ADVERTISEMENT

ಅನುಸಂಧಾನ ಅಂಕಣ: ರಟ್ಟಾದ ‘ಒಳ’ಗುಟ್ಟು!

ರವೀಂದ್ರ ಭಟ್ಟ
Published 27 ಜೂನ್ 2025, 23:55 IST
Last Updated 27 ಜೂನ್ 2025, 23:55 IST
   

ಮಹಾಭಾರತದ್ದು ಎನ್ನಲಾದ ಕತೆಯೊಂದು ಹೀಗಿದೆ. ಕುರುಕ್ಷೇತ್ರ ಯುದ್ಧ ಮುಗಿದು ಧರ್ಮರಾಜ ಹಸ್ತಿನಾವತಿಯ ರಾಜನಾಗಿದ್ದ. ಒಂದು ದಿನ ವ್ಯಕ್ತಿಯೊಬ್ಬ ಕೃಷ್ಣನಲ್ಲಿಗೆ ಬಂದು ‘ನಾನು ಯಾವಾಗ ಬೇಡಿಕೊಂಡರೂ ನೀರು ಮತ್ತು ಆಹಾರ ಸಿಗುವಂತೆ ವರ ಕೊಡು’ ಎಂದು ಬೇಡಿಕೊಂಡ. ಅದಕ್ಕೆ ಕೃಷ್ಣ ತಥಾಸ್ತು ಎಂದ.

ಆಮೇಲೆ ಕೆಲ ದಿನಗಳ ನಂತರ ವರ ಪಡೆದ ವ್ಯಕ್ತಿ ಒಂದು ಮರುಭೂಮಿಯಲ್ಲಿ ಸಾಗುತ್ತಿದ್ದ. ಆತನಿಗೆ ತುಂಬಾ ಬಾಯಾರಿಕೆ ಆಯಿತು. ಎಲ್ಲಿ ಹುಡುಕಿದರೂ ಒಂದು ಕುಡುತೆ ನೀರು ಸಿಗಲಿಲ್ಲ. ಆಗ ಆತ ಕೃಷ್ಣನನ್ನು ನೆನೆದು ನೀರು ಕೊಡಲು ಬೇಡಿಕೊಂಡ. ತಕ್ಷಣವೇ ದಲಿತನೊಬ್ಬ ಬಂದು ‘ನಿಮ್ಮನ್ನು ನೋಡಿದರೆ ತುಂಬಾ ಬಳಲಿರುವಂತೆ ಕಾಣುತ್ತೀರಿ. ಸ್ವಲ್ಪ ನೀರು ಕುಡಿದು ಸುಧಾರಿಸಿಕೊಳ್ಳಿ’ ಎಂದು ನೀರು ಕೊಡಲು ಮುಂದಾದ. ದಲಿತನ ಕೈಯಲ್ಲಿರುವ ನೀರನ್ನು ಕುಡಿಯಲು ಈತ ನಿರಾಕರಿಸಿದ. ‘ಇಲ್ಲ ನನಗೇನೂ ಬಾಯಾರಿಕೆ ಇಲ್ಲ. ನೀರು ಬೇಡ’ ಎಂದು ಹೇಳಿ ಆತನನ್ನು ಅಲ್ಲಿಂದ ಕಳಿಸಿದ.

ಅಲ್ಲಿಂದ ಸೀದಾ ಕೃಷ್ಣನ ಬಳಿಗೆ ಹೋಗಿ ತನಗೆ ನೀರು ಕೊಡದೇ ಇರುವುದಕ್ಕೆ ಆಕ್ಷೇಪಿಸಿದ. ಅದಕ್ಕೆ ಕೃಷ್ಣ ‘ನಿನಗೆ ನೀರು ಕೊಡುವಂತೆ ಇಂದ್ರನಿಗೆ ಹೇಳಿದ್ದೆ. ಆತ ನಿನಗೆ ನೀರೇನು ಅಮೃತವನ್ನೇ ಕೊಡುತ್ತೇನೆ ಎಂದು ಆ ದಲಿತನ ಕೈಯಲ್ಲಿ ಅಮೃತವನ್ನೇ ಕಳಿಸಿದ್ದ. ಆದರೆ ನೀನು ಅದನ್ನು ಸ್ವೀಕರಿಸಲೇ ಇಲ್ಲವಲ್ಲ’ ಎಂದ. ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್ ದಾಸ್‌ ಆಯೋಗವು ನಡೆಸುತ್ತಿರುವ ಸಮೀಕ್ಷೆ ಸಂದರ್ಭದಲ್ಲಿ ರಟ್ಟಾಗಿರುವ ‌ಮೇಲುಜಾತಿಗಳ ಗುಟ್ಟುಗಳು ಈ ಕತೆಯನ್ನು ನೆನಪಿಸಿವೆ. ದಲಿತರು ಅಮೃತವನ್ನೇ ಕೊಟ್ಟರೂ ಸ್ವೀಕರಿಸದ ಮನಃಸ್ಥಿತಿಯನ್ನು ಬದಲಾಯಿಸಲು ಬರುವ ಭಗೀರಥನಿಗೆ ಇಡೀ ಸಮಾಜ ಕಾಯುತ್ತಿರುವಂತೆ ತೋರುತ್ತಿದೆ.

ADVERTISEMENT

ಒಳಮೀಸಲಾತಿ ಸಮೀಕ್ಷೆ ಸಂದರ್ಭದಲ್ಲಿ ಪರಿಶಿಷ್ಟರು ಎದುರಿಸುತ್ತಿರುವ ಸಂಕಷ್ಟಗಳನ್ನು ಒಮ್ಮೆ ನೋಡಿಕೊಂಡು ಬಂದು ಬಿಡೋಣ. ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿ ಸಮೀಕ್ಷೆಗೆಂದು ಗಣತಿದಾರರು ಹೋದಾಗ ಮನೆಯಲ್ಲಿ ಯಾವುದೇ ವಿವರಗಳನ್ನು ನೀಡದ ವ್ಯಕ್ತಿಯೊಬ್ಬರು ಮನೆಯಿಂದ ಬಹುದೂರ ಬಂದು ಗಣತಿದಾರರನ್ನು ನಿಲ್ಲಿಸಿ, ‘ಮೇಡಂ, ನಾನು ಬ್ಯಾಂಕ್‌ ನೌಕರ. ನಾವು ಮಾದಿಗ ಸಮುದಾಯಕ್ಕೆ ಸೇರಿದವರು. ನಮ್ಮ ಮಗುವಿನ ಶಾಲೆಗೆ ಹತ್ತಿರ ಎಂದು ಬಸವನಗುಡಿಯಲ್ಲೇ ಮನೆ ಮಾಡಿದ್ದೇವೆ. ನಾವು ಮಾದಿಗರು ಎನ್ನುವುದು ನಮ್ಮ ಮನೆಯ ಮಾಲೀಕರಿಗೆ ಗೊತ್ತಿಲ್ಲ. ಅದಕ್ಕಾಗಿ ನೀವು ನಮ್ಮ ಮನೆಗೆ ಬಂದಾಗ ಅದನ್ನು ಹೇಳಲು ಸಾಧ್ಯವಾಗಲಿಲ್ಲ. ಪ್ರಭಾವಿ ಜಾತಿಯೊಂದರ ಹೆಸರು ಹೇಳಿಕೊಂಡು ಮಧ್ಯವರ್ತಿ ಮೂಲಕ ಮನೆಯನ್ನು ಬಾಡಿಗೆಗೆ ಪಡೆದಿದ್ದೇವೆ. ನಾವು ಮಾದಿಗರು ಎಂದು ಗೊತ್ತಾದರೆ ಮನೆಯ ಮಾಲೀಕರು ನಮಗೆ ಮನೆಯಲ್ಲಿ ಇರಲು ಬಿಡುವುದಿಲ್ಲ. ಮಾದಿಗರು ಎಂದರೆ ನಾವಿರುವ ಈ ಪ್ರದೇಶದಲ್ಲಿ ಮನೆಯನ್ನು ಬಾಡಿಗೆಗೆ ಕೊಡುವುದಿಲ್ಲ ಎಂಬ ಕಾರಣಕ್ಕೆ ಸುಳ್ಳು ಹೇಳಿ ಬಾಡಿಗೆ ಮನೆಯಲ್ಲಿದ್ದೇವೆ. ಈಗ ನಮ್ಮ ವಿವರಗಳನ್ನು ತೆಗೆದುಕೊಳ್ಳಿ’ ಎಂದು ದುಂಬಾಲು ಬಿದ್ದರು.

ಜಯನಗರದ ಬ್ಯಾಂಕ್ ನೌಕರರ ಬಡಾವಣೆಯಲ್ಲಿಯೂ ಇಂತಹದೇ ಘಟನೆಗಳು ನಡೆದಿವೆ. ಮನೆಯ ಮಾಲೀಕರೇ ಹೊರಬಂದು, ‘ಇಲ್ಲಿ ಯಾರೂ ಪರಿಶಿಷ್ಟರಿಲ್ಲ’ ಎಂದು ಗಣತಿದಾರರಿಗೆ ಪ್ರವೇಶವನ್ನೇ ನೀಡಲಿಲ್ಲ. ಕೆಲವರು ಅಪಾರ್ಟ್‌ಮೆಂಟ್‌ಗಳ ಪ್ರವೇಶಕ್ಕೂ ಅವಕಾಶ ನೀಡಲಿಲ್ಲ. ಗಣತಿದಾರರು ಆ ಬಡಾವಣೆಯನ್ನು ದಾಟಿ ಹೊರಬಂದ ನಂತರ ಕೆಲವರು ಬಂದು ‘ಬ್ಯಾಂಕಿಂಗ್‌ ವ್ಯವಹಾರದಲ್ಲಿ ಪ್ರಬಲವಾಗಿರುವ ಸಮುದಾಯದವರು ಕಟ್ಟಿಕೊಂಡಿರುವ ಬಡಾವಣೆ. ಇಲ್ಲಿ ದಲಿತರಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ. ಅದಕ್ಕೆ ನಾವು ಪ್ರಬಲ ಜಾತಿಯೊಂದರ ಹೆಸರು ಹೇಳಿಕೊಂಡು ಮನೆ ಭೋಗ್ಯಕ್ಕೆ ಪಡೆದುಕೊಂಡಿದ್ದೇವೆ. ಇಲ್ಲಿ ಸಾಕಷ್ಟು ದಲಿತ ಕುಟುಂಬಗಳಿವೆ. ನಾವು ಮಾಹಿತಿ ನೀಡಲು ಏನು ಮಾಡಬೇಕು’ ಎಂದು ವಿಚಾರಿಸಿದ ಘಟನೆಯೂ ನಡೆಯಿತು.

ಇದು ಬೆಂಗಳೂರು ಮಹಾನಗರದ ಕತೆ ಮಾತ್ರ ಅಲ್ಲ. ರಾಜ್ಯದ ಬಹುತೇಕ ನಗರಗಳಲ್ಲಿ ದಲಿತರಿಗೆ ಮನೆ ಬಾಡಿಗೆಗೆ ಸಿಗುವುದು ಕಷ್ಟ. ಇದೇ ವಿಚಾರವಾಗಿ ಯಾದಗಿರಿಯಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ ಕೂಡಾ ನಡೆಯಿತು. ಸಮೀಕ್ಷೆ ಸಂದರ್ಭದಲ್ಲಿ ನಿಜವಾದ ಜಾತಿ ಬಹಿರಂಗವಾಗಿದ್ದರಿಂದ ಕೆಲವರನ್ನು ಮನೆ ಖಾಲಿ ಮಾಡಿಸಿದ ಘಟನೆಗಳೂ ಬೆಂಗಳೂರಿನಲ್ಲಿ ನಡೆದಿವೆ.

ಜಾತಿ ತಿಳಿಯುವವರೆಗೆ ಅನ್ಯೋನ್ಯವಾಗಿದ್ದ ಜನರು ಜಾತಿ ತಿಳಿದ ನಂತರ ಪರಸ್ಪರ ದೂರವಾದ ಘಟನೆಗಳೂ ನಡೆದಿವೆ. ದಲಿತರಿಗೆ ಮನೆ ಕೊಡುವುದಿಲ್ಲ. ಮುಸ್ಲಿಮರಿಗೆ ಮನೆ ಕೊಡುವುದಿಲ್ಲ. ಮಾಂಸಾಹಾರಿಗಳಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ ಎನ್ನುವುದು ನಗರ ಪ್ರದೇಶಗಳಲ್ಲಿ ಮಾಮೂಲಿ ಎನ್ನುವಂತಾಗಿದೆ. ಒಳಮೀಸಲಾತಿ ಸಮೀಕ್ಷೆ ಸಂದರ್ಭದಲ್ಲಿ ಇಂತಹ ವಿಷಯಗಳು ಹೊರಬಂದಾಗ ಸುಳ್ಳು ಜಾತಿ ಹೇಳಿಕೊಂಡು ಮನೆ ಬಾಡಿಗೆಗೆ ಪಡೆದಿರುವ ಗುಟ್ಟು ರಟ್ಟಾಯಿತು ಎಂದೇ ನಾವು ಭಾವಿಸುತ್ತೇವೆ.

ಆದರೆ, ನಿಜವಾಗಿ ರಟ್ಟಾಗಿದ್ದು ಮನುಷ್ಯ ಸ್ವಭಾವ. ನಮ್ಮಲ್ಲಿ, ನಮ್ಮ ಸಮಾಜದ ಆಂತರ್ಯದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ ಎನ್ನುವುದು ರಟ್ಟಾಗಿದೆಯಷ್ಟೆ. ಮಾಂಸಾಹಾರಿಗಳಿಗೆ ಮನೆ ಕೊಡುವುದಿಲ್ಲ. ಅವರು ಮನೆ ಗಲೀಜು ಮಾಡುತ್ತಾರೆ. ವಾಸನೆ ಸಹಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದೆಲ್ಲ ಬರೀ ಮೇಲುನೋಟದ ಮಾತುಗಳು ಅಷ್ಟೆ. ಆಂತರ್ಯದಲ್ಲಿ ಇರುವುದು ಅಸ್ಪೃಶ್ಯತೆಯ ಭಾವನೆಯೇ ಆಗಿದೆ.

ನಾವು ಚಂದ್ರಯಾನ ಮಾಡಿದ್ದೇವೆಂದು ಬೀಗುತ್ತೇವೆ. ಮಂಗಳನ ಅಂಗಳಕ್ಕೆ ಹೋಗುವುದಕ್ಕೆ ತಯಾರಿ ನಡೆಸಿದ್ದೇವೆ. ಇತ್ತೀಚೆಗೆ ಶುಭಾಂಶು ಶುಕ್ಲಾ ಅಂತರಿಕ್ಷಕ್ಕೆ ಹಾರಿದ್ದಾರೆ. ವೈಜ್ಞಾನಿಕ ಮನೋಭಾವನೆ ಬೆಳೆದಿದೆ ಎಂದು ಖುಷಿಪಡುತ್ತೇವೆ. ನಮ್ಮ ಮಕ್ಕಳು ಶಿಕ್ಷಣ ರಂಗದಲ್ಲಿ ಭಾರಿ ಸಾಧನೆ ಮಾಡಿದ್ದಾರೆ ಎಂದು ಬೆನ್ನುತಟ್ಟುತ್ತೇವೆ. ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಎದೆಯುಬ್ಬಿಸಿ ಹೇಳುತ್ತೇವೆ. ದಲಿತರಿಗೆ ಸಮಾನ ಅವಕಾಶ ಕಲ್ಪಿಸಿದ್ದೇವೆ ಎಂದು ಪ್ರಚಾರ ಮಾಡುತ್ತೇವೆ. ಆದರೆ ಎದೆಯ ಗೂಡಿನೊಳಗೆ ಇನ್ನೂ ಅಸ್ಪೃಶ್ಯತೆಯ ಭಾವ ಹಾಗೆಯೇ ಇದೆ ಎನ್ನುವ ಸತ್ಯ ಆಗಾಗ ಹೊರಗೆ ಬರುತ್ತಲೇ ಇರುತ್ತದೆ.

ಮಾಂಸ ತಿನ್ನುವವರು ಕೀಳು. ಸಸ್ಯಾಹಾರಿಗಳು ಶ್ರೇಷ್ಠ ಎನ್ನುವ ವ್ಯಸನ ನಮ್ಮನ್ನು ಬಿಟ್ಟು ತೊಲಗಿಯೇ ಇಲ್ಲ. ಮನುಷ್ಯರನ್ನು, ಮನುಷ್ಯತ್ವವನ್ನು ತಿನ್ನುವವರಿಗಿಂತ ಮಾಂಸಾಹಾರಿಗಳು ಮೇಲು ಎನ್ನುವ ಸತ್ಯ ನಮ್ಮ ಅರಿವಿಗೆ ಬಂದೇ ಇಲ್ಲ. ಸತ್ಯವನ್ನು ಒಪ್ಪಿಕೊಳ್ಳುವ ಸಾಹಸವನ್ನೂ ನಾವು ಮಾಡುವುದೇ ಇಲ್ಲ.

ಕೋವಿಡ್ ಕಾಲದಲ್ಲಿಯೂ ಹೀಗೆಯೇ ಆಯಿತು. ಭೌತಿಕ ಅಂತರವನ್ನು ಕಾಪಾಡಿಕೊಳ್ಳಿ ಎಂಬ ಸಂದೇಶ ಬಂದ ತಕ್ಷಣ ಕೆಲವು ಮನಸ್ಸುಗಳು ‘ನಾವು ಹೇಳಿಲ್ವಾ, ಕಂಡಕಂಡವರನ್ನೆಲ್ಲಾ ಮುಟ್ಟಿಸಿಕೊಳ್ಳಬಾರದು ಎಂದು ನಾವು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದರೂ ನೀವು ಕೇಳಲಿಲ್ಲ. ಈಗ ನೋಡಿ ಏನಾಯ್ತು. ಪ್ರಕೃತಿಯೇ ನಮ್ಮ ಮಾತನ್ನು ಒಪ್ಪುವಂತೆ ಮಾಡಿದೆ’ ಎಂದು ಹೇಳಿಕೊಂಡು ತಿರುಗಾಡಿದ್ದರು.

ವೈರಾಣು ಕೊಂಡಿ ತಪ್ಪಿಸಲು ಕೈಗೊಂಡ ಕ್ರಮವನ್ನು ಅಸ್ಪೃಶ್ಯತೆ ಸಮರ್ಥನೆಗೆ ಬಳಸಿಕೊಳ್ಳುವ ಹೀನ ಮನಃಸ್ಥಿತಿಯನ್ನೂ ಕೆಲವರು ಪ್ರದರ್ಶಿಸಿದ್ದರು. ನಮ್ಮದು ತೋರಿಕೆಗೆ ಮುನ್ನೋಟ. ನಿಜವಾಗಿ ನಮ್ಮದು ಹಿಮ್ಮುಖ ಚಲನೆ. ಒಂದು ಹೆಜ್ಜೆ ಮುಂದೆ ಇಡುತ್ತೇವೆ. ಆದರೆ, ನಾಲ್ಕು ಹೆಜ್ಜೆ ಹಿಂದಕ್ಕೆ ಜಾರಿರುತ್ತೇವೆ. ನಾಗರಿಕತೆಯ ಸೋಗು. ಅನಾಗರಿಕ ಮನಸ್ಸು. ಮಹಾತ್ಮರ ಮಾತುಗಳಿಗೆ ನಮ್ಮ ತಲೆ ತೂಗುತ್ತದೆ. ಆದರೆ ಮನೆಗೆ ಬಂದ ತಕ್ಷಣ ನಾಯಿ ಬಾಲ ಡೊಂಕು.

ಕವಿ ಸಿದ್ಧಲಿಂಗಯ್ಯ ಅವರು ಅಂಬೇಡ್ಕರ್ ಬಗ್ಗೆ ಚೆಂದದ ಕತೆ ಹೇಳುತ್ತಿದ್ದರು. ಆ ಕತೆ ನಿಜವಾದದ್ದೇ ಎಂದು ಕೇಳಿದರೆ ಉತ್ತರ ಗೊತ್ತಿಲ್ಲ. ಆದರೆ ಕತೆಯ ಸಂದೇಶ ಇದೆಯಲ್ಲ, ಅದು ಮಹತ್ವದ್ದು. ಅವರು ಹೇಳುತ್ತಿದ್ದ ಕತೆ ಹೀಗಿದೆ:

ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಬ್ರಿಟಿಷ್ ಪತ್ರಕರ್ತನೊಬ್ಬ ಭಾರತಕ್ಕೆ ಬಂದನಂತೆ. ಭಾರತದಲ್ಲಿ ಪ್ರಜಾಪ್ರಭುತ್ವ ಹೇಗೆ ನಡೆಯುತ್ತಿದೆ ಎನ್ನುವುದನ್ನು ಅಧ್ಯಯನ ಮಾಡುವುದು ಆತನ ಪ್ರವಾಸದ ಉದ್ದೇಶ. ಆತ ಮೊದಲು ಮಹಾತ್ಮ ಗಾಂಧಿ ಅವರ ಮನೆಗೆ ಹೋದನಂತೆ. ಆಗ ಅವರು ನಿದ್ರೆಯಲ್ಲಿದ್ದರಂತೆ. ಎಬ್ಬಿಸುವುದು ಬೇಡ ಎಂದು ಆತ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಮನೆಗೆ ಹೋದನಂತೆ. ಅವರು ಆಗ ಮಲಗಿದ್ದರಂತೆ. ಅಲ್ಲಿಂದ ಹೊರಟು ಗೃಹ ಸಚಿವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಮನೆಗೆ ಹೋದನಂತೆ. ಅವರೂ ನಿದ್ರೆಯಲ್ಲಿದ್ದರಂತೆ. ಇಲ್ಲೂ ತನ್ನ ಕೆಲಸ ಆಗುವುದಿಲ್ಲ ಎಂದು ಮಧ್ಯರಾತ್ರಿಯ ವೇಳೆಗೆ ಅಂಬೇಡ್ಕರ್ ಅವರ ಮನೆಗೆ ಹೋದನಂತೆ. ಆಗ ಅಂಬೇಡ್ಕರ್ ಅವರು ಯಾವುದೋ
ಪುಸ್ತಕವನ್ನು ಓದುತ್ತಾ, ಟಿಪ್ಪಣಿ ಮಾಡಿಕೊಳ್ಳುತ್ತಾ ಕುಳಿತಿದ್ದರಂತೆ.

ಅಂಬೇಡ್ಕರ್ ಅವರಿಗೆ ಪತ್ರಕರ್ತ ‘ನಾನು ಗಾಂಧಿ, ನೆಹರೂ, ಪಟೇಲ್ ಅವರ ಮನೆಗಳಿಗೆ ಹೋಗಿದ್ದೆ. ಅವರೆಲ್ಲಾ ನಿದ್ದೆಯಲ್ಲಿದ್ದರು. ನೀವು ಮಾತ್ರ ಇನ್ನೂ ಎಚ್ಚರವಾಗಿದ್ದು ಏನೋ ಟಿಪ್ಪಣಿ ಮಾಡಿಕೊಳ್ಳುತ್ತಾ ಇದ್ದೀರಲ್ಲ. ಯಾಕೆ?’ ಎಂದು ಕೇಳಿದನಂತೆ. ಅದಕ್ಕೆ ಅಂಬೇಡ್ಕರ್ ‘ಅವರ ಸಮಾಜಗಳೆಲ್ಲಾ ಎಚ್ಚರವಾಗಿವೆ. ನನ್ನ ಸಮಾಜ ಇನ್ನೂ ನಿದ್ದೆಯಲ್ಲಿ ಇರುವುದರಿಂದ ನಾನು ಮಧ್ಯರಾತ್ರಿಯೂ ಎಚ್ಚರವಾಗಿದ್ದು ಟಿಪ್ಪಣಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ನನ್ನ ಸಮಾಜವನ್ನು ಎಚ್ಚರಿಸುವುದು ನನ್ನ ಕರ್ತವ್ಯ’ ಎಂದರಂತೆ.

ದಲಿತರು, ಹಿಂದುಳಿದ ವರ್ಗದವರನ್ನು ಎಚ್ಚರಿಸಲು ಒಬ್ಬ ಅಂಬೇಡ್ಕರ್ ಸಾಕಾಗಬಹುದು. ಆದರೆ ಮೇಲು ವರ್ಗದವರು ಎಂದು ಭ್ರಮಿಸಿಕೊಂಡವರನ್ನು ಎಚ್ಚರಿಸಲು ಅಂಬೇಡ್ಕರ್‌ ಅಂತಹ ಮಹನೀಯರು ನೂರು ಮಂದಿ ಬರಬೇಕೇನೋ ಎಂಬ ಅನುಮಾನ ಕಾಡುತ್ತದೆ. ಯಾಕೆಂದರೆ ನಾವು ಯಾವ ಮಹಾತ್ಮರ ಮಾತನ್ನೂ ಪಾಲಿಸಲಿಲ್ಲ. ಅದಕ್ಕೇ ಸಿದ್ಧೇಶ್ವರ ಸ್ವಾಮೀಜಿ, ‘ಜಗತ್ತಿನಲ್ಲಿ ಒಳ್ಳೆಯದ್ದನ್ನೆಲ್ಲಾ ಹೇಳಿ ಆಗಿದೆ. ಇನ್ನು ಹೇಳುವುದಕ್ಕೆ ಏನೂ ಉಳಿದಿಲ್ಲ. ಈಗ ಇರುವುದು ಪಾಲನೆಯಷ್ಟೆ’ ಎಂದು ಹೇಳಿದ್ದರು. ಪಾಲನೆಗೆ ಮನಸ್ಸು ಮಾಡಬೇಕಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.