ADVERTISEMENT

ಅನುಸಂಧಾನ | ಮನ ಕೊಳಕಾದರೆ ತೊಳೆಯುವುದು ಕಷ್ಟ!

ರವೀಂದ್ರ ಭಟ್ಟ
Published 28 ಮೇ 2025, 23:30 IST
Last Updated 28 ಮೇ 2025, 23:30 IST
   

1956ರಲ್ಲಿ ಮೆಹಬೂಬ್‌ನಗರದಲ್ಲಿ ರೈಲೊಂದು ಅಪಘಾತಕ್ಕೀಡಾಯಿತು. ಆಗ ರೈಲ್ವೆ ಸಚಿವರಾಗಿ‌ದ್ದವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು. ರೈಲು ಅಪಘಾತದ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸಿದರು. ಆದರೆ ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಅದಾದ ಎರಡೂವರೆ ತಿಂಗಳಿನಲ್ಲಿ ಅರಿಯಲೂರಿನಲ್ಲಿ ಮತ್ತೊಂದು ರೈಲು ಅಪಘಾತಕ್ಕೆ ಈಡಾಯಿತು. ಹಲವಾರು ಮಂದಿ ಪ್ರಾಣ ಕಳೆದುಕೊಂಡರು. ಆ ಬಾರಿ ಶಾಸ್ತ್ರಿಯವರು ಮತ್ತೆ ರಾಜೀನಾಮೆ ನೀಡಿದರು. ಅಲ್ಲದೆ, ಯಾರು ಹೇಳಿದರೂ ತಮ್ಮ ರಾಜೀನಾಮೆಯನ್ನು ವಾಪಸು ಪಡೆಯಲು ಒಪ್ಪಿಕೊಳ್ಳಲಿಲ್ಲ.

1956ರ ರಾಜಕಾರಣಕ್ಕೂ 2025ರ ರಾಜಕಾರಣಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಆಗ ರಾಜಕಾರಣದಲ್ಲಿ
ನೈತಿಕತೆ ಜೀವಂತ ಇತ್ತು. ನೈತಿಕತೆಯ ನೆಲೆಯಲ್ಲಿ ಪ್ರಶ್ನೆ ಮಾಡುವ ವಾತಾವರಣವೂ ಇತ್ತು. ಈಗ ನೈತಿಕತೆಯ ನೆಲೆಯಲ್ಲಿ ಪ್ರಶ್ನೆ ಮಾಡುವ ವಾತಾವರಣವೇ ಇಲ್ಲ. ಈಗ ಯಾರಾದರೂ ಯಾರದ್ದಾದರೂ ನೈತಿಕತೆ ಪ್ರಶ್ನೆ ಮಾಡಿದರೆ ‘ನಮಗೆ ಗೊತ್ತಿಲ್ವಾ ಅವರೇನು ಅಂತ. ಅವರದ್ದನ್ನೆಲ್ಲಾ ಬಿಚ್ಚಿಡಲಾ’ ಎನ್ನುತ್ತಾರೆ. ಅವರಿಗೂ ನೈತಿಕತೆ ಇಲ್ಲ, ಇವರಿಗೂ ಇಲ್ಲ ಎನ್ನುವ ಸ್ಥಿತಿ.

2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ಮಾಡಿ 26 ಪ್ರವಾಸಿಗರನ್ನು ನಿರ್ದಯವಾಗಿ ಕೊಂದು ಹಾಕಿದರು. ಇದೊಂದು ಅತ್ಯಂತ ನೀಚತನದ, ಹೇಯ ಕೃತ್ಯ. ಯಾವ ಕಾರಣಕ್ಕೂ ಕ್ಷಮೆಯೇ ಇಲ್ಲದ ಭಯೋತ್ಪಾದಕ ಘಟನೆ. ಇಡೀ ದೇಶ ಇದಕ್ಕಾಗಿ ದುಃಖಪಟ್ಟಿತು. ಪ್ರಪಂಚದ ಮಾನವೀಯ ಮನಸ್ಸುಗಳೆಲ್ಲ ಇದನ್ನು ಅತ್ಯಂತ ತೀಕ್ಷ್ಣವಾಗಿ ಖಂಡಿಸಿದವು. ನಂತರ ಭಾರತ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಕೆಡವಿಹಾಕಿತು. ಭಾರತದ ದಿಟ್ಟ ಉತ್ತರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಯಿತು. ನಮ್ಮ ಸೈನಿಕರ ಸಾಹಸವನ್ನು ಕೊಂಡಾಡಲಾಯಿತು. ಉಗ್ರವಾದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂಬ ಸಂದೇಶವನ್ನು ಜಗತ್ತಿಗೇ ರವಾನಿಸಲಾಯಿತು. ಪಾಕಿಸ್ತಾನದ ಕುಕೃತ್ಯಗಳನ್ನು ಬಯಲು ಮಾಡಲು ಸಂಸದರ ನಿಯೋಗಗಳೂ ಬೇರೆ ಬೇರೆ ದೇಶಗಳಿಗೆ ಪ್ರಯಾಣ ಬೆಳೆಸಿದವು. ಇವೆಲ್ಲ ಸರಿ, ಆದರೆ ಪಹಲ್ಗಾಮ್ ಘಟನೆಗೆ ವೀರಾವೇಶದ ಪ್ರತಿಕ್ರಿಯೆಗಳು ಬಂದವೇ ವಿನಾ ಪಶ್ಚಾತ್ತಾಪದ ಲವಲೇಶವೂ ಯಾವ ಮೂಲೆಯಲ್ಲಿಯೂ ಪ್ರಕಟವಾಗಲಿಲ್ಲ. ಆತ್ಮಾವಲೋಕನದ ಯತ್ನಗಳೂ ಕಾಣಲಿಲ್ಲ.

ADVERTISEMENT

ಪಹಲ್ಗಾಮ್ ದಾಳಿಯ ನಂತರ ಬೇಹುಗಾರಿಕೆ ವೈಫಲ್ಯದ ಬಗ್ಗೆ ಹೆಚ್ಚಿನ ಚರ್ಚೆಯಾಗಲಿಲ್ಲ. ಭದ್ರತಾ ವೈಫಲ್ಯದ ಬಗ್ಗೆಯೂ ಚರ್ಚೆ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಗೊಣಗಿದರೇ ವಿನಾ ಅದೇ ಪ್ರಧಾನ ಚರ್ಚೆಯಾಗಲಿಲ್ಲ. ಹಾಗೆ ಪ್ರಶ್ನೆ ಕೇಳಿದವರ ನೈತಿಕತೆಯನ್ನು ಕಸಿಯುವ ಪ್ರಯತ್ನಗಳು ನಡೆದವೇ ವಿನಾ ಭದ್ರತಾ ವೈಫಲ್ಯದ ಬಗ್ಗೆ ಸರ್ಕಾರದ ಕಡೆಯಿಂದ ಯಾವುದೇ ಸ್ಪಷ್ಟನೆ ಕೂಡಾ ಬರಲಿಲ್ಲ. ಘಟನೆಗೆ ಕಾರಣರಾದವರ ಪತ್ತೆಯೂ ಆಗಲಿಲ್ಲ. 

ಪಹಲ್ಗಾಮ್ ಪ್ರಕರಣದ ನಂತರ ಭಯೋತ್ಪಾದಕರ ಮೂಲೋಚ್ಚಾಟನೆ ಕುರಿತು ಅಬ್ಬರದ ಮಾತುಗಳು ಕೇಳಿಬಂದವೇ ವಿನಾ ಆದ ಘಟನೆಯ ನೈತಿಕ ಜವಾಬ್ದಾರಿಯನ್ನು ಒಬ್ಬರೂ ಹೊರಲೇ ಇಲ್ಲ. ಪ್ರಧಾನಿಯಾಗಲಿ, ಕೇಂದ್ರ ಗೃಹ ಸಚಿವರಾಗಲಿ, ರಕ್ಷಣಾ ಸಚಿವರಾಗಲಿ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದವರ ಕ್ಷಮೆ ಕೋರಿದ್ದರೆ, ದೇಶದ ಕ್ಷಮೆ ಕೇಳಿದ್ದರೆ ಅವರು ಇನ್ನೂ ದೊಡ್ಡವರಾಗುತ್ತಿದ್ದರು. ಸೇಡು ತೀರಿಸಿಕೊಳ್ಳುವುದು ಬೇರೆ, ಮಾನವೀಯ ನಡೆ ಬೇರೆ, ಆತ್ಮಾವಲೋಕನ ಬೇರೆ.

ಅದು ಹೋಗಲಿ, ಪಹಲ್ಗಾಮ್ ಪ್ರಕರಣದಲ್ಲಿ ಪ್ರಾಣ ಕಳೆದುಕೊಂಡವರ ಪತ್ನಿಯರ ನೈತಿಕತೆಯನ್ನೇ ಪ್ರಶ್ನೆ ಮಾಡುವ ಮಹಾಪುರುಷರ ಬಾಯಿಗೆ ಬೀಗ ಹಾಕುವ ಕೆಲಸವನ್ನೂ ಮಾಡಲಿಲ್ಲ. ಮಧ್ಯಪ್ರದೇಶದ ರಾಜ್ಯಸಭಾ ಸದಸ್ಯ ರಾಮಚಂದ್ರ ಜಾಂಗಡಾ ‘ಭಯೋತ್ಪಾದಕರ ವಿರುದ್ಧ ಮಹಿಳೆಯರು ಯಾಕೆ ಹೋರಾಟ ನಡೆಸಲಿಲ್ಲ?’ ಎಂದು ಪ್ರಶ್ನೆ ಮಾಡಿದರು. ‘ಪತಿಯನ್ನು ಕಳೆದುಕೊಂಡ ಮಹಿಳೆಯರು ವೀರಾಂಗನೆಯರ ತರಹ ವರ್ತಿಸಬೇಕಿತ್ತು, ಪ್ರವಾಸಿಗರು ಅಗ್ನಿವೀರರ ರೀತಿಯಲ್ಲಿ ತರಬೇತಿ ಪಡೆದು ಕೊಂಡವರಾಗಿದ್ದರೆ ಸಾವಿನ ಸಂಖ್ಯೆ ಕಡಿಮೆಯಾಗುತ್ತಿತ್ತು. ಪತಿಯನ್ನು ಕಳೆದುಕೊಂಡ ಮಹಿಳೆಯರಲ್ಲಿ ಹುಮ್ಮಸ್ಸು ಇರಲಿಲ್ಲ. ವೀರಾಂಗನೆಯರ ಭಾವ ಇರಲಿಲ್ಲ. ಹೀಗಾಗಿ ಅವರು ದಾಳಿಗೆ ಒಳಗಾದರು. ಬೇಡಿಕೊಂಡ ಮಾತ್ರಕ್ಕೆ ಭಯೋತ್ಪಾದಕರು ಅವರನ್ನು ಬಿಡುವುದಿಲ್ಲ. ನಮ್ಮ ಜನ ಕೈಮುಗಿದು ನಿಂತು ಪ್ರಾಣ ಕಳೆದುಕೊಂಡರು’ ಎಂದು ಅಸೂಕ್ಷ್ಮ ಹೇಳಿಕೆ ನೀಡಿದರು.

‘ನಿನ್ನ ಧರ್ಮ ಯಾವುದು?’ ಎಂದು ಕೇಳಿ ಹತ್ಯೆ ಮಾಡಿದ ಭಯೋತ್ಪಾದಕರ ಮನಃಸ್ಥಿತಿಗಿಂತ ಜಾಂಗಡಾ ಅವರ ಮನಃಸ್ಥಿತಿ ಭಿನ್ನವಾಗಿರಲಿಲ್ಲ. ನಮ್ಮ ಮಹಿಳೆಯರನ್ನು ಇಷ್ಟೊಂದು ಹೀನಾಯವಾಗಿ ನಿಂದಿಸಿದ ಆ ವ್ಯಕ್ತಿಯ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅದಕ್ಕೊಂದು ವಿಷಾದ ಕೂಡಾ ಆ ಪಕ್ಷದ ವತಿಯಿಂದ ಹೊರಬಿದ್ದಿಲ್ಲ. ಜಾಂಗಡಾ ಅವರ ಮಾತುಗಳು ಇಡೀ ಹೆಣ್ಣು ಕುಲವನ್ನು ಅಣಕಿಸುವಂತೆ ಇವೆ. ಆದರೂ ನಮಗೆ ಅಸಹನೆ ಉಂಟಾಗಲಿಲ್ಲ. ಅವರಿಗೆ ಛೀಮಾರಿ ಹಾಕುವ ಪ್ರಯತ್ನವೂ ನಡೆಯಲೇ ಇಲ್ಲ.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿದ್ದಾಗ ಭಾರತ–ಪಾಕಿಸ್ತಾನದ ನಡುವೆ ಎರಡನೇ ಯುದ್ಧವಾಯಿತು. ಆಗ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆ ಮಾಡಿದರು. ಅದು ಈಗಲೂ ಅತ್ಯಂತ ಜನಪ್ರಿಯ ಘೋಷಣೆ. ಆದರೆ ಈಗ ನಮ್ಮ ಮನಃಸ್ಥಿತಿ ಎಷ್ಟು ಬದಲಾಗಿದೆ ಎಂದರೆ, ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ‘ಇಡೀ ದೇಶ, ಸೇನೆ ಮತ್ತು ಯೋಧರು ಪ್ರಧಾನಿ ನರೇಂದ್ರ ಮೋದಿ ಅವರ ಕಾಲಿಗೆ ನಮಸ್ಕರಿಸುತ್ತಾರೆ’ ಎಂದು ಹೇಳಿಕೆ ನೀಡಿದರು. ಇದು ನಮ್ಮ ಸೇನೆಗೆ ಮಾಡುವ ಅವಮಾನ ಎಂದು ನಮ್ಮನ್ನು ಆಳುವ ಪ್ರಭುಗಳಿಗೆ ಅನ್ನಿಸಲೇ ಇಲ್ಲ. ಅಂತಹವರ ಬಾಯಿ ಮುಚ್ಚಿಸುವ ಕೆಲಸವೂ ಆಗಲಿಲ್ಲ.

ಭಯೋತ್ಪಾದಕರ ಮೂಲ ನೆಲೆಗಳ ಮೇಲೆ ದಾಳಿ ಮಾಡುವ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ’ ಎಂದು ಹೆಸರಿಟ್ಟಿದ್ದು, ಕಾರ್ಯಾಚರಣೆಯ ವಿವರಗಳನ್ನು ಪ್ರಕಟಿಸುವ ಜವಾಬ್ದಾರಿಯನ್ನು ಇಬ್ಬರು ಮಹಿಳೆಯರಿಗೆ ನೀಡಿದ್ದು ಎಲ್ಲವೂ ಲೆಕ್ಕಾಚಾರದ ನಡೆ. ಆದರೆ ಮಧ್ಯ ಪ್ರದೇಶದ ಸಚಿವ ವಿಜಯ್ ಶಾ ಅವರು ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಸೋಫಿಯಾ ಅವರನ್ನು ‘ಭಯೋತ್ಪಾದಕರ ಸಹೋದರಿ’ ಎಂದು ಕರೆದಿದ್ದರು. ನಂತರ ಅವರು ಕ್ಷಮೆ ಕೇಳಿದರಾದರೂ ಅದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳಲಿಲ್ಲ. ‘ವಿಜಯ್ ಶಾ ಅವರ ಹೇಳಿಕೆ ಇಡೀ ದೇಶಕ್ಕೆ ಮಾಡಿದ ಅವಮಾನ’ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಬಿಜೆಪಿಯು ಅವರ ಹೇಳಿಕೆಯನ್ನು ಖಂಡಿಸಲೂ ಇಲ್ಲ, ಶಾ ವಿರುದ್ಧ ಕ್ರಮವನ್ನೂ ಕೈಗೊಳ್ಳಲಿಲ್ಲ. ಇವೆಲ್ಲವೂ ಏನನ್ನು ಸೂಚಿಸುತ್ತವೆ?

ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಹಂಗಿಸುವುದು, ಸಚಿವ ದಿನೇಶ್‌ ಗುಂಡೂರಾವ್ ಅವರ ಮನೆಯಲ್ಲೇ ‘ಅರ್ಧ ಪಾಕಿಸ್ತಾನ ಇದೆ’ ಎಂದು ಕಿಚಾಯಿಸುವುದು, ಕಲಬುರಗಿಯ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದು ಟೀಕಿಸುವುದು ನಡೆಯುತ್ತಲೇ ಇದೆ. ನಮ್ಮ ಜೊತೆಗೇ ಇರುವ ಒಂದು ಸಮುದಾಯವನ್ನು ಇಷ್ಟೊಂದು ಹೀನಾಯವಾಗಿ ಅವಹೇಳನ ಮಾಡಲಾಗುತ್ತಿದ್ದರೂ ನೋಡಿಯೂ ನೋಡದಂತೆ ಇರುವ, ಕೇಳಿಯೂ ಕೇಳದಂತೆ ಇರುವ ವ್ಯವಸ್ಥೆಗೆ ಏನನ್ನಬೇಕು?

ಈಗ ಆಡಳಿತ ನಡೆಸುತ್ತಿರುವ ಪಕ್ಷ ಮುಂದೆ ಸೋಲಬಹುದು. ಪ್ರಧಾನಿ ಬದಲಾಗಬಹುದು. ಆದರೆ ನಮ್ಮ ನಡುವೆಯೇ ಕಟ್ಟಿದ ಈ ಗೋಡೆಗಳನ್ನು ಕೆಡಹುವುದಕ್ಕೆ ಇನ್ನೆಷ್ಟು ಶತಮಾನಗಳು ಬೇಕಾಗಬಹುದು? ಸ್ಪಂದನೆಯೇ ಇಲ್ಲದ ಸಮಾಜ ಸುಧಾರಣೆಯಾಗುವುದು ಯಾವಾಗ? ಮೈ ಕೊಳಕಾದರೆ ತೊಳೆದುಕೊಳ್ಳಬಹುದು, ಮನ ಕೊಳಕಾದರೆ ದುರಂತ ಖಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.