ADVERTISEMENT

ಬೆರಗಿನ ಬೆಳಕು ಅಂಕಣ: ಬೇಡಿಕೆ

ಡಾ. ಗುರುರಾಜ ಕರಜಗಿ
Published 19 ಜುಲೈ 2023, 1:14 IST
Last Updated 19 ಜುಲೈ 2023, 1:14 IST
ಬೆರಗಿನ ಬೆಳಕು- ಗುರುರಾಜ ಕರಜಗಿ
ಬೆರಗಿನ ಬೆಳಕು- ಗುರುರಾಜ ಕರಜಗಿ   

ಆರ ಕೈ ತುತ್ತಿಗಂ ನಿನ್ನ ಕಾಯಿಸದೆ ವಿಧಿ |
ಯಾರ ಭುಜಕಂ ನಿನ್ನ ಭಾರವಾಗಿಸದೆ ||
ಆರ ಸೆಲೆ ಸುಳಿವುಮಂಟದವೊಲಾಗಿಸಿ ನಿನ್ನ |
ಪಾರಗಾಣಿಸ ಬೇಡು – ಮಂಕುತಿಮ್ಮ || 930 ||

ಪದ-ಆರ್ಥ: ಆರ=ಯಾರ, ತುತ್ತಿಗಂ=ತುತ್ತಿಗೂ, ಭುಜಕಂ=ಭುಜಕ್ಕೂ, ಸುಳಿವುಮಂಟದವೊಲಾಗಿಸಿ=ಸುಳಿವುಮ್
(ಸುಳಿವು)+ಅಂಟದವೊಲ್(ಅಂಟದಂತೆ)+ಆಗಿಸಿ, ಸೆಲೆ=ಸೆಳೆತ, ಪಾರಗಾಣಿಸ=ದಂಡೆಗೆ ಸೇರಿಸು,ಮುಕ್ತಾಯಗೊಳಿಸು.


ವಾಚ್ಯಾರ್ಥ: ವಿಧಿ ನನ್ನನ್ನು ಮತ್ತೊಬ್ಬರ ಕೈತುತ್ತಿಗೆ ಕೈ ಚಾಚದಂತೆ, ಇನ್ನೊಬ್ಬರ ಭುಜಕ್ಕೆ ಭಾರವಾಗದಂತೆ, ಯಾರ ಸೆಳೆತಕ್ಕೆ ಸಿಲುಕದೆ, ಯಾವ ಮೋಹದ ಅಂಟು ತಾಗದ ಹಾಗೆ, ಜಗತ್ತಿನಿಂದ ತೆರಳುವುದು ಸಾಧ್ಯವಾಗುವಂತೆ ಬೇಡಿಕೋ.

ADVERTISEMENT


ವಿವರಣೆ: ಇದೊಂದು ಬಹುದೊಡ್ಡ ಪ್ರಾರ್ಥನೆ ಮನುಷ್ಯ ಮಾಡಬೇಕಾದದ್ದು. ಹೀಗೊಂದು ಪ್ರಾರ್ಥನೆ ಇದೆ:
ಅನಾಯಾಸೇನ ಮರಣಂ ವಿನಾದೈನ್ಯೇನ ಜೀವನಂ |
ದೇಹಿ ಮೇ ಕೃಪಯಾ ಶಂಭೋ ತ್ವಯಿ
ಭಕ್ತಿಮಚಂಚಂಲಾ ||
‘ಭಗವಂತಾ, ದೈನ್ಯವಿಲ್ಲದ ಜೀವನ, ಅನಾಯಾಸವಾದ ಸಾವು ಮತ್ತು ನಿನ್ನಲ್ಲಿ ಅಚಲವಾದ ಭಕ್ತಿಗಳನ್ನು ಕರುಣಿಸು’.


ಸಾಕು ಎನ್ನುವ ಭಾವ ಬರುವವರೆಗೆ ಮನಸ್ಸಿನಲ್ಲಿ ಉಳಿಯುವುದು ಕೇವಲ ಆತಂಕ, ತುಡಿತಗಳೇ. ಸಾಕು
ಎನ್ನಿಸಿದಾಗಲೇ ಮನಸ್ಸು ಹಗುರಾಗಿ ಆನಂದವನ್ನು ಪಡೆಯುವುದು. ಮರಣದಲ್ಲಿ ಸಾವಿನ ಅಂಗೀಕಾರ ಎಷ್ಟು
ಮುಖ್ಯವೋ ಅದೇ ರೀತಿ ಬದುಕಿನಲ್ಲಿ ಜೀವನದ ಅಂಗೀಕಾರ ಅಷ್ಟೇ ಮುಖ್ಯ. ಯಾವ ಯಾವುದೋ ಅಲ್ಪ ಸುಖಕ್ಕಾಗಿ ಮತ್ತೊಬ್ಬರ ಮುಂದೆ ಕೈ ಚಾಚಿ ನಿಲ್ಲುವುದು ದೈನ್ಯ. ದೀನತೆ ಮನುಷ್ಯನನ್ನು ಕುಗ್ಗಿಸಿ, ಅವನ ಆತ್ಮವಿಶ್ವಾಸವನ್ನು ಹೊಡೆದುಹಾಕತ್ತದೆ. ವಿಧಿ ನನ್ನನ್ನು ಇಂಥ ದೈನ್ಯಕ್ಕೆ ದೂಡದಿರಲಿ ಎಂಬುದು ಮೊದಲ ಪ್ರಾರ್ಥನೆ. ಎರಡನೆಯ ಪ್ರಾರ್ಥನೆ, ಯಾವ ಮೋಹದ ಅಂಟೂ, ಯಾರ ಸೆಳೆತವೂ ಇರದಂತೆ ಸುಲಭವಾಗಿ ಜೀವನದಿಂದ ಪಾರು ಮಾಡು ಎನ್ನುವುದು. ಮಹಾಮೃತ್ಯುಂಜಯ ಮಂತ್ರದ ಎರಡನೆಯ ಸಾಲು ಮನನೀಯವಾದದ್ದು.


“ಊರ್ವರೂಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್” ಇದರ ಅರ್ಥ, ಹೇಗೆ ಸೌತೇಕಾಯಿಯ (ಉರ್ವಾರು) ತೊಟ್ಟು ತನ್ನ ಬಳ್ಳಿಯೊಂದಿಗೆ ಬಹಳ ತೆಳುವಾಗಿ ಅಂಟಿಕೊಂಡಿರುತ್ತದೆಯೋ ಹಾಗೆ ಮೃತ್ಯುವಿನಿಂದ ಮುಕ್ತಿ ದೊರೆಯಲಿ. ಬಳ್ಳಿಯಲ್ಲಿ ಬೆಳೆಯುವ ಕುಂಬಳಕಾಯಿ, ಸೋರೆಕಾಯಿ, ಹೀರೇಕಾಯಿಗಳಿಗೂ ಮತ್ತು ಅದೇ ರೀತಿ ಬೆಳೆಯುವ ಸೌತೇಕಾಯಿಗಳಲ್ಲಿ ಸೂಕ್ಷ್ಮ ವ್ಯತ್ಯಾಸವಿದೆ. ಸೌತೇಕಾಯಿಯನ್ನು ಬಿಡಿಸುವಾಗ ತೊಟ್ಟು ಬಳ್ಳಿಯಲ್ಲೇ ಉಳಿಯುತ್ತದೆ. ಆದರೆ ಉಳಿದ ಕಾಯಿಗಳು ತೊಟ್ಟಿನ ಜೊತೆಗೇ ಬರುತ್ತವೆ. ಸೌತೇಕಾಯಿಯ ತೊಟ್ಟಿನ ಹಾಗೆ ನಮ್ಮ ಪ್ರಪಂಚದ ಸಂಬಂಧಗಳಿರಬೇಕು. ಆಗ ಬಿಡುಗಡೆ ಸುಲಭವಾಗುತ್ತದೆ. ದೈನ್ಯವಿಲ್ಲದ, ಯಾರಿಗೂ ಭಾರವಾಗದ ಬದುಕು, ಯಾವ ಸೆಳೆತ, ಮೋಹಗಳಿಲ್ಲದೆ ಬದುಕನ್ನು ಹಗುರವಾಗಿ ತ್ಯಜಿಸುವ ಸಾಧ್ಯತೆ. ಇವೇ ನಮ್ಮ ಪ್ರಾರ್ಥನೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.