ADVERTISEMENT

ಪಾಪ-ಪುಣ್ಯಗಳ ಚಕ್ರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 20:15 IST
Last Updated 11 ಸೆಪ್ಟೆಂಬರ್ 2019, 20:15 IST
   

ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲ|
ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ ||
ಅನ್ಯೋನ್ಯಜನಕಗಳು ಪಾಪಪುಣ್ಯಗಳಿಂತು|
ಧನ್ಯನುಭಯವ ಮೀರೆ – ಮಂಕುತಿಮ್ಮ || 183 ||

ಪದ-ಅರ್ಥ: ಖಿನ್ನನಾಗಿಪ=ಖಿನ್ನನಾಗಿಸುವ, ನಿರಾಸೆಯನ್ನು ತರುವ, ಪಾಪಫಲವಾತ್ಮಶುದ್ಧಿ=ಪಾಪಫಲ+ಆತ್ಮಶುದ್ಧಿ, ಅನ್ಯೋನ್ಯ ಜನಕಗಳು=ಒಂದರಿಂದ ಮತ್ತೊಂದರ ಹುಟ್ಟು, ಪಾಪಪುಣ್ಯಗಳಿಂತು=ಪಾಪಪುಣ್ಯ
ಗಳು+ಇಂತು, ಧನ್ಯನುಭಯವ= ಧನ್ಯನು+ಉಭಯವನ್ನು
ವಾಚ್ಯಾರ್ಥ: ಯಾವುದೋ ಪುಣ್ಯದಿಂದ ಬಂದ ಸಿರಿ ಮದ, ಮೋಹಗಳಿಗೆ ಮೂಲವಾಗುತ್ತದೆ. ಪಾಪದ ಫಲ ನಮ್ಮನ್ನು ಖಿನ್ನವಾಗಿಸಿ ಆತ್ಮಶುದ್ಧಿಯನ್ನು ಮಾಡುತ್ತದೆ. ಹೀಗೆ ಪಾಪ ಮತ್ತು ಪುಣ್ಯಗಳು ಒಂದಕ್ಕೊಂದು ಜನಕಗಳು. ಅವೆರಡನ್ನೂ ಮೀರಿದವನು ಧನ್ಯ.

ವಿವರಣೆ: ಪೂರ್ವಜನ್ಮದ ಪುಣ್ಯದಿಂದ ಹಿರಣ್ಯಕಶಿಪುವಿಗೆ ಅಸಾಮಾನ್ಯವಾದ ಶೌರ್ಯ, ಅಧಿಕಾರ ದೊರಕಿತು. ಆದರೆ ಅದರಿಂದ ಹುಟ್ಟಿದ್ದು ಮದ. ಚಕ್ರವರ್ತಿಯಾಗಿದ್ದ ಧೃತರಾಷ್ಟ್ರನಿಗೆ ಮಕ್ಕಳಿಲ್ಲವೆಂಬ ಕೊರಗು. ಅವನ ಹೆಂಡತಿ ಗಾಂಧಾರಿ ಗರ್ಭದಲ್ಲಿ ಮಗುವಿನೊಂದಿಗೆ ಅಸೂಯೆಯನ್ನು ಹೊತ್ತವಳು. ಹೊಟ್ಟೆಯನ್ನು ಕಿವುಚಿಕೊಂಡಾಗ ಉದುರಿದ್ದವು ಮಾಂಸದ ಮುದ್ದೆಗಳು. ವ್ಯಾಸರ ಕರುಣೆಯಿಂದ ಈ ಮುದ್ದೆಗಳು ನೂರೊಂದು ಮಕ್ಕಳಾದವು. ದಂಪತಿಗೆ ಸಂತೋಷದ ಮೇರೆ ಮೀರಿತು. ಮೋಹ ಮೈಮರೆಸಿತು. ಹುಟ್ಟಿನಿಂದಲೇ ಹೊರಗಿನ ಕಣ್ಣುಗಳನ್ನು ಕಳೆದುಕೊಂಡಿದ್ದ ಧೃತರಾಷ್ಟ್ರ, ಮರಗಟ್ಟಿಸುವ ಮೋಹದಲ್ಲಿ ಒಳಗಣ್ಣನ್ನು ಕಳೆದುಕೊಂಡು ಪ್ರಪಂಚದ ಇತಿಹಾಸ ಕಂಡರಿಯದ ಅನಾಹುತಕ್ಕೆ ಕಾರಣನಾದ. ಯಾವುದೋ ಪುಣ್ಯವಿಶೇಷದಿಂದ ಬಂದ ಸಿರಿ ಮದ ಹಾಗೂ ಮೋಹಕ್ಕೆ ಮೂಲವಾಯಿತು.

ADVERTISEMENT

ಈಗ ಮಾಡಿದ ಅಥವಾ ಹಿಂದೆಂದೋ ಮಾಡಿದ ಪಾಪದ ಫಲ ಮನುಷ್ಯನನ್ನು ಹಿಂಡಿಬಿಡುತ್ತದೆ, ಕಂಗಾಲು ಮಾಡಿಬಿಡುತ್ತದೆ. ಅಧಿಕಾರ ವಿದ್ದಾಗ ಅದೇ ಶಾಶ್ವತವೆಂದು ಮೆರೆದು ಅಬ್ಬರಿಸಿದ ವ್ಯಕ್ತಿಗೆ, ಸರಿಯಾದ ಸಮಯದಲ್ಲಿ, ಅವನು ಮಾಡಿದ ಫಲಕ್ಕೆ, ಶಿಕ್ಷೆಯಾಗಿ ಜೈಲು ಅನುಭವಿಸು
ವಂತಾದಾಗ ದೇಹ ಅಂಗುಷ್ಠ ಮಾತ್ರವಾಗುತ್ತದೆ, ಕಣ್ಣೀರು ಧಾರೆ ಇಳಿಯುತ್ತದೆ, ತಾನು ಅಂತಹ ತಪ್ಪು ಮಾಡಬಾರದಿತ್ತು ಎಂದು ಪಶ್ಚಾತ್ತಾಪ ಮೂಡುತ್ತದೆ. ಪ್ರತಿಯೊಂದು ಪಾಪಕ್ಕೆ ದೊರೆತ ಶಿಕ್ಷೆ ಆತ್ಮಶುದ್ಧಿಯನ್ನುಂಟುಮಾಡುತ್ತದೆ. ಹೀಗೆ ಪುಣ್ಯದಿಂದ ಸಿರಿ, ಸಿರಿಯಿಂದ ಮದ, ಮೋಹಗಳು, ಅವುಗಳಿಂದಾಗಿ ಪಾಪ ಮತ್ತು ಅದರಿಂದ ಅತ್ಮಶುದ್ಧಿ, ಆತ್ಮಶುದ್ಧಿಯಿಂದ ಪುಣ್ಯ. ಅದಕ್ಕೇ ಕಗ್ಗ ಹೇಳುತ್ತದೆ - ಪುಣ್ಯಪಾಪಗಳು ಅನ್ಯೋನ್ಯಜನಕಗಳು – ಎಂದರೆ ಒಂದರಿಂದ ಮತ್ತೊಂದರ ಹುಟ್ಟು.

ಹಾಗಾದರೆ ಈ ಚಕ್ರದಿಂದ ಮುಕ್ತಿಯನ್ನು ಪಡೆಯುವ ಬಗೆ ಯಾವುದು ? ಈ ಪಾಪಪುಣ್ಯಗಳ ಚಕ್ರವನ್ನು ಮೀರಿದವನೇ ಧನ್ಯ ಎನ್ನುತ್ತದೆ ಕಗ್ಗ. ಅದಕ್ಕೊಂದೇ ಹಾದಿ. ಸಿರಿ ಬಂದಾಗ, ಇದು ಭಗವಂತನ ಕೃಪೆಯಿಂದ ಬಂದದ್ದು, ಇದು ಅವನ ಭಿಕ್ಷೆ ಎಂದುಕೊಂಡರೆ ತನ್ನ ಅಹಂಕಾರಕ್ಕೆ ಒಂದು ಮಿತಿಯನ್ನು ಹಾಕಿಕೊಂಡಂತೆ. ಅಂತೆಯೇ ಜೀವನದಲ್ಲಿ ಪರೀಕ್ಷಾಕಾಲ ಬಂದು ನರಳುವಂತಾದಾಗ ಇದೂ ಕೂಡ ಭಗವಂತ ನಮ್ಮನ್ನು ಶುದ್ಧೀಕರಿಸುವುದಕ್ಕೆ ಮಾಡಿದ ಪ್ರಯೋಗ ಎಂದು ಭಾವಿಸಿದರೆ ಖಿನ್ನತೆ ತಪ್ಪುತ್ತದೆ, ಮನಸ್ಸಿನ ದುಃಖ ಅಳತೆ ಮೀರುವುದಿಲ್ಲ. ಇದು ಹೇಳಿದಷ್ಟು ಸುಲಭವಲ್ಲ. ಆದರೆ ಆ ದಿಶೆಯಲ್ಲಿ ಪ್ರಯತ್ನ ಪ್ರಯೋಜನಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.