹೀಂದ್ರ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಜಾಜ್ ಫೈನಾನ್ಸ್ ಇತರ ಪ್ರಮುಖ ಲಾಭ ಗಳಿಸಿದ ಕಂಪನಿಗಳು.

ಸನ್ ಫಾರ್ಮಾ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಮಾತ್ರನಷ್ಟ ಕಂಡುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.