
ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವ ಮೊದಲು– ಬದಲಾದ, ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ನಮಗೆಂತಹ ಪದವಿ ಶಿಕ್ಷಣ ವ್ಯವಸ್ಥೆ ಬೇಕಿದೆ ಮತ್ತು ಬೇಕಿರುವ ಪದವಿ ಶಿಕ್ಷಣ ನೀಡಲು ಯಾವ ಹಿನ್ನೆಲೆಯ, ಯಾವ ಸಾಮರ್ಥ್ಯ ಹೊಂದಿದ ಶಿಕ್ಷಕರು ಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಅಗತ್ಯ. ಇಲ್ಲದೆ ಹೋದಲ್ಲಿ ಹೊಸ ಹುದ್ದೆಗಳೇ ಸಮಸ್ಯೆಗಳಾಗಬಹುದು.
ಉನ್ನತ ಶಿಕ್ಷಣ ರಂಗದಲ್ಲಿ ಅರ್ಥಾತ್ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪೂರ್ಣಕಾಲಿಕ– ಕಾಯಂ ಶಿಕ್ಷಕರಿರಬೇಕೆ, ಅತಿಥಿ ಶಿಕ್ಷಕರಿರಬೇಕೆ ಅಥವಾ ಸಂದರ್ಶಕ ಪ್ರಾಧ್ಯಾಪಕರು ಇದ್ದರೆ ಸಾಕೆ ಎಂಬ ಜಿಜ್ಞಾಸೆ ಒಂದೆಡೆ ನಡೆಯುತ್ತಿರುವಾಗಲೇ, ಇನ್ನೊಂದೆಡೆ ಇಡೀ ಉನ್ನತ ಶಿಕ್ಷಣ ರಂಗವೇ ತಣ್ಣನೆ ಕಂಪಿಸುತ್ತಿದೆ. ಕಾರಣ ಇಷ್ಟೇ. ಈ ಉನ್ನತ ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಅಗತ್ಯವೇ ಇಲ್ಲ ಎನ್ನುವ ಸ್ಥಿತಿಯೊಂದು ನಿಧಾನವಾಗಿ ಅನಾವರಣಗೊಳ್ಳುತ್ತಿದೆ. ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ದೊರೆಯುವ ಶಿಕ್ಷಣಕ್ಕೂ ಉದ್ಯೋಗ ಕ್ಷೇತ್ರಕ್ಕೂ ಸಂಬಂಧವಿಲ್ಲ ಎಂದು ಇಷ್ಟು ಕಾಲ ಎಲ್ಲರೂ ಹೇಳುತ್ತಿದ್ದರು. ಅದಕ್ಕಾಗಿ ಪದವಿ ಶಿಕ್ಷಣವನ್ನು ಪ್ರಸ್ತುತಗೊಳಿಸುವ ಬಗ್ಗೆ ವರದಿಗಳ ಮೇಲೆ ವರದಿಗಳು ಬಂದದ್ದಾಯಿತು. ನೀತಿಗಳ ಮೇಲೆ ನೀತಿಗಳನ್ನು ರೂಪಿಸಿದ್ದಾಯಿತು. ಈಗ ಪರಿಸ್ಥಿತಿ ಹೇಗೆ ಬದಲಾಗುತ್ತಿದೆ ಎಂದರೆ, ಪದವಿಯಲ್ಲಿ ಏನನ್ನು ಕಲಿಸುತ್ತೀರಿ ಬಿಡುತ್ತೀರಿ ಎನ್ನುವ ಪ್ರಶ್ನೆಯೇ ಉದ್ಭವಿಸುತ್ತಿಲ್ಲ. ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸಲು ಪದವಿಯ ಅಗತ್ಯವೇ ಇಲ್ಲ ಎನ್ನುವ ಪರಿಸ್ಥಿತಿಯೊಂದು ನಿಧಾನವಾಗಿ ನಿರ್ಮಾಣವಾಗುತ್ತಿದೆ. ವಿಶ್ವವಿದ್ಯಾಲಯಗಳ ಅಸ್ತಿತ್ವ ಉಳಿಯಬೇಕೆಂದಿದ್ದರೆ ಪದವಿ ಅಧ್ಯಯನದ ಪರಿಕಲ್ಪನೆಯನ್ನೇ ಮರುಸೃಷ್ಟಿಸಬೇಕಾದ ಕಾಲ ಬಂದಂತಿದೆ.
ವಿಶ್ವದೆಲ್ಲೆಡೆಯಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದ ಯುರೋಪ್ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳನ್ನು ಈ ಸಮಸ್ಯೆ ಎಷ್ಟರ ಮಟ್ಟಿಗೆ ಕಾಡುತ್ತಿದೆ ಎಂದರೆ, ಇಂಗ್ಲೆಂಡ್‌ನ ವಿಶ್ವ
ವಿದ್ಯಾಲಯಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿ ಸುತ್ತಿವೆ. ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಕಾರಣ ಇತ್ತೀಚೆಗೆ ಇಂಗ್ಲೆಂಡ್‌ನ ಕೆಂಟ್ ಮತ್ತು ಗ್ರೀನ್ವಿಚ್ ವಿಶ್ವವಿದ್ಯಾಲಯಗಳು ಪರಸ್ಪರ ವಿಲೀನಗೊಳ್ಳುತ್ತಿವೆ. ಬಿಬಿಸಿ ವರದಿಯ ಪ್ರಕಾರ ಇದು ಕೇವಲ ಆರಂಭ ಮಾತ್ರ. ಇನ್ನೂ ಹಲವಾರು ಸಣ್ಣ ಮತ್ತು ಮಧ್ಯಮ ಪ್ರಮಾಣದ ವಿಶ್ವವಿದ್ಯಾಲಯಗಳು ಒಂದೋ ಶಾಶ್ವತವಾಗಿ ಬಾಗಿಲು ಮುಚ್ಚಬೇಕು ಇಲ್ಲವೇ ವಿಲೀನಗೊಳ್ಳುವ ಮೂಲಕ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕು. ಜಗತ್ ಪ್ರಸಿದ್ಧ ಹಾರ್ವರ್ಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವೊಂದರ ಪ್ರಕಾರ– ಎಂಬಿಎ, ಕಂಪ್ಯೂಟರ್ ವಿಜ್ಞಾನ ಮತ್ತು ಅರ್ಥಶಾಸ್ತ್ರ ಸೇರಿದಂತೆ ಈ ತನಕ ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಲಾಗುವ 10 ಶೈಕ್ಷಣಿಕ ಪದವಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ.
ಈ ತನಕ ಪರಿಸ್ಥಿತಿ ಹೇಗಿತ್ತು ಎಂದರೆ, ಕೆಲವೊಂದು ವಿಶ್ವವಿದ್ಯಾಲಯಗಳಿಂದ ಕೆಲವೊಂದು ವಿಷಯಗಳಲ್ಲಿ ಪದವಿಗಳನ್ನು ಸಂಪಾದಿಸಿದರೆ ಸಾಕು, ದೊಡ್ಡ ಮೊತ್ತದ ಸಂಬಳ ತರುವ ಉದ್ಯೋಗ ಗಳು ಹುಡುಕಿಕೊಂಡು ಬರುತ್ತವೆ, ಭವಿಷ್ಯ ಸುಭದ್ರ ವಾಗುತ್ತದೆ ಎನ್ನುವ ಸ್ಥಿತಿ ಇತ್ತು. ಅದು ಬದಲಾಗುತ್ತಿದೆ. ಯಾವ ಸಂಸ್ಥೆ, ಯಾವ ಪದವಿ, ಯಾವ ಪ್ರಮಾಣ ಪತ್ರ ಎಂದು ಯಾರೂ ಈಗ ಕೇಳುವುದಿಲ್ಲ. ಸಂಬಂಧಪಟ್ಟ ಉದ್ಯೋಗ ನಿರ್ವಹಿಸಲು ಅಭ್ಯರ್ಥಿಗೆ ಸಾಮರ್ಥ್ಯ ಇದೆಯೇ ಇಲ್ಲವೇ ಎನ್ನುವುದಷ್ಟೆ ಮುಖ್ಯ. ಇಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ಹಾಗಾದರೆ ಈ ಉದ್ಯೋಗಗಳನ್ನು ನಿರ್ವಹಿಸಲು ಬೇಕಾದ ಸಾಮರ್ಥ್ಯವನ್ನು ಅಭ್ಯರ್ಥಿಗಳು ಎಲ್ಲಿಂದ ಪಡೆದಿರುತ್ತಾರೆ? ಇಷ್ಟರ ತನಕ ಅಭ್ಯರ್ಥಿಗಳಲ್ಲಿ ಸೂಕ್ತ ಸಾಮರ್ಥ್ಯ ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಲು ಸಂಬಂಧಪಟ್ಟ ಪದವಿ ಪ್ರಮಾಣ ಪತ್ರ ಕಡ್ಡಾಯವಾಗಿತ್ತು. ಪರಿಸ್ಥಿತಿ ಬದಲಾಗುತ್ತಿದೆ. ಶಾಲೆ– ಕಾಲೇಜುಗಳ ಮುಖವನ್ನು ನೋಡದೇ ಇದ್ದರೂ ಪರವಾಗಿಲ್ಲ, ಸಂಬಂಧಪಟ್ಟ ಸಾಮರ್ಥ್ಯ ಇದ್ದರೆ ಸಾಕು. ಇಂತಹ ಸಾಮರ್ಥ್ಯಗಳನ್ನು ರೂಢಿಸಿಕೊಳ್ಳಲು ದೊಡ್ಡ ಮೊತ್ತದ ಫೀಸು ತೆತ್ತು, ದೊಡ್ಡ ದೊಡ್ಡ ಕಾಲೇಜು–ವಿಶ್ವವಿದ್ಯಾಲಯಗಳನ್ನು ಸೇರಿಕೊಳ್ಳಬೇಕೆಂಬ ದುರ್ದು ಈಗ ಇಲ್ಲ. ಉದ್ಯೋಗ ಮಾರುಕಟ್ಟೆಯು ಅಪೇಕ್ಷಿಸುವ ಸಾಮರ್ಥ್ಯ ಮತ್ತು ಕೌಶಲಗಳನ್ನು ಪಡೆಯಲು ನೂರಾರು ದಾರಿಗಳಿವೆ. ‘ಇಂಡೀಡ್’ ಎಂಬ ಉದ್ಯೋಗ ಮಾಹಿತಿ ಒದಗಿಸುವ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಈ ಸಂಸ್ಥೆಯ ಮೂಲಕ ಬರುವ ಅಮೆರಿಕನ್ ಉದ್ಯೋಗ ಜಾಹೀರಾತುಗಳ ಪೈಕಿ ಶೇ 52ರಷ್ಟು ಜಾಹೀರಾತುಗಳು ಅಭ್ಯರ್ಥಿಗಳಿಗೆ ಕನಿಷ್ಠ ಪದವಿ ಇರಬೇಕು ಎಂಬ ಅರ್ಹತೆಯನ್ನೇ ಕಿತ್ತುಹಾಕಿವೆ.
ಸಮಸ್ಯೆ ಎದುರಿಸುತ್ತಿರುವುದು ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳ ಪದವಿಗಳಷ್ಟೇ ಅಲ್ಲ. ಈಗ್ಗೆ ನಾಲ್ಕೈದು ದಶಕಗಳಿಂದ ಮಧ್ಯಮ ವರ್ಗಗಳ ಕನಸಾಗಿದ್ದ ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿಷಯಗಳಲ್ಲಿ ಪಡೆಯುವ ಪದವಿಗಳು ಕೂಡ ಅರ್ಥ ಕಳೆದುಕೊಳ್ಳುತ್ತಿವೆ. ತಂತ್ರಜ್ಞಾನ ಬದಲಾಗುತ್ತಿರುವ ವೇಗ ಹೇಗಿದೆ ಎಂದರೆ, ಮೂರೋ ನಾಲ್ಕು ವರ್ಷಗಳ ಪದವಿ ಮುಗಿಸಿ ಹೊರಬರುವುದರೊಳಗೆ ಕಲಿತ ವಿಚಾರಗಳೆಲ್ಲ ಹಳೆಯದಾಗಿಬಿಡುತ್ತಿವೆ. ಮತ್ತೆ ಮತ್ತೆ ಕಲಿಯುವುದು, ಮತ್ತೆ ಮತ್ತೆ ಕಲಿತದ್ದು ಅಪ್ರಸ್ತುತವಾಗುವುದು ಎನ್ನುವ ಸ್ಥಿತಿಗೆ ಹೊಂದಿಕೊಳ್ಳಲು ಎಲ್ಲ ರಂಗಗಳೂ ಹೆಣಗುತ್ತಿವೆ.
ನಿರಂತರ ಕಲಿಕೆ ಎನ್ನುವುದು ಹೊಸತೇನಲ್ಲ. ಆದರೆ, ಈತನಕದ ಪರಿಸ್ಥಿತಿಯಲ್ಲಿ ಮೊದಲಿಗೆ ಪದವಿ ತರಗತಿಗಳಲ್ಲಿ ಕುಳಿತು ಮೂಲಭೂತ ವಿಚಾರಗಳನ್ನು ತಿಳಿದುಕೊಳ್ಳುವುದು, ಆನಂತರ ಜೀವನಪರ್ಯಂತ ಕಲಿಯುವುದು ಎಂದಿತ್ತು. ಈಗ ವಿಷಯಗಳ ಕಲಿಕೆ ಎನ್ನುವುದು ತರಗತಿಗಳಲ್ಲಿ ಪ್ರಾರಂಭ ಆಗುವುದೂ ಇಲ್ಲ, ಮುಗಿಯುವುದೂ ಇಲ್ಲ. ಕಲಿಕೆಗೆ ಕೊನೆಯಿಲ್ಲ ಎಂಬುದನ್ನು ಇಷ್ಟುಕಾಲ ಒಂದು ಆದರ್ಶದ ಮಾತನ್ನಾಗಿ, ಒಂದು ತಾತ್ತ್ವಿಕ ಚಿಂತನೆ ಎಂಬಂತೆ ಹೇಳಲಾಗುತ್ತಿತ್ತು. ಈಗ ಹಾಗಲ್ಲ. ಇದು ಪ್ರಾಯೋಗಿಕವಾಗಿ ಅನುಸರಿಸಬೇಕಿರುವ ಅನಿವಾರ್ಯ ಮಾರ್ಗವಾಗುತ್ತಿದೆ. ಒಟ್ಟಿನಲ್ಲಿ ಪದವಿ ಎನ್ನುವುದು ಶೈಕ್ಷಣಿಕ ಪಯಣದಲ್ಲಿ ಕ್ರಮಿಸಬೇಕಿರುವ ಒಂದು ಮೈಲಿಗಲ್ಲೇ ಅಲ್ಲ ಎನ್ನುವ ಸ್ಥಿತಿ ತಲೆದೋರುತ್ತಿದೆ. ಕೃತಕ ಬುದ್ಧಿಮತ್ತೆಯ ಸಾಮಾಜಿಕ ಪರಿಣಾಮಗಳ ಬಗ್ಗೆ ನಿರಂತರವಾಗಿ ಚಿಂತನ ಮಂಥನ ನಡೆಸುತ್ತಿರುವ ಪ್ರಸಿದ್ಧ ಲೇಖಕ ಮತ್ತು ಚರಿತ್ರಕಾರ ಯೋವಾಲ್ ನೋವ ಹರಾರಿ ಅವರು ಹೇಳುವ ಹಾಗೆ, ಹಿಂದೆ ಯಾವುದಾದರೂ ಒಂದು ವೃತ್ತಿಪರ ಪದವಿಯಲ್ಲಿ ಕಲಿಯುವವರಿಗೆ ಮತ್ತು ಕಲಿಸುವವರಿಗೆ ತಾವು ಇಂತಹ ಉದ್ಯೋಗಗಳಿಗೋಸ್ಕರ ಕಲಿಯುತ್ತೇವೆ ಮತ್ತು ಕಲಿಸುತ್ತೇವೆ ಎನ್ನುವ ಸ್ಪಷ್ಟತೆ ಇರುತ್ತಿತ್ತು. ಈಗ ಈ ಮೂಲಭೂತ ಸ್ಪಷ್ಟತೆಯೇ ಇಲ್ಲದೆ ಉನ್ನತ ಶಿಕ್ಷಣದಲ್ಲಿ ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಮತ್ತು ಪದವಿಗಳನ್ನು ನೀಡಲಾಗುತ್ತಿದೆ. ಈ ಸಮಸ್ಯೆಗೆ ಹೊರತಾದ ಕಲಿಕಾ ವಿಷಯಗಳು ಬಹಳ ಕಡಿಮೆ. ಸದ್ಯಕ್ಕೆ ವೃತ್ತಿಪರ ನಿಯಂತ್ರಣಾ ಸಂಸ್ಥೆಗಳಿಂದ ಅಂಗೀಕಾರ ಪಡೆದು ನಡೆಸಬೇಕಿರುವ ವೃತ್ತಿಗಳಿಗೆ (ಉದಾ: ವೈದ್ಯರಿಗೆ, ವಕೀಲಿ ವೃತ್ತಿ ನಡೆಸುವವರಿಗೆ) ಮಾತ್ರ ಪದವಿ ಎನ್ನುವುದು ಔಪಚಾರಿಕವಾಗಿ ಬೇಕಿರುವುದು. ಉಳಿದ ಹಾಗೆ ವೃತ್ತಿಪರ ನೈಪುಣ್ಯ ಇದ್ದರೆ ಆಯಿತು. ಅದಕ್ಕೆ ಪದವಿ ಪ್ರಮಾಣ ಪತ್ರದ ಅಂಗೀಕಾರ ಮುದ್ರೆಯೇನೂ ಬೇಕಿಲ್ಲ.
ಕರ್ನಾಟಕದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಶೇ 50ರಷ್ಟು ವಿವಿಧ ಹಂತಗಳ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ ಎನ್ನುವ ವಸ್ತುಸ್ಥಿತಿಯನ್ನು ಈ ಹಿನ್ನೆಲೆಯಲ್ಲಿ ನೋಡುವ ಅಗತ್ಯವಿದೆ. ಇಷ್ಟೊಂದು ಪ್ರಮಾಣದಲ್ಲಿ ಖಾಲಿ ಹುದ್ದೆಗಳನ್ನು ಇರಿಸಿಕೊಂಡು ಪರಿಸ್ಥಿತಿ ನಿಭಾಯಿಸಲು ಅತಿಥಿ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳುವುದು ಮೇಲ್ನೋಟಕ್ಕೆ ಸಮಸ್ಯೆ ಎಂದು ಕಾಣಬಹುದು. ಕೆಲವೊಮ್ಮೆ ಅವಕಾಶಗಳು ಸಮಸ್ಯೆಯ ರೂಪದಲ್ಲಿ ಬರುತ್ತವೆ. ಇದೂ ಹಾಗೆ. ಪದವಿ ಶಿಕ್ಷಣ ಎನ್ನುವ ಹಂತವೇ ಒಂದು ಸಂಕ್ರಮಣ ಸ್ಥಿತಿಯನ್ನು ಹಾದುಹೋಗುತ್ತಿರುವ ಈ ಹೊತ್ತಿನಲ್ಲಿ, ಈ ಎಲ್ಲಾ ಹುದ್ದೆಗಳನ್ನು ಅವುಗಳು ಇರುವ ಸ್ವರೂಪದಲ್ಲೇ ತುಂಬುವುದರಿಂದ ಬೊಕ್ಕಸಕ್ಕೆ ಶಾಶ್ವತ ನಷ್ಟವಾಗುತ್ತದೆಯೇ ಹೊರತು ಉನ್ನತ ಶಿಕ್ಷಣದ ವ್ಯಾಪಕತೆಯೂ ಹೆಚ್ಚುವುದಿಲ್ಲ, ಗುಣಮಟ್ಟವೂ ವೃದ್ಧಿಸುವುದಿಲ್ಲ. ಇದರರ್ಥ ಹುದ್ದೆಗಳನ್ನು ಖಾಲಿ ಬಿಡಬೇಕೆಂದಲ್ಲ. ಹುದ್ದೆಗಳನ್ನು ತುಂಬುವ ಮೊದಲು ಬದಲಾದ ಪರಿಸ್ಥಿತಿಯಲ್ಲಿ, ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ನಮಗೆಂತಹ ಪದವಿ ಶಿಕ್ಷಣ ವ್ಯವಸ್ಥೆ ಬೇಕಿದೆ ಮತ್ತು ಬೇಕಿರುವ ಪದವಿ ಶಿಕ್ಷಣ ನೀಡಲು ಯಾವ ಹಿನ್ನೆಲೆಯ, ಯಾವ ಸಾಮರ್ಥ್ಯ ಹೊಂದಿದ ಶಿಕ್ಷಕರ ಅವಶ್ಯಕತೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ಹೋದರೆ ಹುದ್ದೆಗಳನ್ನು ತುಂಬಿದ ನಂತರ ಹೊಸ ಸಮಸ್ಯೆಗಳು ತಲೆದೋರಲಿವೆ.
ರಾಜ್ಯದಲ್ಲೂ ಕೆಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಕೆಲವಾರು ವಿಭಾಗಗಳೇ ಮುಚ್ಚಿ ಹೋಗುತ್ತಿರುವ ವಾಸ್ತವ ನಮ್ಮ ಕಣ್ಣ ಮುಂದಿದೆ. ಪದವಿಗಳು ಅಪ್ರಸ್ತುತಗೊಳ್ಳುತ್ತಿವೆ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಕೌಶಲ ತರಬೇತಿ ಕೋರ್ಸುಗಳನ್ನು ಕೆಲವು ವಿಶ್ವವಿದ್ಯಾಲಯಗಳು ಪ್ರಾರಂಭಿಸುತ್ತಿವೆ. ಇದು ವಿಶ್ವವಿದ್ಯಾಲಯಗಳ ಪ್ರಸ್ತುತತೆಯನ್ನು ಉಳಿಸುವ ವಿಧಾನವಲ್ಲ. ಯಾಕೆಂದರೆ, ಅಲ್ಪಕಾಲೀನ ಕೌಶಲ ತರಬೇತಿ ಒದಗಿಸುವ ಕೋರ್ಸುಗಳನ್ನು ನಡೆಸಲು ವಿಶ್ವವಿದ್ಯಾಲಯ ಬೇಕಿಲ್ಲ. ಅದು ಪಾಲಿಟೆಕ್ನಿಕ್‌ಗಳು ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳು ಮಾಡ ಬೇಕಿರುವ ಕೆಲಸ. ಹಾಗೆಂದು ವಿಶ್ವವಿದ್ಯಾಲಯದಲ್ಲಿ ದೊರೆಯುವ ಶಿಕ್ಷಣ ಮೇಲ್ಮಟ್ಟದ್ದು, ಪಾಲಿಟೆಕ್ನಿಕ್ ಗಳಲ್ಲಿ ಸಿಗುವ ತರಬೇತಿ ಕೆಳಮಟ್ಟದ್ದು ಅಂತ ಅಲ್ಲ. ಈ ಎರಡೂ ಹಂತದ ಶಿಕ್ಷಣದ ಸ್ವರೂಪ ಮತ್ತು ಉದ್ದೇಶಗಳು ಬೇರೆ ಬೇರೆ. ಪಾಲಿಟೆಕ್ನಿಕ್ ಕೇಂದ್ರಗಳು ಮಾಡುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡತೊಡಗಿದರೆ, ಅದರಿಂದ ವಿಶ್ವವಿದ್ಯಾಲಯಗಳು ಉಳಿಯುವುದಿಲ್ಲ. ಬದಲಿಗೆ ಅವುಗಳ ಪತನ ಇನ್ನಷ್ಟು ಶೀಘ್ರವಾಗಿ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.