ADVERTISEMENT

ಕೆಟ್ಟ ಕಾರ್ಯಗಳ ಫಲ

ಡಾ. ಗುರುರಾಜ ಕರಜಗಿ
Published 8 ಡಿಸೆಂಬರ್ 2019, 19:30 IST
Last Updated 8 ಡಿಸೆಂಬರ್ 2019, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಪ್ರಸಿದ್ಧ ಆಚಾರ್ಯನಾಗಿದ್ದ. ಆತ ತಕ್ಕಶಿಲೆಯಲ್ಲಿ ಸಕಲ ವಿದ್ಯೆಗಳನ್ನು ಕಲಿತು ತುಂಬ ಖ್ಯಾತಿಯನ್ನು ಪಡೆದಿದ್ದ. ತಕ್ಕಶಿಲೆಯಲ್ಲಿದ್ದ ಅವನ ಆಶ್ರಮಕ್ಕೆ ಪ್ರಪಂಚದ ಎಲ್ಲ ಕಡೆಯಿಂದ ರಾಜಕುಮಾರರು ವಿದ್ಯೆ ಕಲಿಯಲು ಬರುತ್ತಿದ್ದರು. ಅವರಲ್ಲಿ ವಾರಾಣಸಿಯ ರಾಜಕುಮಾರ ಬ್ರಹ್ಮದತ್ತ ಕುಮಾರನೂ ಒಬ್ಬ. ಅವನು ವಿದ್ಯೆಯನ್ನು ಚೆನ್ನಾಗಿ ಕಲಿತ. ಆದರೆ ಸ್ವಭಾವತಃ ಆತ ಕೋಪಿಷ್ಠ ಕಠೋರ ಹಾಗೂ ದ್ವೇಷಿ. ಅವನು ಕಲಿಯುವಾಗಲೇ ಅವನ ಗುಣಗಳನ್ನು ಗುರು ಬೋಧಿಸತ್ವ ಗಮನಿಸಿದ್ದ. ನಂತರ ಕಲಿತು ಮನೆಗೆ ಹೋಗುವಾಗ ಉಪದೇಶವನ್ನು ನೀಡಿದ್ದ, ‘ಬ್ರಹ್ಮದತ್ತಕುಮಾರ, ನೀನು ಸಶಕ್ತ. ಆದರೆ ನಿನ್ನ ಗುಣಗಳನ್ನು ತಿದ್ದಿಕೋ. ಯಾಕೆಂದರೆ ನೀನು ಶುಭಕಾರ್ಯಗಳನ್ನು ಮಾಡಿದರೆ ಒಳ್ಳೆಯ ಫಲಗಳನ್ನೇ ಪಡೆಯುತ್ತೀಯ. ಕೆಟ್ಟಕಾರ್ಯಗಳನ್ನು ಮಾಡಿದರೆ ಕೆಟ್ಟ ಫಲವೇ ದೊರೆಯುತ್ತದೆ. ಇದನ್ನು ಮರೆಯಬೇಡ’.

ಆಚಾರ್ಯರ ಮಾತಿಗೆ ತಲೆ ಅಲ್ಲಾಡಿಸಿ ರಾಜಕುಮಾರ ಹೊರಟ. ತನ್ನ ರಾಜ್ಯಕ್ಕೆ ಬಂದು ಯುವರಾಜನಾಗಿ, ಆಮೇಲೆ ತಂದೆಯ ನಿಧನದ ನಂತರ ತಾನೇ ರಾಜನಾದ. ಅವನಿಗೊಬ್ಬ ಪುರೋಹಿತ. ಅವನೂ ಕೋಪಿಷ್ಠ, ಸ್ವಾರ್ಥಿ ಮತ್ತು ಪರಪೀಡಕ. ಆತ ನಿತ್ಯವೂ ರಾಜನಿಗೆ ಕೆಟ್ಟ ವಿಚಾರಗಳನ್ನು ಬೋಧನೆ ಮಾಡತೊಡಗಿದ. ‘ಸ್ವಾಮೀ, ನಿಮಗಿರುವ ಜ್ಞಾನ, ಕಾರ್ಯ ಮತ್ತು ಕೌಶಲಕ್ಕೆ ಈ ದೇಶವೊಂದೇ ಸಾಲದು. ನೀವು ಜಂಬೂ ದ್ವೀಪದ ಎಲ್ಲ ರಾಜರನ್ನು ಸೋಲಿಸಿ ಏಕಚಕ್ರಾಧಿಪತಿಯಾಗಬೇಕು. ಆಗ ಪ್ರಪಂಚದ ಶ್ರೀಮಂತಿಕೆ ಎಲ್ಲವೂ ನಿಮ್ಮದಾಗುತ್ತದೆ’ ಎಂದು ಸತತವಾಗಿ ಹೇಳಿದಾಗ ಬ್ರಹ್ಮದತ್ತಕುಮಾರನಿಗೆ ಅದು ಸರಿ ಎನ್ನಿಸಿತು. ನಂತರ ಪುರೋಹಿತನ ಕುಟಿಲ ನೀತಿಯನ್ನು ಅನುಸರಿಸಿ, ತನ್ನ ಅಪಾರ ಸೈನ್ಯವನ್ನು ತೆಗೆದುಕೊಂಡು ಒಂದೊಂದೇ ದೇಶಗಳನ್ನು ಗೆಲ್ಲುತ್ತ ಬಂದ. ಕೊನೆಗೆ ಸಾವಿರ ಜನ ರಾಜರನ್ನು ತನ್ನೊಡನೆ ಕರೆದುಕೊಂಡು ಕೊನೆಯ ದೇಶವಾದ ತಕ್ಕಶಿಲೆಯನ್ನು ಗೆಲ್ಲಲೆಂದು ಬಂದ. ಅಲ್ಲಿಯ ರಾಜ ಬೋಧಿಸತ್ವನ ಮಾರ್ಗದರ್ಶನದಲ್ಲಿ ಸೈನ್ಯವನ್ನು ಬಲಪಡಿಸಿ ಕೋಟೆಗಳನ್ನು ಭದ್ರಮಾಡಿದ.

ತಕ್ಕಶಿಲೆ ತನಗೆ ವಶವಾಗದಿದ್ದಾಗ ಚಿಂತೆಯಲ್ಲಿ ಕುಳಿತ ರಾಜನಿಗೆ ಪುರೋಹಿತ ಮತ್ತೊಂದು ಉಪದೇಶ ಮಾಡಿದ, ‘ಮಹಾರಾಜಾ, ಈ ಸಾವಿರ ರಾಜರ ಕಣ್ಣುಗಳನ್ನು ಕೀಳಿಸಿ ಕೊಂದು ಅವರ ಮಾಂಸವನ್ನು ತಕ್ಕಶಿಲೆಯ ಮುಂದಿರುವ ಆಲದ ಮರಕ್ಕೆ ಬಲಿಕೊಟ್ಟರೆ ಈ ದೇಶ ನಮ್ಮ ಕೈಗೆ ಸುಲಭವಾಗಿ ಸಿಗುತ್ತದೆ’ ಎಂದ. ಇದುವರೆಗೂ ಅವನ ಮಾತುಗಳನ್ನೇ ನಂಬಿದ ರಾಜ ಅವನು ಹೇಳಿದಂತೆಯೇ ರಾಜರುಗಳ ಕಣ್ಣು ಕೀಳಿಸಿ ಅವರನ್ನು ಕೊಲ್ಲಿಸಿದ. ದೈವ ಈ ಅನಾಚಾರವನ್ನು ಹೇಗೆ ಸಹಿಸೀತು? ಆಗ ಒಬ್ಬ ಯಕ್ಷ ಹದ್ದಿನ ರೂಪದಲ್ಲಿ ಬಂದು ಬ್ರಹ್ಮದತ್ತಕುಮಾರನ ಬಲಗಣ್ಣನ್ನು ಕುಕ್ಕಿ ಕಿತ್ತುಬಿಟ್ಟ. ಈತ ಹಾ ಎಂದು ನೋವಿನಿಂದ ಕೂಗುತ್ತ ಮೇಲೆ ಮುಖ ಮಾಡಿದಾಗ ಮರದ ಮೇಲಿದ್ದ ಮತ್ತೊಂದು ಹದ್ದು ತನ್ನ ಬಾಯಲ್ಲಿ ಹಿಡಿದಿದ್ದ ಎಲುಬನ್ನು ಬೀಳಿಸಿತು. ಆ ಚೂಪಾದ ಎಲುಬು ರಾಜನ ಎಡಕಣ್ಣಿನ ಮೇಲೆ ಬಿದ್ದು ಆ ಕಣ್ಣೂ ಹೊರಟುಹೋಯಿತು. ಆಗ ರಾಜನಿಗೆ ತನ್ನ ಅಚಾರ್ಯ ಹೇಳಿದ ಮಾತು ನೆನಪಾಯಿತು. ‘ಶುಭಕಾರ್ಯ ಶುಭಫಲಗಳನ್ನೇ ಕೊಡುತ್ತದೆ, ಕೆಟ್ಟ ಕಾರ್ಯ ಕೆಟ್ಟ ಫಲಗಳನ್ನೇ ನೀಡುತ್ತದೆ’. ಈಗ ತಾನು ಪಡೆದದ್ದು ತನ್ನ ಕೆಟ್ಟ ಕಾರ್ಯಗಳ ಫಲ ಎಂದು ಅಳುತ್ತಲೇ ಪ್ರಾಣಬಿಟ್ಟ.

ADVERTISEMENT

ನಮಗೆಲ್ಲ ಈ ಬುದ್ಧಿಮಾತು ತಿಳಿದಿದೆ. ಆದರೂ ಸಣ್ಣ ಸಣ್ಣ ಆಸೆಗಳಿಗಾಗಿ ತಪ್ಪು ಕೆಲಸಗಳನ್ನು ಅವಸರದಲ್ಲಿ ಮಾಡಿ ವಿರಾಮದಲ್ಲಿ ಗೋಳಾಡುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.