ADVERTISEMENT

ಬೆರಗಿನ ಬೆಳಕು: ದೇವತೆಗೆ ಬೇಡವಾದ ಪ್ರಾಣಿಬಲಿ

ಡಾ. ಗುರುರಾಜ ಕರಜಗಿ
Published 23 ಡಿಸೆಂಬರ್ 2020, 21:44 IST
Last Updated 23 ಡಿಸೆಂಬರ್ 2020, 21:44 IST
   

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ವೃಕ್ಷದೇವತೆಯಾಗಿದ್ದ. ಬೃಹತ್ ಆಲದಮರವೇ ಆತನ ವಾಸಸ್ಥಾನವಾಗಿತ್ತು. ಆಗೆಲ್ಲ ತುಂಬ ಜನ ಬಂದು ಮರಕ್ಕೆ ಪೂಜೆ ಮಾಡಿ, ಹರಕೆಯನ್ನು ಹೊತ್ತುಕೊಳ್ಳುತ್ತಿದ್ದರು.

ಒಂದು ಬಾರಿ ನಗರದ ಶ್ರೇಷ್ಠಿಯೊಬ್ಬ ಈ ಮರದ ಬಳಗೆ ಬಂದ. ಅಲ್ಲಿ ಜನ ಬಂದು ಪೂಜಿಸುವುದನ್ನು, ಅದರ ಕೆಳಗೆ ಕುಳಿತು ಧ್ಯಾನ ಮಾಡುವುದನ್ನು ಕಂಡ. ಈ ಮರದಲ್ಲಿ ದೇವತೆ ಇರಲೇಬೇಕೆಂಬ ನಿರ್ಧಾರಕ್ಕೆ ಬಂದ. ಇತ್ತೀಚಿಗೆ ಅವನಿಗೆ ವ್ಯಾಪಾರದಲ್ಲಿ ನಷ್ಟವಾಗುತ್ತಿತ್ತು. ಮನೆಯಲ್ಲೂ ಹತ್ತಾರು ತಕರಾರುಗಳು. ಅವುಗಳನ್ನು ಯಾರ ಮುಂದೆಯೂ ಹೇಳುವಂತಿಲ್ಲ. ಆತ ತೀರ್ಮಾನ ಮಾಡಿದ.

ಈ ವೃಕ್ಷದೇವತೆಯನ್ನು ಪೂಜಿಸಿ, ಹರಕೆ ಹೊತ್ತರೆ ತನ್ನ ಕಷ್ಟಗಳೆಲ್ಲ ನಿವಾರಣೆಯಾಗುತ್ತವೆ. ಮರುದಿನ ಪರಿವಾರದೊಂದಿಗೆ ಬಂದು ವಾರದ ಪೂಜೆ ಮಾಡಿದ. ತನ್ನ ಅಪೇಕ್ಷೆಗಳು ಪೂರೈಸಿದರೆ ತಾನು ವೃಕ್ಷಕ್ಕೆ ಪ್ರಾಣಿಬಲಿ ಕೊಡುವುದಾಗಿ ಹರಕೆ ಹೊತ್ತ. ವೃಕ್ಷದೇವತೆಯ ಕರುಣೆಯೋ, ದೇವರ ದಯೆಯೋ, ಮತ್ತಾವ ಕಾರಣವೋ ಆತನ ಕಷ್ಟಗಳೆಲ್ಲ ಪರಿಹಾರವಾದವು, ಮತ್ತೆ ವ್ಯಾಪಾರ ಚಿಗುರಿತು.

ADVERTISEMENT

ಈಗ ಅವನಿಗೆ ತನ್ನ ಹರಕೆಯನ್ನು ಪೂರೈಸುವ ಕರ್ತವ್ಯ. ಅದನ್ನು ಸಂಭ್ರಮದಿಂದ ಮಾಡಬೇಕೆಂದುಕೊಂಡು ಹತ್ತು ಕೋಣಗಳು, ನೂರು ಕುರಿಗಳು, ಅನೇಕ ಆಡುಗಳು, ಅನೇಕ ಕೋಳಿಗಳನ್ನು ತೆಗೆದುಕೊಂಡು ಮರದ ಬಳಿಗೆ ಹೋದ. ಅವನ ಜೊತೆಗೆ ಸಂತೋಷದಲ್ಲಿ ಭಾಗವಹಿಸಲು ನೂರಾರು ಜನ ಬಂದು ಅಲ್ಲಿ ಸೇರಿದರು. ಪ್ರಾಣಿಗಳನ್ನು ಕತ್ತರಿಸಲು ಹತ್ತು ಜನ ಕತ್ತಿಗಳನ್ನು ಹಿಡಿದು ಸಿದ್ಧವಾಗಿದ್ದರು. ಶ್ರೇಷ್ಠಿ ಪೂಜೆಗಳನ್ನೆಲ್ಲ ಪೂರೈಸಿದ. ಅವನ ಜೊತೆಗಾರರೆಲ್ಲ ಸೇರಿ ಬೆಂಕಿಯನ್ನು ಮಾಡಿದರು. ಪ್ರಾಣಿಗಳನ್ನು ಕೊಂದ ಮೇಲೆ ಅವುಗಳನ್ನು ಅಗ್ನಿಗೆ ಹಾಕಬೇಕಲ್ಲ.

ಆ ಸಮಯದಲ್ಲಿ ಮರದಲ್ಲಿ ವೃಕ್ಷದೇವತೆಯಾಗಿದ್ದ ಬೋಧಿಸತ್ವನಿಗೆ ಬಹಳ ದುಃಖವಾಯಿತು. ತನ್ನ ಹೆಸರಿನಲ್ಲಿ ಇಷ್ಟೊಂದು ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತವಲ್ಲ ಎಂದು ನೋವಿನಿಂದ ಶ್ರೇಷ್ಠಿಯ ಮುಂದೆ ಬಂದು ನಿಂತು ಮಾತನಾಡಿದ, ‘ಅಯ್ಯಾ ಶ್ರೇಷ್ಠಿ, ಈ ಪ್ರಾಣಿಗಳನ್ನೆಲ್ಲ ಯಾಕೆ ತಂದಿದ್ದೀಯಾ?’

‘ವೃಕ್ಷದೇವತೆ ನೀನು ನನಗೆ ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಪ್ರಾಣಬಲಿ ಕೊಡಲು ಹರಕೆ ಹೊತ್ತಿದ್ದೇನೆ. ಅದನ್ನು ಈಗ ತೀರಿಸಬೇಕು’.

‘ಪ್ರಾಣಿಗಳನ್ನು ಕೊಂದರೆ ನನಗೆ ಹೇಗೆ ತೃಪ್ತಿಯಾದೀತು?’

‘ಅದು ನನ್ನ ಹರಕೆಯಾಗಿತ್ತಲ್ಲ?’

‘ಅದು ನಿನ್ನ ಹರಕೆ, ನಿನ್ನ ಅಪೇಕ್ಷೆ, ನನ್ನದಲ್ಲ. ನಾನು ಮಾಂಸಭಕ್ಷಣೆ ಮಾಡುತ್ತೇನೆಂದು ಯಾರು ಹೇಳಿದರು? ನಾವು ದೇವತೆಗಳು ಏನನ್ನೂ ತಿನ್ನುವುದಿಲ್ಲ. ಅಷ್ಟೇ ಅಲ್ಲ, ನಾವು ಮಾಡಿದ ಕಾರ್ಯಕ್ಕೆ ಯಾವ ಪ್ರತಿಫಲವನ್ನೂ ಅಪೇಕ್ಷಿಸುವುದಿಲ್ಲ. ನೀನು ಪ್ರಾಣಿಗಳನ್ನು ಹಿಂಸಿಸಿ ಕೊಂದರೆ ಅವುಗಳ ಪಾಪ ತಟ್ಟಿ ಅನೇಕ ಯುಗಗಳವರೆಗೆ ರೌರವ ನರಕದಲ್ಲಿ ಶಿಕ್ಷೆ ಅನುಭವಿಸುತ್ತೀ. ಇನ್ನು ಮೇಲೆ ಯಾವ ದೇವತೆಗೂ ಪ್ರಾಣಿಬಲಿ ನೀಡಬೇಡ’ ಎಂದು ಎಚ್ಚರಿಕೆ ಕೊಟ್ಟಿತು ವೃಕ್ಷದೇವತೆ.

ಅಂದಿನಿಂದ ಬಹುಕಾಲ ಪ್ರಾಣಿಬಲಿ ನಿಂತು ಹೋಯಿತಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.