ಅಭಿಷೇಕ್ ಬ್ಯಾನರ್ಜಿ
(ಪಿಟಿಐ ಚಿತ್ರ)
ಕೋಲ್ಕತ್ತ: ಇಂದು ಮಂಡನೆಯಾದ ಕೇಂದ್ರದ ಬಜೆಟ್, ಕೇವಲ ಆಂಧ್ರ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷವಾಗಿ ಮಂಡಿಸಲಾದ ಬಜೆಟ್ ಆಗಿದ್ದು, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಂಡಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಂಗಳವಾರ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟಿಎಂಸಿ, ಕೇಂದ್ರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಡಿಸಿರುವ ಬಜೆಟ್, ಆರ್ಥಿಕ ಮತ್ತು ರಾಜಕೀಯ ದಿವಾಳಿತನದ ಪ್ರತಿಬಿಂಬವಾಗಿದೆ ಎಂದು ಟೀಕಿಸಿದೆ.
ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರ್ಕಾರವು ಆಂಧ್ರ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನವನ್ನು ನೀಡಿದೆ. ಪಶ್ಚಿಮ ಬಂಗಾಳವನ್ನು ನಿರ್ಲಕ್ಷ್ಯಿಸಲಾಗಿದೆ. ಎಂದು ಟಿಎಂಸಿಯ ಹಿರಿಯ ನಾಯಕ ಕುನಾಲ್ ಘೋಷ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಬಜೆಟ್ ಹಂಚಿಕೆ ಆಗಿರುವುದನ್ನು ಟಿಎಂಸಿ ವಿರೋಧಿಸುತ್ತಿಲ್ಲ. ಆದರೆ ಪಶ್ಚಿಮ ಬಂಗಾಳವನ್ನು ಕಡೆಗಣಿಸಲಾಗಿದೆ. ಇದು ಸೇಡಿನ ಮನೋಭಾವನೆಯಾಗಿದೆ. ದೇಶದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿದೆ. ಕೇವಲ ವಾಕ್ಚಾತುರ್ಯದ ಕುಶಲತೆಯ ಪ್ರದರ್ಶನವಾಗಿದೆ ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
‘ಈ ಬಜೆಟ್ ಶೂನ್ಯ ವಾರಂಟಿಯೊಂದಿಗೆ ಸಂಪೂರ್ಣ ವೈಫಲ್ಯವಾಗಿದೆ. ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರದಂತಹ ತುರ್ತು ಸಮಸ್ಯೆಗಳನ್ನು ನಿಭಾಹಿಸುವ ಬದಲು, ಬಿಜೆಪಿಯು ತನ್ನ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಪಕ್ಷಗಳಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಎಂಬ ಲಂಚ ನೀಡಿ ಸರ್ಕಾರ ಪತನವಾಗುವುದನ್ನು ತಪ್ಪಿಸಿಕೊಂಡಿದೆ ಎಂದು ಲೇವಡಿ ಮಾಡಿದ್ದಾರೆ.
ಬಜೆಟ್‌ನಲ್ಲಿ ಪ್ರಮುಖವಾಗಿ ಎನ್‌ಡಿಎ ಸರ್ಕಾರದ ಪ್ರಮುಖ ಪಕ್ಷಗಳಾದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷಗಳ ಸರ್ಕಾರಗಳಿರುವ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಯೋಜನೆಗಳನ್ನು ಮಂಜೂರು ಮಾಡಲಾಗಿದೆ.
ಬಿಹಾರದ ವಿವಿಧ ರಸ್ತೆ ಕಾಮಗಾರಿಗಳಿಗೆ ₹26 ಸಾವಿರ ಕೋಟಿ, ಹೊಸ ವಿಮಾನ ನಿಲ್ದಾಣಕ್ಕೆ ಅನುದಾನ.₹11,500 ಕೋಟಿ ಪ್ರವಾಹ ಸಂಬಂಧಿತ ಪರಿಸ್ಥಿತಿ ನಿಭಾಹಿಸಲು ವಿಶೇಷ ಅನುದಾನ ನೀಡಲಾಗಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಅನುದಾನ ಮೂಲಕ ಬಂಪರ್ ನೀಡಿದ್ದು, ಆಂಧ್ರಪ್ರದೇಶ ರಾಜಧಾನಿ ಅಮರಾವತಿ ಅಭಿವೃದ್ದಿಗಾಗಿ ₹15,000 ಕೋಟಿಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.