ADVERTISEMENT

ಅಮೆರಿಕದಿಂದ ಔಷಧ ಉತ್ಪನ್ನಗಳ ಮೇಲೆ ಶೇ 100ರಷ್ಟು ಸುಂಕ: ಷೇರುಪೇಟೆ ಕುಸಿತ

ಪಿಟಿಐ
Published 26 ಸೆಪ್ಟೆಂಬರ್ 2025, 19:36 IST
Last Updated 26 ಸೆಪ್ಟೆಂಬರ್ 2025, 19:36 IST
<div class="paragraphs"><p>ಷೇರುಪೇಟೆ</p></div>

ಷೇರುಪೇಟೆ

   

ಮುಂಬೈ / ನವದೆಹಲಿ: ಅಮೆರಿಕವು ಔಷಧ ಆಮದು ಮೇಲೆ ಶೇ 100ರಷ್ಟು ಸುಂಕ ವಿಧಿಸಿದೆ. ಇದರಿಂದಾಗಿ ದೇಶದ ಔಷಧ ವಲಯದ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿ ಶುಕ್ರವಾರದ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕಗಳು ಶೇ 1ರಷ್ಟು ಇಳಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 733 ಅಂಶ ಇಳಿಕೆಯಾಗಿ, 80,426ಕ್ಕೆ ವಹಿವಾಟು ಅಂತ್ಯಗೊಂಡಿದೆ. ವಹಿವಾಟಿನ ವೇಳೆ 827 ಅಂಶ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 236 ಅಂಶ ಕಡಿಮೆಯಾಗಿ, 24,654ಕ್ಕೆ ಕೊನೆಗೊಂಡಿದೆ. ಈ ಇಳಿಕೆಯು ಮೂರು ವಾರದ ಕನಿಷ್ಠ ಮಟ್ಟವಾಗಿದೆ. 

ADVERTISEMENT

ಬಿಎಸ್‌ಇ ಹೆಲ್ತ್‌ಕೇರ್‌ ಸೂಚ್ಯಂಕ ಶೇ 2.14ರಷ್ಟು ಇಳಿಕೆ ಕಂಡಿದೆ. ವೊಕ್ಹಾರ್ಟ್‌ ಕಂಪನಿಯ ಷೇರಿನ ಮೌಲ್ಯ
ಶೇ 9.4ರಷ್ಟು ಕುಸಿದಿದೆ. ಲಾರಸ್ ಲ್ಯಾಬ್ಸ್, ಗ್ಲೆನ್‌ಮಾರ್ಕ್‌, ಬಯೊಕಾನ್, ಝೈಡಸ್ ಲೈಫ್‌, ಸನ್‌ ಫಾರ್ಮಾ ಮತ್ತು ಡಾ. ರೆಡ್ಡೀಸ್ ಷೇರಿನ ಮೌಲ್ಯ ಇಳಿಕೆ ಆಗಿದೆ. 

‍‘ಅಮೆರಿಕ ವಿಧಿಸಿರುವ ಶೇ 100ರಷ್ಟು ಸುಂಕವು ಬ್ರ್ಯಾಂಡೆಡ್‌ ಮತ್ತು ಹಕ್ಕುಸ್ವಾಮ್ಯ ಪಡೆದಿರುವ ಔಷಧಗಳ ಮೇಲೆ ಮಾತ್ರ. ಆದರೆ, ಭಾರತ ರಫ್ತು ಮಾಡುವ ಬಹುತೇಕ ಉತ್ಪನ್ನಗಳು ಜೆನರಿಕ್‌ ಔಷಧಗಳಾಗಿವೆ. ಇವುಗಳಿಗೆ ಈಗ ವಿನಾಯಿತಿ ಇದೆ. ಆದರೆ, ರಫ್ತು ನಿಯಮಗಳ ಸುತ್ತಲಿನ ಅನಿಶ್ಚಿತತೆಯು ಆತಂಕವನ್ನು ಉಂಟು ಮಾಡಿದೆ’ ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ (ಸಂಶೋಧನೆ) ಅಜಿತ್ ಮಿಶ್ರಾ ಹೇಳಿದ್ದಾರೆ.

ಎಚ್‌–1ಬಿ ವೀಸಾ ಮೇಲಿನ ಶುಲ್ಕ ಹೆಚ್ಚಳವು ಮಾಹಿತಿ ತಂತ್ರಜ್ಞಾನ ಕಂಪನಿಗಳ ಷೇರುಗಳ ಮಾರಾಟಕ್ಕೆ ಕಾರಣವಾಯಿತು. ಇದು ಸಹ ಸೂಚ್ಯಂಕಗಳ ಇಳಿಕೆಗೆ ಕಾರಣವಾಯಿತು ಎಂದು ಮಾರುಕಟ್ಟೆ ಹೇಳಿದ್ದಾರೆ. 

ಮಹೀಂದ್ರ ಆ್ಯಂಡ್ ಮಹೀಂದ್ರ, ಎಟರ್ನಲ್‌, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರ, ಇನ್ಫೊಸಿಸ್, ಟಿಸಿಎಸ್ ಮತ್ತು ಎಚ್‌ಸಿಎಲ್‌ನ ಷೇರಿನ ಮೌಲ್ಯದಲ್ಲಿ ಇಳಿಕೆ ಆಗಿದೆ. ಲಾರ್ಸೆನ್ ಆ್ಯಂಡ್ ಟೊಬ್ರೊ, ಟಾಟಾ ಮೋಟರ್ಸ್, ಐಟಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಸೆಪ್ಟೆಂಬರ್‌ 19ರಿಂದ ನಡೆದ ಆರು ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 2,587 (ಶೇ 3.11) ಮತ್ತು ನಿಫ್ಟಿ 768 (ಶೇ 3) ಕುಸಿದಿದೆ. 

ಏಷ್ಯಾದ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾ, ಜಪಾನ್‌, ಶಾಂಘೈ ಮತ್ತು ಹಾಂಗ್‌ಕಾಂಗ್‌ ನಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರದ ವಹಿವಾಟಿನಲ್ಲಿ ₹4,995 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ.  ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.27ರಷ್ಟು ಇಳಿಕೆಯಾಗಿದೆ. ಪ್ರತೀ ಬ್ಯಾರೆಲ್ ದರವು 69.23 ಡಾಲರ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.