ADVERTISEMENT

ಅನುಸಂಧಾನ | ಅವಳ ಕತೆ, ಗರ್ಭದಲ್ಲೇ ಉಳಿವ ವ್ಯಥೆ

ಲೈಂಗಿಕ ಪ್ರಕರಣ: ರಾಜಕಾರಣಿಗಳು ಬಚಾವ್ ಆಗುತ್ತಾರೆ, ಆದರೆ ಹೆಣ್ಣುಮಕ್ಕಳು?

ರವೀಂದ್ರ ಭಟ್ಟ
Published 29 ಮಾರ್ಚ್ 2025, 0:30 IST
Last Updated 29 ಮಾರ್ಚ್ 2025, 0:30 IST
   

ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ ಅವರ ತಂದೆ ಪಂಡಿತ್ ತಾರಾನಾಥ ಅವರು ಆಯುರ್ವೇದ ವೈದ್ಯರೂ ಹೌದು. ಒಂದು ದಿನ ಗರ್ಭಿಣಿಯೊಬ್ಬಳು ಅವರ ಬಳಿಗೆ ಬಂದು, ಬಸಿರು ಕಳೆದುಕೊಳ್ಳಲು ಔಷಧಿ ಕೊಡುವಂತೆ ಕೇಳಿಕೊಂಡಳು. ‘ಏಕೆ?’ ಎಂದು ತಾರಾನಾಥರು ಕೇಳಿದಾಗ ಅವಳು ‘ನಾನು ವಿಧವೆ. ಈಗ ಬಸಿರಾಗಿರುವುದರಿಂದ ಸಮಾಜದಲ್ಲಿ ಕಷ್ಟವಾಗುತ್ತದೆ’ ಎಂದು ಹೇಳಿದಳು. ಆಗ ತಾರಾನಾಥರು ‘ಸರಿ, ಹೆರಿಗೆಯಾಗುವವರೆಗೆ ಆಶ್ರಮದಲ್ಲಿಯೇ ಇದ್ದುಬಿಡಮ್ಮ’ ಎಂದರು. ‘ಆದರೆ ನಾಳೆ ಈ ಮಗುವಿಗೆ ಅಪ್ಪ ಯಾರೆಂದು ಸಮಾಜ ಕೇಳಿದರೆ ಏನೆಂದು ಹೇಳಲಿ?’ ಎಂದು ಅವಳು ಮತ್ತೆ ಕೇಳಿದಾಗ ‘ನಾನು ಅಂತ ಹೇಳಿಬಿಡಮ್ಮ. ಆದರೆ ಮಗೂನ ಮಾತ್ರ ಕೊಲ್ಲಬೇಡ’ ಎಂದರಂತೆ ತಾರಾನಾಥರು.

ಈ ಪ್ರಕರಣವನ್ನು ತಮ್ಮ ಜೀವನಚರಿತ್ರೆಯಲ್ಲಿ ರಾಜೀವ ತಾರಾನಾಥರು ‘ಇದು ದಿಲ್ದಾರತನ ಎಂದರೆ’ ಎಂದು ಬರೆಯುತ್ತಾರೆ. ತಾರಾನಾಥರ ದಿಲ್ದಾರತನದಲ್ಲಿ ಮನಸ್ಸು ಇತ್ತು, ಹೃದಯ ಇತ್ತು. ಒಂದು ಮಗುವಿನ ಜೀವ ಉಳಿಸುವ, ಒಬ್ಬ ಮಹಿಳೆಯನ್ನು ರಕ್ಷಿಸುವ ತುಡಿತ ಇತ್ತು. ಈಗ ಕಾಲ ಎಷ್ಟು ಬದಲಾಗಿದೆ ನೋಡಿ. ಈಗ ದಿಲ್ದಾರತನದ ವ್ಯಾಖ್ಯಾನ ಕೂಡ ಬದಲಾಗಿದೆ. ಗಂಡು ಕೂಡ ಬದಲಾಗಿದ್ದಾನೆ. ನಮ್ಮ ಮುಂದೆ ಬಿಚ್ಚಿ ಕೊಳ್ಳುತ್ತಿರುವ ನಮ್ಮ ರಾಜಕಾರಣಿಗಳ ದಿಲ್ದಾರತನವನ್ನು ನೋಡಿದರೆ ಅಸಹ್ಯವಾಗುತ್ತದೆ. ಅಲ್ಲಿ ಹೃದಯಕ್ಕೆ, ಮನಸ್ಸಿಗೆ ಜಾಗವೇ ಇಲ್ಲ. ಎಲ್ಲವೂ ವ್ಯಾಪಾರ, ಎಲ್ಲವೂ ರಾಜಕಾರಣ, ಅಧಿಕಾರದ ಲಾಲಸೆ. ಅವರಿಗೆ ಹೆಣ್ಣೆಂದರೆ ಒಂದು ವಸ್ತು. ಬೇಕಾದಾಗ ಬೇಕಾದ ಹಾಗೆ ಬಳಸಬಹುದಾದ ಮಾಂಸದ ಮುದ್ದೆ ಅಷ್ಟೆ. ಹೆಣ್ಣಿನ ಅಸಹಾಯಕತೆಯನ್ನು ಬಳಸಿಕೊಂಡು ಮೆರೆಯುವ ಮೋಜುದಾರರು ಅವರು.

ಅಧಿಕಾರ ಪಡೆಯಲು, ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಯಾರನ್ನಾದರೂ ಅಧಿಕಾರದಿಂದ ಕಿತ್ತು
ಹಾಕಲು ಹೆಣ್ಣನ್ನು ಬಳಸಿಕೊಳ್ಳುವುದು ಇತ್ತೀಚಿನ ದಿನ ಮಾನದಲ್ಲಿ ವಿಪರೀತವಾಗುತ್ತಿದೆ. ಈಗ ಅದಕ್ಕೆ ಹೊಚ್ಚಹೊಸ ಉದಾಹರಣೆ ಎಂದರೆ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಮಧುಬಲೆಗೆ ಕೆಡವಲು ನಡೆದಿದೆ ಎನ್ನಲಾದ ಯತ್ನ. ಮಧುಬಲೆ ಯತ್ನಕ್ಕೆ ಸಿಲುಕಿದ ರಾಜಣ್ಣ ಅವರ ಬಗ್ಗೆ ನಮಗೆ ಸಹಾನುಭೂತಿಯೇ ವಿನಾ ಬಲೆ ಬೀಸಲು ಬಂದ ಮಧು ನಂತರ ಯಾವ ಬಲೆಯೊಳಗೆ ಸಿಲುಕಿರಬಹುದು ಎಂದು ನಾವು ಯೋಚಿಸುವುದೇ ಇಲ್ಲ.

ADVERTISEMENT

ಎರಡು ದಶಕಗಳಿಂದ ನಮ್ಮ ವಿಧಾನಮಂಡಲ ಅಧಿವೇಶನ ಎನ್ನುವುದು ಲೈಂಗಿಕ ಅನಾಚಾರ ಕುರಿತ ಚರ್ಚೆಯ ಕೇಂದ್ರವಾಗಿದೆ. ‘ದಯವಿಟ್ಟು ಕ್ಷಮಿಸಿ, ಇದು ವಯಸ್ಕರಿಗೆ ಮಾತ್ರ’ ಎಂದು ಬೋರ್ಡ್ ಹಾಕುವಷ್ಟು ಅದು ಹೊಲಸಾಗಿದೆ. ನಮ್ಮ ಮಾಧ್ಯಮಗಳು ಇಂತಹ ಲೈಂಗಿಕ ಹಗರಣಗಳನ್ನು ಎಷ್ಟು ವರ್ಣರಂಜಿತವಾಗಿ
ಪ್ರಸಾರ ಮಾಡಿವೆ ಎಂದರೆ, ಯಾರದ್ದಾದರೂ ರಾಜಕಾರಣಿಯ ಹೆಸರು ಹೇಳಿದರೆ ತಕ್ಷಣ ಅವರ ಮುಖ ನೆನಪಿಗೆ ಬರುವುದಿಲ್ಲ, ಬೇರೆ ಏನೋ ನೆನಪಿಗೆ ಬರುತ್ತದೆ. 

2007ರಿಂದ ಇಲ್ಲಿಯವರೆಗೆ ಹತ್ತಾರು ರಾಜಕಾರಣಿಗಳ ಲೈಂಗಿಕ ಹಗರಣಗಳು ವರದಿಯಾಗಿವೆ. ಬಹುತೇಕ ಪ್ರಕರಣಗಳಲ್ಲಿ ರಾಜಕಾರಣಿಗಳು ಆರೋಪಮುಕ್ತರಾಗಿದ್ದಾರೆ. ಆದರೆ ಇಂತಹ ಪ್ರಕರಣಗಳಲ್ಲಿ ಯಾವುದೋ ಕಾರಣಕ್ಕೆ ಭಾಗಿಯಾದ ಹೆಣ್ಣುಮಕ್ಕಳ ಬದುಕು ಏನಾಗಿದೆ? ನಮ್ಮ ಸಮಾಜ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪುರುಷರ ಕೊಳಕು ಅಹಂಕಾರ ಎಷ್ಟಿದೆ ಎಂದರೆ, ಹಾಸನದ ಯುವ ರಾಜಕಾರಣಿ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನೇ ತೆಗೆದುಕೊಳ್ಳಿ. ನೂರಾರು ಮಹಿಳೆಯರನ್ನು ಅವರು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಇದೆ. ನಮಗೆ ಪ್ರಜ್ವಲ್ ಜೈಲಿನಲ್ಲೇ ಇರುತ್ತಾರಾ, ಹೊರಗೆ ಬರುತ್ತಾರಾ ಎನ್ನುವುದರ ಬಗ್ಗೆ ಇರುವ ಕುತೂಹಲ ಆ ನೂರಾರು ಮಹಿಳೆಯರ ಬಗ್ಗೆ ಇಲ್ಲ. ಅವರ ಬದುಕನ್ನು ಸಹ್ಯ ಮಾಡುವ ಯತ್ನದಲ್ಲಿ ಇಲ್ಲ. ಅವರ ನೆಮ್ಮದಿ ಕೆಟ್ಟಿದೆ. ಆದರೂ ನಾವು ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತೇವೆಯೇ ವಿನಾ ಸಾಂತ್ವನ ಹೇಳುವುದಿಲ್ಲ. ಕೆಲವು ಪುರುಷರ ಮನಸ್ಸು ಹೇಗಿರುತ್ತದೆ ಎಂದರೆ, ಇಂತಹ ಪ್ರಕರಣದಲ್ಲಿ ಭಾಗಿಯಾದ ಹೆಣ್ಣನ್ನು ಕಂಡರೆ, ತನಗೂ ಒಂದು ಅವಕಾಶ ಸಿಗಬಹುದೇ ಎಂಬ ಭಾವ ಬರುತ್ತದೆಯೇ ವಿನಾ ಆ ಹೆಣ್ಣಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಸಮಾಜ ಕೂಡಾ ಹಾಗೆಯೇ ಇದೆ. ಯಾಕೆಂದರೆ ಸಮಾಜದಲ್ಲಿ ವಿಜೃಂಭಿಸುವುದು ಪುರುಷರ ಅಹಂಕಾರವೇ ವಿನಾ ಹೆಣ್ಣುಮಕ್ಕಳ ಕ್ಷೇಮವಲ್ಲ. ಹೆಣ್ಣು ಈಗ ಮನೆ, ಶಾಲೆ, ಕಚೇರಿ, ರಸ್ತೆ ಎಲ್ಲಿಯೂ ಸುರಕ್ಷಿತವಾಗಿಲ್ಲ. 

2007ರಲ್ಲಿ ಶಾಸಕರಾಗಿದ್ದ ರೇಣುಕಾಚಾರ್ಯ ಅವರ ವಿರುದ್ಧ ಲೈಂಗಿಕ ದುರುಪಯೋಗದ ಪ್ರಕರಣ ವರದಿಯಾಯಿತು. ಅದು ಭಾರಿ ಸದ್ದು ಮಾಡಿತು. 2008ರಲ್ಲಿ ಅವರು ಸಚಿವರಾದರು. 2010ರಲ್ಲಿ ಸಚಿವ ಹರತಾಳು ಹಾಲಪ್ಪ ಅವರ ವಿರುದ್ಧವೂ ಇಂತಹದೇ ಪ್ರಕರಣ ವರದಿಯಾಯಿತು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಅವರು ಆರೋಪದಿಂದ ಮುಕ್ತರೂ ಆದರು. ಈ ಪ್ರಕರಣ ಹೊರಬಿದ್ದ ಎರಡು ವರ್ಷದೊಳಗೆ ಮೂವರು ಸಚಿವರು ವಿಧಾನಸಭೆಯ ಅಧಿವೇಶನದಲ್ಲಿಯೇ ನೀಲಿಚಿತ್ರ ವೀಕ್ಷಣೆ ಮಾಡುತ್ತಿದ್ದುದು ಬಹಿರಂಗವಾಯಿತು. ವಿಧಾನಸಭೆಯಲ್ಲಿ ಅದರ ಬಗೆಗಿನ ಚರ್ಚೆ ಕೋಲಾಹಲವನ್ನೇ ಸೃಷ್ಟಿಸಿತು. ಪರಿಣಾಮವಾಗಿ ಆ ಮೂವರೂ ರಾಜೀನಾಮೆ ನೀಡಿದರು. ಶಾಸಕರಾಗಿದ್ದ ಉಡುಪಿಯ ರಘುಪತಿ ಭಟ್ಟರ ಪ್ರಕರಣ ಆ ಬಳಿಕ ವರದಿಯಾಯಿತು. ಆಗ ಅವರು ಚುನಾವಣೆ ಕಣದಿಂದ ಹಿಂದೆ ಸರಿದರು. ಮತ್ತೊಂದು ಬಾರಿ ಸ್ಪರ್ಧಿಸಿ ಗೆದ್ದರು.

2015ರಲ್ಲಿ, ಶಾಸಕರಾಗಿದ್ದ ಎ.ರಾಮದಾಸ್ ಪ್ರಕರಣ ಹೊರಗೆ ಬಂತು. ಇದರಿಂದ ನೊಂದ ಅವರು ಆತ್ಮಹತ್ಯೆಗೂ ಯತ್ನಿಸಿದ್ದರು. ಕೆಲವು ಕಾಲದ ನಂತರ ಅವರು ಆರೋಪ ಮುಕ್ತರಾದರು. 2016ರಲ್ಲಿ 71 ವರ್ಷ ವಯಸ್ಸಿನ, ಸಚಿವರಾಗಿದ್ದ ಎಚ್.ವೈ.ಮೇಟಿ ಅವರ ಲೈಂಗಿಕ ಪ್ರಕರಣ ಬಹಿರಂಗವಾಯಿತು. ಅವರು ಸಚಿವ ಸ್ಥಾನ ಕಳೆದುಕೊಳ್ಳ ಬೇಕಾಯಿತು. ವರ್ಗಾವಣೆ ಬೇಡಿಕೆ ಇಟ್ಟ ಮಹಿಳೆಯೊಂದಿಗೆ ಅವರು ಲೈಂಗಿಕ ಸಂಪರ್ಕ ನಡೆಸಿದ್ದರು ಎನ್ನುವುದು ಆರೋಪವಾಗಿತ್ತು. ಅವರೂ ಆರೋಪಮುಕ್ತರಾದರು. 2020ರಲ್ಲಿ ಆಗಿನ ಸಚಿವ ರಮೇಶ ಜಾರಕಿಹೊಳಿ ಲೈಂಗಿಕ ಪ್ರಕರಣ ಹೊರಗೆ ಬಂತು. ಉದ್ಯೋಗ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡಿ ದ್ದಾರೆ ಎಂಬ ಆರೋಪ ಕೇಳಿಬಂತು. ರಮೇಶ್ ಅವರು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. 2019ರಲ್ಲಿ ಶಾಸಕರೊಬ್ಬರ ಸಲಿಂಗಕಾಮದ ವಿಡಿಯೊ ಹರಿದಾಡಿತ್ತು. ಕೇಂದ್ರದಲ್ಲಿ ಸಚಿವರಾಗಿದ್ದ ರಾಜ್ಯದವರೊಬ್ಬರ ವಿಡಿಯೊ ಹೊರಬಂದ ಕಾರಣಕ್ಕೆ ಅವರು ತಮ್ಮ ಸ್ಥಾನ ಕಳೆದುಕೊಳ್ಳಬೇಕಾಯಿತು. ಇನ್ನು ಕೆಲವು ಶಾಸಕರು ಮತ್ತು ಸಂಸದರಿಗೆ ಚುನಾವಣಾ ಟಿಕೆಟ್ ನಿರಾಕರಣೆ ಮಾಡಲಾಯಿತು. ಇದರ ನಡುವೆ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಯಿತು.

ಈ ಎಲ್ಲ ಪ್ರಕರಣಗಳಲ್ಲಿನ ಸಾಮಾನ್ಯ ಅಂಶ ಏನೆಂದರೆ, ಬಹುತೇಕ ಬಾರಿ ಹೆಣ್ಣನ್ನು ಬಳಸಿಕೊಳ್ಳ
ಲಾಗಿದೆ. ಅಲ್ಲದೆ ಹಲವಾರು ಪ್ರಕರಣಗಳಲ್ಲಿ ಆರೋಪಿಗಳು ನಿರಪರಾಧಿಗಳು ಎಂದು ತನಿಖಾ ವರದಿಗಳು ಹೇಳಿವೆ. ಆದರೆ ಈ ಯಾವುದೇ ಪ್ರಕರಣದಲ್ಲಿ ಭಾಗಿಯಾದ ಹೆಣ್ಣಿನ ಕತೆ ಏನಾಯಿತು ಎನ್ನುವುದು ಈವರೆಗೂ ಯಾರಿಗೂ ಗೊತ್ತೇ ಆಗಲಿಲ್ಲ. ಸಚಿವರೊಂದಿಗೆ, ಶಾಸಕರೊಂದಿಗೆ, ಸಂಸದರೊಂದಿಗೆ ಸಲುಗೆಯಿಂದ ಇದ್ದ ಹೆಣ್ಣುಮಕ್ಕಳ ಅಸಹಾಯಕತೆ ಏನಾಗಿತ್ತು? ಯಾವ ಕಾರಣ ಒಡ್ಡಿ ಅವರನ್ನು ಇಂತಹ ಕೃತ್ಯದಲ್ಲಿ ತೊಡಗಿಸಲಾಗಿತ್ತು ಎನ್ನುವುದು ಬಹಿರಂಗವಾಗಲೇ ಇಲ್ಲ. ಅವರ ಪರಿಸ್ಥಿತಿ ಏನಿತ್ತು ಎನ್ನುವುದೂ ಗೊತ್ತಾಗಲಿಲ್ಲ. ಎಲ್ಲ ಕೃತ್ಯಗಳಲ್ಲಿಯೂ ವಿಜೃಂಭಿಸಿದ್ದು ಪುರುಷಾಹಂಕಾರ. ಅದು ಲೈಂಗಿಕ ಹಗರಣವಾಗಲಿ, ಮಧುಬಲೆಯಾಗಲಿ ಅಲ್ಲಿ ಹೆಣ್ಣು ದುರ್ಬಲೆ ಮತ್ತು ಅವಳ ಅಸಹಾಯಕತೆಯನ್ನು ಬಳಸಿ ಕೊಳ್ಳಲಾಗುತ್ತದೆ. ಅವಳ ಗೌರವಕ್ಕೆ ಮಸಿ ಬಳಿಯಲಾಗು ತ್ತದೆ. ಅವಳನ್ನು ಬಳಸಿ ಬಿಸಾಡಲಾಗುತ್ತದೆ. ಅವಳ ಕತೆ ಗರ್ಭದೊಳಗೇ ಹುದುಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.