ADVERTISEMENT

ಆತ್ಮದ್ರೋಹ ಮತ್ತು ಅಪಚಾರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 1:20 IST
Last Updated 25 ಜುಲೈ 2019, 1:20 IST
   

ಬ್ರಹ್ಮದತ್ತ ವಾರಣಾಸಿಯನ್ನು ಅಳುತ್ತಿದ್ದಾಗ ಬೋಧಿಸತ್ವ ಒಂದು ಪಾರಿವಾಳವಾಗಿ ಜನ್ಮವೆತ್ತಿದ್ದ. ಆತ ಅನೇಕಾನೇಕ ಪಾರಿವಾಳಗಳಿಗೆ ನಾಯಕನಾಗಿ ಹಿಮಾಲಯದ ಗುಹೆಗಳೊಳಗೆ ವಾಸವಾಗಿದ್ದ. ಈ ಗುಹೆಗಳ ಪಕ್ಕದಲ್ಲಿ ಒಂದು ಪುಟ್ಟ ಹಳ್ಳಿ. ಹಳ್ಳಿಯ ಅಂಚಿನಲ್ಲಿಯೇ ಒಬ್ಬ ಸಾತ್ವಿಕ ತಪಸ್ವಿ ಪರ್ಣಕುಟಿಯನ್ನು ಕಟ್ಟಿಕೊಂಡು ಇರುತ್ತಿದ್ದ.ಆತ ಸದಾಕಾಲ ತಪಸ್ಸು ಮಾಡುತ್ತ ಪ್ರತಿದಿನ ಸಂಜೆ ಹಳ್ಳಿಯ ಜನರಿಗೆ ಧರ್ಮಬೋಧೆ ಮಾಡುತ್ತಿದ್ದ. ಆಗ ಬೋಧಿ ಸತ್ವನೊಡನೆ ಅನೇಕ ಪಾರಿವಾಳಗಳು ಅಲ್ಲಿಗೆ ಹೋಗಿ ಅವನ ಪ್ರವಚನಗಳನ್ನು ಕೇಳುತ್ತಿದ್ದವು. ಅಷ್ಟಲ್ಲದೆ ಹಗಲು ಕೂಡ ಪಾರಿವಾಳಗಳು ಅವನ ಆಶ್ರಮದ ಸುತ್ತಲೇ ಹಾರಾಡಿಕೊಂಡಿರುತ್ತಿದ್ದವು. ತಪಸ್ವಿಯ ಬಗ್ಗೆ ಅಷ್ಟು ಪ್ರೀತಿ ಅವುಗಳಿಗೆ.

ನಾಲ್ಕಾರು ವರ್ಷಗಳ ನಂತರ ತಪಸ್ವಿ ಬೇರೆಲ್ಲಿಗೋ ಹೊರಟು ಹೋದ. ಅದೇ ಆಶ್ರಮಕ್ಕೆ ಮತ್ತೊಬ್ಬ ಸನ್ಯಾಸಿ ಬಂದು ಸೇರಿದ. ಅವನು ಕಪಟ ಸನ್ಯಾಸಿ. ಅವನ ಒಳಗುಟ್ಟನ್ನು ತಿಳಿಯದ ಪಾರಿವಾರಗಳು ಅವನಿಗೂ ನಮಸ್ಕಾರ ಮಾಡಿ ಅಲ್ಲಿಯೇ ಹಾರಾಡಿಕೊಂಡಿದ್ದವು. ಬೋಧಿಸತ್ವನೂ ಅಲ್ಲಿಯೇ ಇದ್ದು ನಂತರ ಪರ್ವತದಲ್ಲಿ ಸುತ್ತಾಡಿ ಆಹಾರ ಪಡೆದು ರಾತ್ರಿ ತನ್ನ ಗುಹೆಯನ್ನು ಸೇರುತ್ತಿದ್ದ.

ಈ ಕಪಟ ಸನ್ಯಾಸಿಗೆ ಬಾಯಿ ಚಪಲ. ಒಂದು ಬಾರಿ ಹಳ್ಳಿಯ ಮುಗ್ಧ ಜನ ಇವನ ವೇಷಕ್ಕೆ ಮರುಳಾಗಿ ರುಚಿಯಾದ ಪಾರಿವಾಳದ ಮಾಂಸದ ಅಡುಗೆಯನ್ನು ಮಾಡಿಕೊಟ್ಟರು. ಅವನಿಗೆ ಅದು ತುಂಬ ಇಷ್ಟವಾಯಿತು. ಅಂಥದ್ದನ್ನೇ ಮೇಲಿಂದ ಮೇಲೆ ನೀಡಲು ಅವರಿಗೆ ಸೂಚನೆ ನೀಡತೊಡಗಿದ. ಸನ್ಯಾಸಿಗಳು ಅಪೇಕ್ಷೆ ಮಾಡತೊಡಗಿದಾಗ ಜನ ದೂರ ಹೋಗಲು ಪ್ರಾರಂಭಿಸುತ್ತಾರೆ. ಇವನಿಗೆ ಅದು ತಿಳಿಯಿತು. ಅವನು ಯೋಚಿಸಿದ, ಹೇಗಿದ್ದರೂ ನೂರಾರು ಪಾರಿವಾಳಗಳು ತನ್ನ ಆಶ್ರಮದ ಸುತ್ತಮುತ್ತಲೇ ಹಾರಾಡಿಕೊಂಡಿರುತ್ತವೆ. ದಿನಕ್ಕೊಂದು ಪಾರಿವಾಳವನ್ನು ಹೊಡೆದು ತಿಂದರೂ ಅವುಗಳಿಗೆ ತಿಳಿಯುವುದೇ ಇಲ್ಲ. ಹೀಗಿರುವಾಗ ಹಳ್ಳಿಯ ಜನರನ್ನೇಕೆ ಕೇಳಬೇಕು ಎಂದುಕೊಂಡು ಅಡುಗೆಗೆ ಬೇಕಾದ ಉಪ್ಪು, ತುಪ್ಪ, ಜೀರಿಗೆ, ಮಸಾಲೆ, ಅಕ್ಕಿ, ಮೆಣಸಿನಕಾಯಿ ಎಲ್ಲವನ್ನೂ ಗುಡಿಸಲಿನಲ್ಲಿ ತಂದಿಟ್ಟುಕೊಂಡ. ಇನ್ನು ಪಾರಿವಾಳವನ್ನು ಹೊಡೆಯುವುದಕ್ಕೆ ಒಂದು ದೊಣ್ಣೆಯನ್ನು ತಂದು, ಪಾರಿವಾಳಗಳಿಗೆ ಗೊತ್ತಾಗದಿರಲಿ ಎಂದು ಅದಕ್ಕೊಂದು ಬಟ್ಟೆ ಸುತ್ತಿ ಇಟ್ಟ. ಈಗ ಪಾರಿವಾಳಗಳು ಹತ್ತಿರ ಬರುವುದನ್ನು ಕಾಯತೊಡಗಿದ. ಇದನ್ನು ದೂರದ ಮರದ ಮೇಲೆ ಕುಳಿತಿದ್ದ ಬೋಧಿಸತ್ವ ನೋಡಿದ. ಎಲಾ, ಇವನು ಕುಟಿಲ ಸನ್ಯಾಸಿ, ಈತನಿಗೆ ಪಾರಿವಾಳಗಳ ಮಾಂಸ ತಿನ್ನುವ ಅಪೇಕ್ಷೆಯಾಗಿರಬೇಕು. ಈಗಾಗಲೇ ಅವನಿಗೆ ಅದನ್ನು ತಿಂದು ರುಚಿ ಹತ್ತಿರಬೇಕು. ಅದನ್ನು ಪರೀಕ್ಷಿಸುತ್ತೇನೆ ಎಂದುಕೊಂಡು ಸನ್ಯಾಸಿಯ ಮೈಮೇಲಿನಿಂದ ಬರುವ ಗಾಳಿಯ ವಾಸನೆ ತೆಗೆದುಕೊಂಡ. ಓಹೋ, ಇದು ನಮ್ಮ ಹಳ್ಳಿಯ ಜನ ಅವನಿಗೆ ಮಾಡಿ ಬಡಿಸಿದ ಪಾರಿವಾಳದ ಮಾಂಸದ ವಾಸನೆ. ನಾವಿನ್ನು ಇಲ್ಲಿರುವುದು ಕ್ಷೇಮವಲ್ಲ ಎಂದು ಎಲ್ಲ ಪಾರಿವಾಳಗಳನ್ನು ಕರೆದು ಅವುಗಳಿಗೆ ವಿಷಯ ತಿಳಿಸಿ ಆಶ್ರಮದ ಹತ್ತಿರ ಹೋಗದಂತೆ ತಾಕೀತು ಮಾಡಿದ. ಸನ್ಯಾಸಿಗೆ ಅವುಗಳ ನಡೆ ಆಶ್ಚರ್ಯವಾಗಿ ಒಳ್ಳೆಯ ಮಾತುಗಳಿಂದ ಅವುಗಳನ್ನು ಕರೆಯತೊಡಗಿದ. ಆಗ ಬೋಧಿಸತ್ವ, ‘ಏ ಕಪಟ ಸನ್ಯಾಸಿ, ನಾವು ಮೂರ್ಖರಲ್ಲ. ನೀನು ಸನ್ಯಾಸಿಯ ವೇಷವನ್ನು ಧರಿಸಿದ್ದೀಯಾ ಆದರೆ ಮನಸ್ಸಿನಲ್ಲಿ ಹಿಂಸೆ ಇದೆ. ಹೀಗೆ ಹಿಂಸೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು ಸನ್ಯಾಸದ ನಟನೆ ಮಾಡುವುದು ಪಾಪ. ನಾವು ನಿನ್ನ ಹತ್ತಿರ ಬರುವುದಿಲ್ಲ’ ಎಂದ. ಸನ್ಯಾಸಿ ಕೋಪಗೊಂಡು ದೊಣ್ಣೆಯನ್ನು ಬೀಸಿದ. ಅದು ಯಾವ ಪಕ್ಷಿಗೂ ತಾಗಲಿಲ್ಲ. ಕೆಲದಿನಗಳ ನಂತರ ಸನ್ಯಾಸಿ ಬೇಸತ್ತು ಆಶ್ರಮವನ್ನು ತೊರೆದು ದೂರ ಹೋಗಿಬಿಟ್ಟ.

ADVERTISEMENT

ಒಳಗಡೆಗೆ ಕೆಟ್ಟವಿಚಾರಗಳನ್ನು ತುಂಬಿಕೊಂಡು ಹೊರಗೆ ಸಂಭಾವಿತರಂತೆ ತೋರಿಕೆ ಮಾಡುವುದು ಆತ್ಮದ್ರೋಹವೂ ಹೌದು, ಸಮಾಜಕ್ಕೆ ಬಗೆದ ಅಪಚಾರವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.